
ಇಸ್ಲಾಮಾಬಾದ್, ಡಿಸೆಂಬರ್ 20: ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಹಾಗೂ ಪತ್ನಿ ಬುಶ್ರಾ ಬೀಬಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪಾಕ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.ಖಾನ್ ಮತ್ತು ಬುಶ್ರಾ ಅವರಿಗೆ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
2023ರಲ್ಲಿ ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ನ್ಯಾಯಾಲಯವು 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅದಕ್ಕೂ ಮುನ್ನ ಸೋರಿಕೆಯಾದ ದಾಖಲೆಗೆ ಸಂಬಂಧಿಸಿದ ವಿವಾದಾತ್ಮಕ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಸೈಫರ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರಿಗೆ ತಲಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 1974 ರಲ್ಲಿ ಸ್ಥಾಪಿತವಾದ ತೋಷಖಾನಾವು ಕ್ಯಾಬಿನೆಟ್ ವಿಭಾಗದ ಆಡಳಿತ ನಿಯಂತ್ರಣದಲ್ಲಿರುವ ಒಂದು ಇಲಾಖೆಯಾಗಿದೆ ಮತ್ತು ಇತರ ಸರ್ಕಾರಗಳು ಮತ್ತು ರಾಜ್ಯಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರು ಆಡಳಿತಗಾರರು, ಸಂಸದರು, ಅಧಿಕಾರಿಗಳು ಮತ್ತು ಅಧಿಕಾರಿಗಳಿಗೆ ನೀಡಿದ ಅಮೂಲ್ಯ ಉಡುಗೊರೆಗಳನ್ನು ಸಂಗ್ರಹಿಸುತ್ತದೆ.
ಮತ್ತಷ್ಟು ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ 3 ವರ್ಷ ಜೈಲುಶಿಕ್ಷೆ, 5 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ: ಕೋರ್ಟ್ ಆದೇಶ
ಅಲ್ಲಿ ಉಡುಗೊರೆಯಾಗಿ ಬಂದ ಆಸ್ತಿಗಳನ್ನು ಇಮ್ರಾನ್ ತಾವೇ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತೋಷಖಾನಾವು ಕ್ಯಾಬಿನೆಟ್ ವಿಭಾಗದ ಅಡಿಯಲ್ಲಿ ಬರುವ ಒಂದು ಇಲಾಖೆ,, ಇದು ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಇತರ ಸರ್ಕಾರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ಸಂಗ್ರಹಿಸುತ್ತದೆ. ಖಾನ್ ಅವರು ಬೆಲೆಬಾಳುವ ವಾಚ್ ಸೇರಿದಂತೆ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಅವುಗಳನ್ನು ಲಾಭಕ್ಕಾಗಿ ಮಾರಾಟ ಮಾಡಿದ್ದರು ಎಂಬುದು ಆರೋಪವಾಗಿದೆ.
ಇಮ್ರಾನ್ ಖಾನ್ ತೋಷಖಾನಾದಿಂದ ಉಳಿಸಿಕೊಂಡ ಉಡುಗೊರೆಗಳ ವಿವರಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂದು ಇಸಿಪಿ ಸಲ್ಲಿಸಿದ ಕ್ರಿಮಿನಲ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಕಳೆದ ವರ್ಷ ತೋಷಖಾನಾ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ವಿರುದ್ಧ ಪಾಕಿಸ್ತಾನದ ನ್ಯಾಯಾಲಯ ಆರೋಪ ಹೊರಿಸಿತ್ತು. ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ನಡೆದ ವಿಚಾರಣೆ ವೇಳೆ, ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಾರುಕ್ ಅರ್ಜುಮಂದ್ ಅವರು ಈ ಇಬ್ಬರ ವಿರುದ್ಧ ಆರೋಪ ಹೊರಿಸಿದ್ದರು.
ವಿದೇಶಿ ಗಣ್ಯರು ನೀಡಿದ್ದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ, ಭ್ರಷ್ಟಾಚಾರ ಎಸಗಿದ ಆರೋಪವನ್ನು ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿ ಎದುರಿಸುತ್ತಿದ್ದಾರೆ. ಇದನ್ನು ತೋಷಖಾನಾ ಪ್ರಕರಣ ಎಂದೇ ಕರೆಯಲಾಗುತ್ತದೆ.
2021ರ ಮೇ ತಿಂಗಳಲ್ಲಿ ಆಗ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರು ಸೌದಿ ಆರೇಬಿಯಕ್ಕೆ ಭೇಟಿ ನೀಡಿದ ಸಂದರ್ಭ ತಮಗೆ ಉಡುಗೊರೆಯಾಗಿ ನೀಡಿದ್ದ ಬುಲ್ಗಾರಿ ಆಭರಣವನ್ನು ಅಕ್ರಮವಾಗಿ ತಮ್ಮಲ್ಲಿಯೇ ಉಳಿಸಿಕೊಂಡಿದ್ದರು. ಒಂದು ರಿಂಗ್, ಬ್ರೇಸ್‌ಲೆಟ್, ಕತ್ತಿನ ಸರ ಹಾಗೂ ಒಂದು ಜೋಡಿ ಕಿವಿಯೋಲೆಗಳನ್ನು ಈ ಆಭರಣದ ಸೆಟ್ ಒಳಗೊಡಿದ್ದು, ಅವುಗಳ ಒಟ್ಟು ಮೌಲ್ಯ 7.50 ಕೋಟ ಪಾಕಿಸ್ತಾನಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಆದರೆ ದಂಪತಿಯು ಆಭರಣದ ಸೆಟ್‌ನ ಮೌಲ್ಯವನ್ನು ತೀರಾ ಕಡಿಮೆಗೊಳಿಸಿ, ತಮ್ಮ ವಶದಲ್ಲಿ ಇರಿಸಿದ್ದರಿಂದ ಪಾಕಿಸ್ತಾನದ ಬೊಕ್ಕಸಕ್ಕೆ 3.29 ಕೋಟಿ ರೂ.ನಷ್ಟವಾಗಿತ್ತು. 2022ರ ಎಪ್ರಿಲ್‌ನಲ್ಲಿ ಇಮ್ರಾನ್‌ಖಾನ್ ಸರಕಾರವನ್ನು ಅವಿಶ್ವಾಸ ಮತದ ಮೂಲಕ ಪತನಗೊಳಿಸಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Sat, 20 December 25