
ರಿಯಾದ್, ಸೆಪ್ಟೆಂಬರ್ 15: ಸೌದಿ ಅರೇಬಿಯಾದ ಮದೀನಾ ಪ್ರಾಂತ್ಯದಲ್ಲಿ ಬರೋಬ್ಬರಿ 11 ಕೋಟಿ ಟನ್‌ನಷ್ಟು ಅಪರೂಪದ ಖನಿಜಗಳು ಮತ್ತು ಯುರೇನಿಯಂ ಹೊಂದಿರುವ ಬೃಹತ್ ಅದಿರು ನಿಕ್ಷೇಪ ಪತ್ತೆಯಾಗಿದೆ. ಕೇವಲ ಪೆಟ್ರೋಲಿಯಂ ಮೇಲಷ್ಟೇ ಅವಲಂಬಿತವಾಗದೆ, ಭವಿಷ್ಯದ ಪರಮಾಣು ಶಕ್ತಿ ಹಾಗೂ ವಿದ್ಯುತ್ ವಾಹನಗಳ ಬ್ಯಾಟರಿಗಳಿಗೆ ಅತ್ಯಗತ್ಯವಾಗಿರುವ ಈ ಅದಿರುಗಳನ್ನು ಹೊರತೆಗೆದು ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸೌದಿ ಸರ್ಕಾರ ಮುಂದಾಗಿದೆ.
ಮದೀನಾದ ಜಬಲ್ ಸಯೀದ್‌ನಲ್ಲಿ ನಡೆಸಲಾದ ವಿಸ್ತೃತ ಭೂವೈಜ್ಞಾನಿಕ ಸಮೀಕ್ಷೆಗಳ ಪ್ರಕಾರ, 110 ಮಿಲಿಯನ್ ಟನ್ ಅದಿರಿನಲ್ಲಿ ಅತ್ಯಮೂಲ್ಯವಾದ ಭಾರೀ ಅಪರೂಪದ ಅಂಶಗಳು ಮತ್ತು ಉತ್ತಮ ಗುಣಮಟ್ಟದ ಯುರೇನಿಯಂ ಸಾಂದ್ರತೆ ಇರುವುದು ದೃಢಪಟ್ಟಿದೆ.
ಆರ್ಥಿಕತೆ ವೈವಿಧ್ಯೀಕರಣಕ್ಕೆ ಬಲ: ಕೇವಲ ಪೆಟ್ರೋಲಿಯಂ ಮೇಲಿನ ಅವಲಂಬನೆಯನ್ನು ತಗ್ಗಿಸಿ, ಖನಿಜ ಮತ್ತು ಹಸಿರು ಇಂಧನ ಕ್ಷೇತ್ರಗಳನ್ನು ವಿಸ್ತರಿಸುವ ಸೌದಿ ಅರೇಬಿಯಾದ ‘ವಿಷನ್ 2030’ (Vision 2030) ಯೋಜನೆಗೆ ಈ ಆವಿಷ್ಕಾರ ದೊಡ್ಡ ಮೈಲಿಗಲ್ಲಾಗಿದೆ.
ಇರಾನ್‌ಗೆ ಪರೋಕ್ಷ ಟಾಂಗ್: ನಾವು ಇರಾನ್‌ನಂತೆ ಪರ್ವತಗಳ ಆಳದಲ್ಲಿ ರಹಸ್ಯವಾಗಿ ಅಥವಾ ಅಂತಾರಾಷ್ಟ್ರೀಯ ಸಮುದಾಯದಿಂದ ಮುಚ್ಚಿಟ್ಟು ಯಾವುದೇ ಭೂಗತ ಪರಮಾಣು ಯೋಜನೆಗಳನ್ನು ನಡೆಸುವುದಿಲ್ಲ, ಸಂಪೂರ್ಣ ಪಾರದರ್ಶಕತೆ ಮತ್ತು IAEA ನಿಯಮಗಳ ಅಡಿಯಲ್ಲೇ ನಾಗರಿಕ ಅಣುಶಕ್ತಿ ಅಭಿವೃದ್ಧಿಪಡಿಸುತ್ತೇವೆ ಎಂದು ಸೌದಿ ಸಚಿವರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಓದಿ:
ಮತ್ತೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ; ಪೆಟ್ರೋಲ್ ದುಬಾರಿ, ಹಣದುಬ್ಬರ ಹೆಚ್ಚಳ ಇತ್ಯಾದಿ ಇದರ ಎಫೆಕ್ಟ್ ಹಲವು
ಅಮೆರಿಕದ ಜೊತೆ ಅಣು ಒಪ್ಪಂದ: ಅಮೆರಿಕದೊಂದಿಗಿನ ‘123 ನಾಗರಿಕ ಪರಮಾಣು ಒಪ್ಪಂದ’ ಮತ್ತು ಜಾಗತಿಕ ಸುರಕ್ಷತಾ ಮಾನದಂಡಗಳಿಗೆ ಬದ್ಧವಾಗಿ ಈ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುವುದು ಎಂದು ರಿಯಾದ್ ಹೇಳಿದೆ.
ರೇರ್ ಅರ್ಥ್ ಖನಿಜಗಳ ಪ್ರಾಮುಖ್ಯತೆ (Rare Earth Elements): ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು, ಸ್ಮಾರ್ಟ್‌ಫೋನ್‌ಗಳು, ಯುದ್ಧ ವಿಮಾನಗಳು ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಕ್ಕೆ ಈ ಅಪರೂಪದ ಖನಿಜಗಳು ಅತ್ಯಗತ್ಯ. ಪ್ರಸ್ತುತ ಈ ಮಾರುಕಟ್ಟೆಯಲ್ಲಿ ಚೀನಾದ ಏಕಸ್ವಾಮ್ಯವಿದ್ದು, ಸೌದಿಯ ಆವಿಷ್ಕಾರವು ಜಾಗತಿಕ ಪೂರೈಕೆ ಸರಪಳಿಗೆ ಹೊಸ ಶಕ್ತಿ ನೀಡಲಿದೆ.
ಸೌದಿ ಅರೇಬಿಯಾ ಮತ್ತು ಅಮೆರಿಕ ನಡುವೆ ಇತ್ತೀಚೆಗೆ ಶತಕೋಟಿ ಡಾಲರ್ ವೆಚ್ಚದ ರಕ್ಷಣಾ ಹಾಗೂ ಪರಮಾಣು ಪಾಲುದಾರಿಕೆ ಏರ್ಪಟ್ಟಿದೆ. ಈಗ ದೇಶೀಯವಾಗಿಯೇ ಅಪಾರ ಪ್ರಮಾಣದ ಯುರೇನಿಯಂ ಪತ್ತೆಯಾಗಿರುವುದರಿಂದ, ಸೌದಿ ಅರೇಬಿಯಾ ತನ್ನದೇ ನೆಲದಲ್ಲಿ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಇಂಧನವನ್ನು ಸಂಸ್ಕರಿಸುವ ಮತ್ತು ಶ್ರೀಮಂತಗೊಳಿಸುವ ಕಾರ್ಯತಂತ್ರದ ಹಾದಿ ಸುಲಭವಾಗಲಿದೆ.
ಜಾಗತಿಕ ಇಂಧನ ಸಮತೋಲನ: ತೈಲ ಮಾರುಕಟ್ಟೆಯಲ್ಲಿ ಕಿಂಗ್ ಆಗಿರುವ ಸೌದಿ ಅರೇಬಿಯಾ, ಭವಿಷ್ಯದಲ್ಲಿ ಪರಮಾಣು ತಂತ್ರಜ್ಞಾನ ಮತ್ತು ಅತ್ಯಮೂಲ್ಯ ಖನಿಜಗಳ ರಫ್ತುದಾರ ರಾಷ್ಟ್ರವಾಗಿಯೂ ಹೊರಹೊಮ್ಮಲು ಈ ಆವಿಷ್ಕಾರ ಭದ್ರ ಬುನಾದಿ ಹಾಕಿಕೊಟ್ಟಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ