ದೆಹಲಿ ನವೆಂಬರ್ 24: ಗೂಢಚಾರಿಕೆ (spying) ಆರೋಪದ ಮೇಲೆ ಬಂಧನಕ್ಕೊಳಗಾದ ಎಂಟು ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಯ ಮರಣದಂಡನೆ ವಿರುದ್ಧ ನರೇಂದ್ರ ಮೋದಿ ಸರ್ಕಾರ (Narendra Modi) ಸಲ್ಲಿಸಿದ್ದ ಮೇಲ್ಮನವಿಯನ್ನು ಕತಾರ್ ನ್ಯಾಯಾಲಯವು (Qatar court) ಸ್ವೀಕರಿಸಿದೆ. ನಿರ್ದಿಷ್ಟ ಸಮಯವನ್ನು ನೀಡದೆ ಶೀಘ್ರದಲ್ಲೇ ಅವರ ಮನವಿಯನ್ನು ಆಲಿಸಲು ಒಪ್ಪಿಕೊಂಡಿದೆ ಎಂದು ಮಾಧ್ಯಮ ವರದಿ ಮಾಡಿದೆ. ಭಾರತೀಯ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಗೆ ಪ್ರಕರಣವೊಂದರಲ್ಲಿ ಕತಾರ್‌ನ ಪ್ರಥಮ ನಿದರ್ಶನ ನ್ಯಾಯಾಲಯವು ಮರಣದಂಡನೆ ವಿಧಿಸಿದ ಒಂದು ತಿಂಗಳ ನಂತರ ಬಂದಿದೆ.
ಮನವಿಯನ್ನು ಸ್ವೀಕರಿಸಿದ ಬಗ್ಗೆ ದಿ ಕ್ವಿಂಟ್ ವರದಿ ಮಾಡಿದ್ದು ನೌಕಾಪಡೆಯ ಮಾಜಿ ಸಿಬ್ಬಂದಿಗಳ ಕುಟುಂಬಗಳಿಗೆ ಹತ್ತಿರವಿರುವ ಮೂಲಗಳು ತಿಳಿಸಿರುವುದಾಗಿ ಸುದ್ದಿಯಲ್ಲಿ ಉಲ್ಲೇಖಿಸಿದೆ. ಮಾರ್ಚ್ 25 ರಂದು ಎಂಟು ಭಾರತೀಯ ನೌಕಾಪಡೆಯ ಅನುಭವಿಗಳ ವಿರುದ್ಧ ಆರೋಪಗಳನ್ನು ದಾಖಲಿಸಿ ಅವರನ್ನು ಕತಾರಿ ಕಾನೂನಿನ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಆದರೆ ಸ್ಥಳೀಯ ನ್ಯಾಯಾಲಯವು ಮರಣದಂಡನೆಯನ್ನು ಘೋಷಿಸಿದ ನಂತರ ಅಕ್ಟೋಬರ್ 26 ರಂದು ಪರಿಸ್ಥಿತಿಯು ಹದಗೆಟ್ಟಿತು.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತೀರ್ಪನ್ನು ಆಘಾತಕಾರಿ ಎಂದು ವಿವರಿಸಿದೆ ಮತ್ತು ಪ್ರಕರಣದಲ್ಲಿ ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುವುದಾಗಿ ಹೇಳಿದೆ. ಅಲ್ ದಹ್ರಾ ಕಂಪನಿಯ ಎಂಟು ಭಾರತೀಯ ಉದ್ಯೋಗಿಗಳನ್ನು ಒಳಗೊಂಡ ಪ್ರಕರಣದಲ್ಲಿ ಕತಾರ್‌ನ ಪ್ರಥಮ ನಿದರ್ಶನದ ನ್ಯಾಯಾಲಯವು ಇಂದು ತೀರ್ಪು ನೀಡಿದೆ ಎಂದು ನಮಗೆ ಪ್ರಾಥಮಿಕ ಮಾಹಿತಿ ಇದೆ. ಮರಣದಂಡನೆಯ ತೀರ್ಪಿನಿಂದ ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ. ವಿವರವಾದ ತೀರ್ಪಿಗಾಗಿ ಕಾಯುತ್ತಿದ್ದೇವೆ. ನಾವು ಕುಟುಂಬ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ನಾವು ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ ಎಂದು MEA ಹೇಳಿಕೆಯಲ್ಲಿ ತಿಳಿಸಿತ್ತು.
ಬಂಧಿತ ಭಾರತೀಯರನ್ನು ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಎಂದು ಗುರುತಿಸಲಾಗಿದೆ .ಎಲ್ಲರೂ ಭಾರತೀಯ ನೌಕಾಪಡೆಯ ಮಾಜಿ ಉದ್ಯೋಗಿಗಳಾಗಿದ್ದಾರೆ.
ಎಂಟು ಜನರನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕಾಂಗ್ರೆಸ್, ಸರ್ಕಾರವನ್ನು ಒತ್ತಾಯಿಸಿದೆ. ಸರ್ಕಾರವು ಕತಾರ್ ಸರ್ಕಾರದೊಂದಿಗೆ ತನ್ನ ರಾಜತಾಂತ್ರಿಕ ಮತ್ತು ರಾಜಕೀಯ ಹತೋಟಿಯನ್ನು ಗರಿಷ್ಠವಾಗಿ ಬಳಸುತ್ತದೆ ಎಂದು ತಮ್ಮ ಪಕ್ಷ ನಿರೀಕ್ಷಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಇದನ್ನೂ ಓದಿ: ಕತಾರ್ ಜೈಲಿನಲ್ಲಿರುವ ಮಾಜಿ ನೌಕಾಪಡೆಯ ಸಿಬ್ಬಂದಿಗಳನ್ನು ಬಂಧಮುಕ್ತಗೊಳಿಸಲು ಭಾರತ ಮನವಿ
ಭಾರತೀಯ ಪ್ರಜೆಗಳಾದ ದೋಹಾ ಮೂಲದ ದಹ್ರಾ ಗ್ಲೋಬಲ್‌ನ ಎಲ್ಲಾ ಉದ್ಯೋಗಿಗಳನ್ನು ಆಗಸ್ಟ್ 2022 ರಲ್ಲಿ ಬಂಧಿಸಲಾಯಿತು.
ಕಳೆದ ವರ್ಷ ಅವರ ಬಂಧನದ ನಂತರ, ಮಾಜಿ ನೌಕಾಪಡೆಯ ಸಿಬ್ಬಂದಿ ಕತಾರಿ ಅಧಿಕಾರಿಗಳಿಂದ ಸ್ವಲ್ಪ ಸಡಿಲಿಕೆ ಪಡೆದಿದ್ದು, ಅವರನ್ನು ಏಕಾಂತ ಬಂಧನದಿಂದ ಸ್ಥಳಾಂತರಿಸಲಾಯಿತು ಮತ್ತು ಅವರ ಸಹೋದ್ಯೋಗಿಗಳೊಂದಿಗೆ ಜೈಲು ವಾರ್ಡ್‌ನಲ್ಲಿ ಡಬಲ್ ಬೆಡ್‌ನಲ್ಲಿ ಇರಿಸಲಾಯಿತು.
ಕತಾರ್‌ನಲ್ಲಿ ನ್ಯಾಯಾಲಯ ಪ್ರಕ್ರಿಯೆ ಮೂರು ಹಂತಗಳಲ್ಲಿದೆ. ಕೆಳ ನ್ಯಾಯಾಲಯದ ತೀರ್ಪನ್ನು ಪ್ರಸ್ತುತ ಮೇಲ್ಮನವಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಇಲ್ಲಿಯೂ ಪರಿಹಾರ ಸಿಗದಿದ್ದರೆ, ಕತಾರ್‌ನ ಸುಪ್ರೀಂ ಕೋರ್ಟ್‌ನಲ್ಲಿಯೂ ಮೇಲ್ಮನವಿ ಸಲ್ಲಿಸಬಹುದು. ನ್ಯಾಯಾಲಯದ ಪ್ರಕ್ರಿಯೆಯ ನಂತರ ಯಾವುದೇ ಖೈದಿಯ ಶಿಕ್ಷೆಯನ್ನು ಕ್ಷಮಿಸುವ ಹಕ್ಕನ್ನು ಕತಾರ್ ಎಮಿರ್ (ಕತಾರ್ ದೊರೆ) ಹೊಂದಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ