‘ನಮ್ಮದು ಹಗ್ಗದ ಮೇಲಿನ ನಡಿಗೆ’; ಅಮೆರಿಕ-ಇರಾನ್ ಸಂಘರ್ಷದ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಪಾಕಿಸ್ತಾನ
ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನವು ಅತ್ಯಂತ ಸೂಕ್ಷ್ಮ ರಾಜತಾಂತ್ರಿಕ ಸವಾಲನ್ನು ಎದುರಿಸುತ್ತಿದೆ. ಪಾಕಿಸ್ತಾನ ದೇಶದ ಸ್ಥಿತಿಯು "ಹಗ್ಗದ ಮೇಲಿನ ನಡಿಗೆಯಂತಾಗಿದೆ" ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ಇರಾನ್ ಹಾಗೂ ಈ ಸಂಘರ್ಷದಲ್ಲಿ ಭಾಗಿಯಾಗಿರುವ ಗಲ್ಫ್ ರಾಷ್ಟ್ರಗಳೆರಡರೊಂದಿಗೂ ನಿಕಟ ಬಾಂಧವ್ಯ ಹೊಂದಿರುವುದು ಈ ಇಕ್ಕಟ್ಟಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಈ ಮೂಲಕ ಇದುವರೆಗೂ ಇರಾನ್ ಮತ್ತು ಅಮೆರಿಕದ ನಡುವಿನ ಯುದ್ಧದ ಕದನವಿರಾಮಕ್ಕೆ ನಾನು ಮಧ್ಯವರ್ತಿ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ ಇದೀಗ ಪಶ್ಚಾತ್ತಾಪದ ನುಡಿಗಳನ್ನಾಡುತ್ತಿದೆ.

ಇಸ್ಲಮಾಬಾದ್, ಸೆಪ್ಟೆಂಬರ್ 9: ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮಕ್ಕಾಗಿ ಒಂದು ಕಾಲದಲ್ಲಿ ತನ್ನನ್ನು ತಾನೇ ‘ಮಧ್ಯವರ್ತಿ’ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದ ಪಾಕಿಸ್ತಾನ, ಈಗ ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ಮಧ್ಯೆ ಭಾರಿ ರಾಜತಾಂತ್ರಿಕ ಇಕ್ಕಟ್ಟಿಗೆ ಸಿಲುಕಿದೆ. ಇರಾನ್ ಹಾಗೂ ಸಂಘರ್ಷದಲ್ಲಿ ಭಾಗಿಯಾಗಿರುವ ಗಲ್ಫ್ ರಾಷ್ಟ್ರಗಳೆರಡರೊಂದಿಗೂ ನಿಕಟ ಬಾಂಧವ್ಯ ಹೊಂದಿರುವುದರಿಂದ ಇಸ್ಲಮಾಬಾದ್‌ನ ಸ್ಥಿತಿಯು “ಹಗ್ಗದ ಮೇಲಿನ ನಡಿಗೆಯಂತಾಗಿದೆ” ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ.
ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ನಶಿಸಿಹೋಗಿರುವ ಮಾತುಕತೆಗಳನ್ನು ಮರುಸ್ಥಾಪಿಸಲು ಮಧ್ಯಸ್ಥಿಕೆ ವಹಿಸಲು ಶ್ರಮಿಸುತ್ತಿದ್ದರೂ, ಯಾವುದೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ. ಜಿಯೋ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖವಾಜಾ ಆಸಿಫ್, “ಎಲ್ಲಾ ಗಲ್ಫ್ ರಾಷ್ಟ್ರಗಳು ಹಾಗೂ ಇರಾನ್ ಜೊತೆ ಪಾಕಿಸ್ತಾನ ಸೋದರತ್ವದ ಬಾಂಧವ್ಯ ಹೊಂದಿದೆ. ಈ ಸಂಘರ್ಷದಲ್ಲಿ ನಾವು ಎಷ್ಟರ ಮಟ್ಟಿಗೆ ತೊಡಗಿಸಿಕೊಳ್ಳಬಹುದು, ಎಲ್ಲಿ ನಿಗ್ರಹ ವಹಿಸಬೇಕು ಹಾಗೂ ಸಂಪೂರ್ಣವಾಗಿ ದೂರವಿರಲು ಸಾಧ್ಯವೇ ಎಂಬುದನ್ನು ಜಾಗರೂಕತೆಯಿಂದ ಪರಿಶೀಲಿಸಬೇಕಿದೆ” ಎಂದಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಫೋನ್ ನಂಬರ್ ಇದ್ದ ಪಾರಿವಾಳದ ಉಂಗುರ ಪತ್ತೆ; ಗಡಿಯಲ್ಲಿ ಹೈ ಅಲರ್ಟ್
ಇತ್ತೀಚೆಗಷ್ಟೇ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳು ಸಹಿ ಹಾಕಿರುವ ‘ಮಕ್ಕಾ ರಕ್ಷಣಾ ಒಕ್ಕೂಟದ’ ಜಂಟಿ ರಕ್ಷಣಾ ನಿಯಮಗಳನ್ನು ಉಲ್ಲೇಖಿಸಿದ ಖವಾಜಾ ಆಸಿಫ್, ಒಕ್ಕೂಟದ ಯಾವುದೇ ಸದಸ್ಯ ರಾಷ್ಟ್ರದ ಮೇಲೆ ದಾಳಿಯಾದರೆ ಜಂಟಿ ಸೇನಾ ಪ್ರತ್ಯುತ್ತರ ನೀಡಲಿದೆ ಎಂದು ಎಚ್ಚರಿಸಿದ್ದಾರೆ.
ಸೌದಿ ಮೇಲೆ ಹೂತಿ ಪಡೆಗಳ ದಾಳಿ:
ಯೆಮೆನ್‌ನ ಇರಾನ್ ಬೆಂಬಲಿತ ಹೂತಿ ದಂಗೆಕೋರರು ಸೌದಿ ಅರೇಬಿಯಾದ ನಗರಗಳು, ಇಂಧನ ಮತ್ತು ಮೂಲಸೌಕರ್ಯಗಳ ಮೇಲೆ ಭಾರಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. ಈ ದಾಳಿಯಲ್ಲಿ ಕನಿಷ್ಠ 73 ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಆಪರೇಷನ್ ಅಶ್‌ದಾರ್; ಜಮ್ಮು-ಕಾಶ್ಮೀರದ ಬದ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಕಮಾಂಡರ್ ಹತ್ಯೆ
ಹೂತಿಗಳಿಗೆ ಪಾಕಿಸ್ತಾನದ ಎಚ್ಚರಿಕೆ:
ಯೆಮೆನ್ ಸಂಘರ್ಷವನ್ನು ಸೌದಿ ಅರೇಬಿಯಾಕ್ಕೆ ವಿಸ್ತರಿಸದಂತೆ ಹೂತಿಗಳಿಗೆ ಎಚ್ಚರಿಕೆ ನೀಡಿದ ಸಚಿವರು, ಹೂತಿಗಳು ‘ಬೆಕಾನೂನು ಸಶಸ್ತ್ರ ಗುಂಪು’ ಎಂದಿದ್ದಾರೆ. ಒಕ್ಕೂಟದ ಒಪ್ಪಂದವು ಸಂಪೂರ್ಣವಾಗಿ ರಕ್ಷಣಾತ್ಮಕ ಸ್ವರೂಪದ್ದಾಗಿದ್ದು, ಯಾವುದೇ ಸದಸ್ಯ ದೇಶದ ಮೇಲೆ ಆಕ್ರಮಣವಾದರೆ ಮಾತ್ರ ಪ್ರತ್ಯುತ್ತರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




