ಕರಾಚಿ: ಕಳೆದ ವಾರ ಕರಾಚಿಯಲ್ಲಿ ಪತನವಾಗಿದ್ದ ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನದ ಅವಶೇಷಗಳಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಗಿದೆ. ಸುಮಾರು 30 ದಶಲಕ್ಷ ರೂ. ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ವಿಮಾನ ಪತನದ ಬಗ್ಗೆ ತನಿಖೆ ನಡೆಯುತ್ತಿರುವಾಗ ವಿವಿಧ ದೇಶಗಳಿಗೆ ಸಂಬಂಧಿಸಿದ ನಗದು ಪತ್ತೆಯಾಗಿದ್ದು, ಸದ್ಯ ಕರೆನ್ಸಿಯನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾಚಿ ಏರ್ಪೋರ್ಟ್ ಬಳಿ ಲ್ಯಾಂಡಿಂಗ್ ಮಾಡಲು ಒಂದೆರಡು ನಿಮಿಷ ಇರುವಾಗ ತಾಂತ್ರಿಕ ದೋಷದಿಂದ ವಿಮಾನ ಪತನವಾಗಿತ್ತು. ವಿಮಾನ ವಸತಿ ಪ್ರದೇಶದಲ್ಲಿ, ಮನೆಗಳ ಮೇಲೆ ಬಿದ್ದು 97 ಜನರು ಸಾವಿಗೀಡಾಗಿದ್ದರು.
ಒಟ್ಟು ವಿಮಾನದಲ್ಲಿ 99 ಪ್ರಯಾಣಿಕರಿದ್ದು, ಇಬ್ಬರು ಮಾತ್ರ ಬದುಕುಳಿದರು. PK-8303 ವಿಮಾನದಲ್ಲಿ ಐದು ಸಿಬ್ಬಂದಿಯ ಜೊತೆಗೆ 51 ಮಂದಿ ಪುರುಷರು, 31 ಮಹಿಳೆಯರು ಮತ್ತು 9 ಮಕ್ಕಳು ಪ್ರಯಾಣಿಸಿದ್ದರು.