ರೋಮಾನಿಯಾ: ಈಗಂತೂ ಎಲ್ಲೆಲ್ಲೂ ಕ್ರಿಸ್ಮಸ್ ಸಂಭ್ರಮ. ಕೊರೊನಾ ಛಾಯೆಯ ಮಧ್ಯೆಯೂ ಸಂಭ್ರಮಕ್ಕೇನೂ ಕೊರತೆಯಿಲ್ಲ. ಅನೇಕರು ಸಾಂತಾ ಕ್ಲಾಸ್ (Santa Claus) ವೇಷದೊಂದಿಗೆ ಮಕ್ಕಳನ್ನು ರಂಜಿಸುತ್ತಿದ್ದಾರೆ.. ಕೇಕ್ ತಯಾರಿ, ಮರಗಳ ಅಲಂಕಾರವೆಲ್ಲ ಭರ್ಜರಿಯಾಗಿ ನಡೆಯುತ್ತಿದೆ.
ಅದರಲ್ಲೂ ಪ್ರಮುಖವಾಗಿ ರೋಮಾನಿಯನ್ ನರ್ಸ್ ಅಯೋನಟ್ ಇವಾನ್ ಬಗ್ಗೆ ಇಲ್ಲಿ ಹೇಳಲೇಬೇಕು. ಇವರು ಕಳೆದ 9 ತಿಂಗಳಿಂದಲೂ ಕೊರೊನಾ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಇಷ್ಟಾದರೂ ಸ್ವಲ್ಪವೂ ಉತ್ಸಾಹ ಕಳೆದುಕೊಳ್ಳದೆ ಇದೀಗ ಸಂತ ಕ್ಲಾಸ್ ವೇಷದೊಂದಿಗೆ ಕೊರೊನಾ ರೋಗಿಗಳಲ್ಲೂ ಸಂಭ್ರಮ ಮೂಡಿಸುತ್ತಿದ್ದಾರೆ. ಬುಚಾರೆಸ್ಟ್‌ನ ಮಾರಿಯಸ್ ನಾಸ್ತಾ ವೈದ್ಯಕೀಯ ಇನ್ಸ್ಸ್ಟಿಟ್ಯೂಟ್ನಲ್ಲಿ ಇವರು ನರ್ಸ್ ಆಗಿದ್ದು, ಸದ್ಯ ಇಲ್ಲಿ ದಾಖಲಾಗಿರುವ 100ಕ್ಕೂ ಹೆಚ್ಚು ಕೊರೊನಾ ರೋಗಿಗಳಿಗೆ ಸಿಹಿತಿಂಡಿಗಳು, ಹಣ್ಣುಗಳನ್ನು ಹಂಚುತ್ತಿದ್ದಾರೆ.
ಇಷ್ಟು ದಿನ ನೀಲಿ ಬಣ್ಣದ ಪಿಪಿಇ ಕಿಟ್ ಧರಿಸಿ ರೋಗಿಗಳ ಆರೈಕೆ ಮಾಡುತ್ತಿದ್ದ ಅಯೋನಟ್, ಕ್ರಿಸ್ಮಸ್ ಸಮೀಪಿಸುತ್ತಿದ್ದಂತೆ ಕೆಂಪುಬಣ್ಣದ ರಕ್ಷಣಾ ಬಟ್ಟೆ ಧರಿಸಿ, ಬಿಳಿ ಗಡ್ಡ ಅಂಟಿಸಿಕೊಂಡು, ಮಾಸ್ಕ್, ಫೇಸ್ಶೀಲ್ಡ್ ಹಾಕಿಕೊಂಡು, ರೋಗಿಗಳಿಗೆ ಹಣ್ಣು, ಬ್ರೆಡ್ ಹಂಚುತ್ತಿದ್ದಾರೆ. ಅಚ್ಚರಿಯ ಉಡುಗೋರೆಗಳನ್ನು ನೀಡುತ್ತಿದ್ದಾರೆ.
ಪ್ರತಿ ರೋಗಿಗಳ ಬಳಿಯೂ ಹೋಗುತ್ತ, ಹೋ ಹೋ ಹೋ ಸಂತ ಉಡುಗೋರೆಗಳೊಂದಿಗೆ ಬರುತ್ತಿದ್ದಾರೆ..ನಿಮಗೆ ದೇವರು ಆರೋಗ್ಯ ಕರುಣಿಸಲಿ ಎಂದು ಹೇಳುತ್ತಿದ್ದಾರೆ. ಇದರಿಂದ ರೋಗಿಗಳೂ ಕೂಡ ಸಂತುಷ್ಟರಾಗಿ, ಅವರು ಕೊಡುವ ಉಡುಗೊರೆ, ಹಣ್ಣುಗಳನ್ನು ಸ್ವೀಕರಿಸುತ್ತಿದ್ದಾರೆ. ಅಯೋನಟ್ರಿಂದಾಗಿ ನಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತಿದೆ ಎನ್ನುತ್ತಿದ್ದಾರೆ.
ರೊಮಾನಿಯಾದಲ್ಲಿ ಇಲ್ಲಿಯವರೆಗೆ 6,04,251ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 14,766ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಕೊರೊನಾ ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಹೇಗಾದರೂ ಜೀವ ಉಳಿದರೆ ಸಾಕು ಎನ್ನುತ್ತಿದ್ದಾರೆ.
ಪ್ಲಾಸ್ಟಿಕ್ ಬಬಲ್ನೊಳಗೆ ಸಂತ ಬಂಧಿ
ಇನ್ನು ಪೆರು ದೇಶದ ರಾಜಧಾನಿ ಲಿಮಾದಲ್ಲಿ ಸಂತ ಕ್ಲಾಸ್ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಕೊವಿಡ್-19 ಸಾಂಕ್ರಾಮಿಕ ಕಾರಣದಿಂದ ಮಕ್ಕಳನ್ನು ನೇರವಾಗಿ ಭೇಟಿಯಾಗುತ್ತಿಲ್ಲ. ಬದಲಿಗೆ ಒಂದು ಅಲಂಕೃತ ಪ್ಲಾಸ್ಟಿಕ್ ಗೂಡಿನೊಳಗೆ ಕುಳಿತಿದ್ದಾರೆ. ಮಕ್ಕಳು ತಮ್ಮ ಪಾಲಕರೊಂದಿಗೆ ಒಬ್ಬೊಬ್ಬರಾಗಿ ಬಂದು, ಸಂತಾ ಬಳಿ ಮಾತನಾಡಿ, ಉಡುಗೊರೆ ಸ್ವೀಕರಿಸುತ್ತಿದ್ದಾರೆ. ಮಾಸ್ಕ್ನ್ನು ಎಲ್ಲರೂ ಧರಿಸಿದ್ದು, ಸಂತಾ ಬಳಿ ಹೋಗುವಾಗ ಸ್ಯಾನಿಟೈಸರ್ ಕೂಡ ಹಾಕಿಕೊಳ್ಳುತ್ತಿದ್ದಾರೆ. ಮಕ್ಕಳು ತಮ್ಮ ಕೈಗಳನ್ನು ಪ್ಲಾಸ್ಟಿಕ್ ಶೀಟ್ನ ಈ ಬದಿಯಲ್ಲಿ ಇಟ್ಟರೆ, ಸಂತಾ ಆ ಬದಿಗೆ ಕೈಯಿಟ್ಟು ವಿಶ್ ಮಾಡುತ್ತಿದ್ದಾರೆ.