AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಅಶ್‌ದಾರ್; ಜಮ್ಮು-ಕಾಶ್ಮೀರದ ಬದ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಕಮಾಂಡರ್ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಯೂಸ್‌ಮಾರ್ಗ್ ಅರಣ್ಯ ಪ್ರದೇಶದಲ್ಲಿ ಇಂದು ಭಾರತೀಯ ಭದ್ರತಾ ಪಡೆಗಳು ನಡೆಸಿದ 'ಆಪರೇಷನ್ ಅಶ್‌ದಾರ್' ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಕಮಾಂಡರ್‌ನನ್ನು ಹತ್ಯೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಎನ್​ಕೌಂಟರ್ ಆದ ಭಯೋತ್ಪಾದಕನನ್ನು ಪಾಕಿಸ್ತಾನಿ ಪ್ರಜೆ ಹಾಗೂ ನಿಷೇಧಿತ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಯಾಸಿರ್ ಎಂದು ಗುರುತಿಸಲಾಗಿದೆ.

ಆಪರೇಷನ್ ಅಶ್‌ದಾರ್; ಜಮ್ಮು-ಕಾಶ್ಮೀರದ ಬದ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಕಮಾಂಡರ್ ಹತ್ಯೆ
ಯಾಸಿರ್ Image Credit source: TV9
ಸುಷ್ಮಾ ಚಕ್ರೆ
|

Updated on: Sep 05, 2026 | 4:25 PM

Share

ಶ್ರೀನಗರ, ಸೆಪ್ಟೆಂಬರ್ 5: ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಯೂಸ್‌ಮಾರ್ಗ್‌ನ ಎತ್ತರದ ಅರಣ್ಯ ಪ್ರದೇಶದಲ್ಲಿ ಜಂಟಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಭಯೋತ್ಪಾದಕ ಕಮಾಂಡರ್ ಯಾಸಿರ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನದ ಕುರಿತು ಬಂದ ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಂಟಿ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದಾಗ ಗುಂಡಿನ ಚಕಮಕಿ ಪ್ರಾರಂಭವಾಯಿತು. ಈ ಪ್ರದೇಶದಲ್ಲಿ ಇನ್ನೂ ಕೆಲವು ಭಯೋತ್ಪಾದಕರು ಅಡಗಿರುವ ಅನುಮಾನವಿದ್ದು, ಇಡೀ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿವೆ.

ಆಪರೇಷನ್ ಅಶ್​ದಾರ್ ಕಾರ್ಯಾಚರಣೆ:

ಜಮ್ಮು ಬದ್ಗಾಮ್‌ನ ಅಶ್‌ದಾರ್ ಗಲಿ ಹಾಗೂ ಯೂಸ್‌ಮಾರ್ಗ್‌ನ ಎತ್ತರದ ಅರಣ್ಯ ಪ್ರದೇಶದಲ್ಲಿ ಶಂಕಿತ ಉಗ್ರರ ಚಲನವಲನದ ಬಗ್ಗೆ ನಿಖರ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಈ ಸುಳಿವಿನ ಮೇರೆಗೆ ಭಾರತೀಯ ಸೇನೆಯ 53 ರಾಷ್ಟ್ರೀಯ ರೈಫಲ್ಸ್, ಸ್ಪೆಷಲ್ ಫೋರ್ಸಸ್, ಜಮ್ಮು-ಕಾಶ್ಮೀರದ ಪೊಲೀಸ್ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ‘ಆಪರೇಷನ್ ಅಶ್‌ದಾರ್’ ಶೋಧ ಕಾರ್ಯಾಚರಣೆ ಆರಂಭಿಸಿದ್ದವು.

ಇದನ್ನೂ ಓದಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೆಗಾ ಆಪರೇಷನ್: 5 ಹೈಬ್ರಿಡ್ ಉಗ್ರರು ಸೇರಿ 13 ದೇಶವಿರೋಧಿಗಳ ಬಂಧನ, ಭಾರೀ ಶಸ್ತ್ರಾಸ್ತ್ರ ಜಪ್ತಿ

ಈ ಶೋಧ ಕಾರ್ಯಾಚರಣೆಯ ವೇಳೆ ಎಚ್ಚರದಿಂದಿದ್ದ ಸೈನಿಕರು ಉಗ್ರರನ್ನು ತಡೆಯಲು ಯತ್ನಿಸಿದಾಗ, ಯಾಸಿರ್ ಮತ್ತು ಆತನ ಸಹಚರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಪಡೆಗಳು ಪ್ರತಿಯಾಗಿ ನಡೆಸಿದ ತೀವ್ರ ಗುಂಡಿನ ಚಕಮಕಿಯಲ್ಲಿ ಯಾಸಿರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎನ್‌ಕೌಂಟರ್ ನಡೆದ ಸ್ಥಳದಿಂದ ಒಂದು ಎಕೆ ಸೀರೀಸ್ ರೈಫಲ್, ಮದ್ದುಗುಂಡುಗಳು ಹಾಗೂ ಯುದ್ಧೋಪಕರಣ ಸಾಮಗ್ರಿಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.

ಸುಲೈಮಾನ್ ಮೂಸಾಗೆ ನಂಟು:

ಹತ್ಯೆಯಾದ ಉಗ್ರ ಯಾಸಿರ್ ಈ ಹಿಂದೆ ಶ್ರೀನಗರದ ದಾಚಿಗಾಮ್‌ನಲ್ಲಿ ಹತನಾಗಿದ್ದ ಲಷ್ಕರ್‌ನ ಪ್ರಮುಖ ಸಂಚುಕೋರ ಸುಲೈಮಾನ್ ಮೂಸಾ ಗುಂಪಿನ ಭಾಗವಾಗಿದ್ದ. ಕಳೆದೊಂದು ವರ್ಷದಿಂದ ಪ್ರತ್ಯೇಕಗೊಂಡು ಯೂಸ್‌ಮಾರ್ಗ್ ಮತ್ತು ಬದ್ಗಾಮ್ ಭಾಗದಲ್ಲಿ ಲಷ್ಕರ್‌ನ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದ ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ.

ಸುಲೈಮಾನ್ ಮೂಸಾ ಗುಂಪಿನಿಂದ ಹೊರಬಂದ ನಂತರ ಯಾಸಿರ್ ಆ ಪ್ರದೇಶದಲ್ಲಿ ಲಷ್ಕರ್‌ನ ಪ್ರಮುಖ ಕಾರ್ಯಾಚರಣೆದಾರನಾಗಿ ಹೊರಹೊಮ್ಮಿದ್ದ. ಯೂಸ್‌ಮಾರ್ಗ್‌ನ ಎತ್ತರದ ಪ್ರದೇಶಗಳಲ್ಲಿ ಆತನ ಉಪಸ್ಥಿತಿಯ ಸುಳಿವು ಸಿಕ್ಕಿದ್ದರಿಂದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿ, ಆತನನ್ನು ಹತ್ಯೆ ಮಾಡಿವೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಫೋನ್ ನಂಬರ್ ಇದ್ದ ಪಾರಿವಾಳದ ಉಂಗುರ ಪತ್ತೆ; ಗಡಿಯಲ್ಲಿ ಹೈ ಅಲರ್ಟ್

ಜಮ್ಮು ಮತ್ತು ಕಾಶ್ಮೀರದಲ್ಲೆಡೆ ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ನಡುವೆಯೇ ಈ ಎನ್‌ಕೌಂಟರ್ ನಡೆದಿದೆ. ಯಾಸಿರ್ ಹತ್ಯೆಯ ನಂತರ, ಭದ್ರತಾ ಸಂಸ್ಥೆಗಳು ಆತನ ಜಾಲ, ಇತರ ಲಷ್ಕರ್ ಉಗ್ರರೊಂದಿಗಿನ ಸಂಪರ್ಕ ಮತ್ತು ಪ್ರದೇಶದಲ್ಲಿ ಆತ ನಡೆಸುತ್ತಿದ್ದ ಚಟುವಟಿಕೆಗಳ ಕುರಿತು ತನಿಖೆ ಚುರುಕುಗೊಳಿಸಿವೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ಚಟುವಟಿಕೆಗಳ ಯೋಜನೆಯಲ್ಲಿ ಯಾಸಿರ್ ಪಾತ್ರವೇನಾದರೂ ಇದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us