ನಿಮ್ಮ ಏರಿಯಾದ ರಸ್ತೆ ಗುಂಡಿ ಸಮಸ್ಯೆಗೆ ಎಂಪಿಗೆ ಶಾಪ ಹಾಕ್ತೀರಾ? ಸಂಸದರ ವ್ಯಾಪ್ತಿ, ಜವಾಬ್ದಾರಿಗಳೇನು ಎಂದು ತಿಳಿದಿರಿ
Santosh Nair's article in 'Your India' series: ರಸ್ತೆ ಸಮಸ್ಯೆಗಳಿಗೆ ಸಂಸದರನ್ನು ದೂಷಿಸುವ ಮುನ್ನ ಅವರ ನಿಜವಾದ ಜವಾಬ್ದಾರಿ ಅರ್ಥಮಾಡಿಕೊಳ್ಳಿ. ಸಂಸದರು ಕಾನೂನುಗಳನ್ನು ರೂಪಿಸುತ್ತಾರೆ, ಸರ್ಕಾರವನ್ನು ಪ್ರಶ್ನಿಸುತ್ತಾರೆ, ಸಂಸದೀಯ ಸಮಿತಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಎಂಪಿಎಲ್‌ಎಡಿಎಸ್ ಅನುದಾನವಿದ್ದರೂ, ಅವರು ಶಿಫಾರಸು ಮಾತ್ರ ಮಾಡಬಹುದು; ಅನುಷ್ಠಾನ ಸ್ಥಳೀಯ ಆಡಳಿತದ ಹೊಣೆ. ನಾಗರಿಕರು ಸಂಸದರ ಪಾತ್ರ ಮತ್ತು ಸ್ಥಳೀಯ ಸಂಸ್ಥೆಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯ.

ಪ್ರತಿ ಮುಂಗಾರಿನಲ್ಲೂ ರಸ್ತೆಯೊಂದು ಜಲಾವೃತಗೊಳ್ಳುತ್ತದೆ. ಇದನ್ನು ನೋಡಿ ಬೇಸತ್ತ ನಾಗರಿಕನೊಬ್ಬ, “ನಮ್ಮ ಎಂಪಿ (ಸಂಸದರು) ಏನು ಮಾಡುತ್ತಿದ್ದಾರೆ?” ಎಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಾನೆ.
ಇಂತಹ ಆಕ್ರೋಶ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಹುದಾದದ್ದು. ಆದರೆ, ಆ ಆಕ್ರೋಶವು ತಪ್ಪು ಕಚೇರಿಯತ್ತ ಅಥವಾ ತಪ್ಪು ಜನಪ್ರತಿನಿಧಿಯತ್ತ ಗುರಿಯಾಗಿರುವ ಸಾಧ್ಯತೆಯೂ ಇದೆ.
ಒಬ್ಬ ಸಂಸದ (MP – Member of Parliament) ಎಂದರೆ ನಿಮ್ಮ ಬೀದಿಯ ರಸ್ತೆಯನ್ನು ಸರಿಪಡಿಸಲು ಆಯ್ಕೆಯಾದವರಲ್ಲ. ಆ ಕೆಲಸವು ಸಾಮಾನ್ಯವಾಗಿ ನಿಮ್ಮ ನಗರ ಪಾಲಿಕೆಗೆ ಅಥವಾ ಪಂಚಾಯತಿಗೆ ಸೇರಿರುತ್ತದೆ. ಈ ಕುರಿತು ನಾವು ನಮ್ಮ ಕಳೆದ ಎರಡು ಲೇಖನಗಳಲ್ಲಿ ವಿವರವಾಗಿ ನೋಡಿದ್ದೆವು. ಒಬ್ಬ ಸಂಸದನ ನಿಜವಾದ ಸಾಂವಿಧಾನಿಕ ಜವಾಬ್ದಾರಿಯು ಇಡೀ ದೇಶದ ಮಟ್ಟದ ಶಾಸನ ಸಭೆಗೆ ಸಂಬಂಧಿಸಿರುತ್ತದೆ.
ಹಾಗಾದರೆ, ಒಬ್ಬ ಸಂಸದ ನಿಜವಾಗಿ ಏನು ಮಾಡುತ್ತಾನೆ?
ಮುಖ್ಯವಾಗಿ, ಅವರು ಕಾನೂನುಗಳನ್ನು ರೂಪಿಸುತ್ತಾರೆ. ಭಾರತದಲ್ಲಿ ಶಾಸನವಾಗುವ ಪ್ರತಿಯೊಂದು ವಿಧೇಯಕವೂ ಸಂಸತ್ತಿನ ಮೂಲಕವೇ ಅಂಗೀಕಾರಗೊಳ್ಳಬೇಕು. ಸಂಸದರು ಆ ವಿಧೇಯಕಗಳ ಕುರಿತು ಚರ್ಚಿಸುತ್ತಾರೆ, ಪ್ರಶ್ನಿಸುತ್ತಾರೆ ಮತ್ತು ಮತ ಚಲಾಯಿಸುತ್ತಾರೆ. ಕೆಲವು ದಿನಗಳ ಹಿಂದೆ ಸಂವಿಧಾನ ತಿದ್ದುಪಡಿ ವಿಧೇಯಕವೊಂದು ‘ಇಲ್ಲ’ ಎಂಬ ಮತಗಳಿಗಿಂತ ‘ಹೌದು’ ಎಂಬ ಮತಗಳನ್ನು ಹೆಚ್ಚು ಪಡೆದರೂ ಹೇಗೆ ವಿಫಲವಾಯಿತು ಎಂಬುದನ್ನು ನಾವು ನೋಡಿದ್ದೆವು, ಅಲ್ಲಿ ತಮ್ಮ ಜವಾಬ್ದಾರಿಯ ಈ ಭಾಗವನ್ನು ನಿರ್ವಹಿಸಿ ಮತ ಚಲಾಯಿಸಿದವರು ಇದೇ ಸಂಸದರು.
ಸಂಸದರು ಸರ್ಕಾರವನ್ನು ನೇರವಾಗಿ ಪ್ರಶ್ನಿಸುತ್ತಾರೆ. ಸಂಸತ್ತು ನಡೆಯುವ ಪ್ರತಿಯೊಂದು ದಿನವೂ ‘ಪ್ರಶ್ನೋತ್ತರ ವೇಳೆ’ (Question Hour) ಇರುತ್ತದೆ. ಅಲ್ಲಿ ಸಂಸದರು ಸಚಿವರಿಗೆ ಕಠಿಣವಾದ, ನಿರ್ದಿಷ್ಟ ಪ್ರಶ್ನೆಗಳನ್ನು ಅಧಿಕೃತವಾಗಿ ಕೇಳಬಹುದು ಮತ್ತು ಇಡೀ ದೇಶವೇ ನೋಡುವಂತೆ ಉತ್ತರಗಳನ್ನು ಪಡೆಯಬಹುದು. ಅದರ ಬೆನ್ನಲ್ಲೇ ‘ಶೂನ್ಯ ವೇಳೆ’ (Zero Hour) ಇರುತ್ತದೆ. ಅಲ್ಲಿ ಸಂಸದರು ದಿನದ ಅಧಿಕೃತ ಪಟ್ಟಿಯಲ್ಲಿ ಇಲ್ಲದ ಅತ್ಯಂತ ತುರ್ತು ಸ್ಥಳೀಯ ಅಥವಾ ರಾಷ್ಟ್ರೀಯ ವಿಷಯಗಳನ್ನು ಪ್ರಸ್ತಾಪಿಸಬಹುದು. ಇಲ್ಲಿ ಒಬ್ಬ ಸಂಸದ ತನ್ನ ಕ್ಷೇತ್ರದ ರಸ್ತೆ ಗುಂಡಿ ಮುಚ್ಚಲು ವೈಯಕ್ತಿಕವಾಗಿ ನಿಂತುಕೊಳ್ಳುವ ಬದಲು ದೆಹಲಿಯಲ್ಲಿ ತಮ್ಮೂರಿನ ಸಮಸ್ಯೆಯ ಕುರಿತು ಧ್ವನಿ ಎತ್ತುವ ಮೂಲಕ ತಮ್ಮ ಕ್ಷೇತ್ರದ ನಿಜವಾದ ಪ್ರತಿನಿಧಿ ಎನಿಸುತ್ತಾನೆ.
ಇದನ್ನೂ ಓದಿ: ಗ್ರಾಮದ ಆಡಳಿತ ನಿಜವಾಗಿ ಯಾರ ಕೈಯಲ್ಲಿರುತ್ತದೆ? ಪಂಚಾಯತಿ ಅಧ್ಯಕ್ಷರು, ಗ್ರಾಮಸ್ಥರು ಮತ್ತು ಸರ್ಕಾರದ ಪಾತ್ರ ಮತ್ತು ವ್ಯಾಪ್ತಿ
ಈ ಕೆಲಸಕ್ಕೆ ಯಾರೂ ಗಮನಿಸದ ಮತ್ತೊಂದು ಮೌನವಾದ ಭಾಗವೂ ಇದೆ. ಸಂಸದರು ಸಂಸದೀಯ ಸಮಿತಿಗಳಲ್ಲಿ (Parliamentary Committees) ಕಾರ್ಯನಿರ್ವಹಿಸುತ್ತಾರೆ. ದೇಶದ ಜನರಿಗೆ ವಿಷಯ ತಿಳಿಯುವ ಬಹು ಮುಂಚೆಯೇ, ಯಾವುದೇ ವಿಧೇಯಕ ಅಥವಾ ಸಚಿವಾಲಯದ ಬಜೆಟ್ ಅನ್ನು ಸಾಲು-ಸಾಲಾಗಿ ಕೂಲಂಕಷವಾಗಿ ಅಧ್ಯಯನ ಮಾಡುವ ಸಣ್ಣ ಸಮಿತಿಗಳು ಇವು. ಸರ್ಕಾರದ ಕಾರ್ಯವೈಖರಿಯ ನಿಜವಾದ ಉಪಯುಕ್ತ ಪರಿಶೀಲನೆಗಳು ನಡೆಯುವುದು ಸಂಜೆ ಸುದ್ದಿಯಾಗುವ ಭಾಷಣಗಳಲ್ಲಲ್ಲ, ಬದಲಾಗಿ ಕ್ಯಾಮೆರಾಗಳಿಲ್ಲದ ಈ ಸಮಿತಿ ಕೊಠಡಿಗಳಲ್ಲಿ. ಇಂಥ ಸಮಿತಿಗಳ ಭಾಗವಾಗಿ ಒಬ್ಬ ಸಂಸದ ಇರಬಹುದು.
ನಂತರ ಹೆಚ್ಚಿನ ಜನರಿಗೆ ಪೂರ್ಣವಾಗಿ ತಿಳಿಯದಿರುವ ಮತ್ತೊಂದು ಭಾಗವಿದೆ. ಪ್ರತಿಯೊಬ್ಬ ಸಂಸದನಿಗೂ ತಮ್ಮ ಕ್ಷೇತ್ರದ ಸ್ಥಳೀಯ ಅಭಿವೃದ್ಧಿಗಾಗಿ ‘ಎಂಪಿಎಲ್‌ಎಡಿಎಸ್’ (MPLADS) ಯೋಜನೆ ಅಡಿಯಲ್ಲಿ ವರ್ಷಕ್ಕೆ 5 ಕೋಟಿ ರೂ ಅನುದಾನ ಸಿಗುತ್ತದೆ. ಆದರೆ ಇಲ್ಲೊಂದು ಪ್ರಮುಖ ತಿರುವಿದೆ: ಆ ಹಣ ಎಂದಿಗೂ ಸಂಸದರ ಕೈಗೆ ನೇರವಾಗಿ ಸಿಗುವುದಿಲ್ಲ. ಆ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ಮಾತ್ರ ಅವರು ಶಿಫಾರಸು ಮಾಡಬಹುದು. ಉದಾಹರಣೆಗೆ ಇಲ್ಲೊಂದು ಹೊಸ ರಸ್ತೆ, ಅಲ್ಲೊಂದು ಶಾಲಾ ಕಟ್ಟಡ, ಅಥವಾ ಮತ್ತೊಂದೆಡೆ ಕುಡಿಯುವ ನೀರಿನ ಯೋಜನೆ ಮಾಡಲು ಸೂಚಿಸಬಹುದು. ಆ ಕೆಲಸವನ್ನು ಅನುಮೋದಿಸಿ, ಅನುಷ್ಠಾನಗೊಳಿಸುವುದು ಸ್ಥಳೀಯ ಜಿಲ್ಲಾಡಳಿತ. ಆದ್ದರಿಂದ ಒಬ್ಬ ಸಂಸದ ನಿಜವಾಗಿ ಸ್ಥಳೀಯ ಸಮಸ್ಯೆಯನ್ನು ಪರಿಹರಿಸಲು ಬಯಸಿದರೂ, ಅವರು ಶಿಫಾರಸು ಮಾಡಬಹುದೇ ಹೊರತು ಸ್ವತಃ ನಿರ್ಮಾಣ ಮಾಡಲು ಸಾಧ್ಯವಿಲ್ಲ.
ಇದು ಒಂದು ವಿಚಿತ್ರವಾದ ಆದರೆ ಸಾಮಾನ್ಯವಾದ ಅನುಭವವನ್ನು ವಿವರಿಸುತ್ತದೆ. ತನ್ನ ಬೀದಿ ಇನ್ನೂ ಜಲಾವೃತವಾಗಿರುವುದಕ್ಕೆ ಮತದಾರನೊಬ್ಬ ತಾನು ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ ಎಂದು ಭಾವಿಸುತ್ತಾನೆ. ಅದೇ ಸಮಯದಲ್ಲಿ ತನ್ನ ನಿರ್ವಹಣೆ ಅಥವಾ ನಿರ್ಮಾಣದ ವ್ಯಾಪ್ತಿಗೆ ಬಾರದ ವಿಷಯಕ್ಕಾಗಿ ತನ್ನನ್ನು ಅನಗತ್ಯವಾಗಿ ಹೊಣೆಗಾರನನ್ನಾಗಿ ಮಾಡಲಾಗುತ್ತಿದೆ ಎಂದು ಸಂಸದ ಭಾವಿಸುತ್ತಾನೆ. ಇಲ್ಲಿ ಇಬ್ಬರ ಭಾವನೆಯಲ್ಲೂ ಸತ್ಯ ಇದೆ.
ಇದರರ್ಥ ಸಂಸದರಿಗೆ ಸಂಪೂರ್ಣ ವಿನಾಯಿತಿ ನೀಡಬೇಕು ಎಂದಲ್ಲ. ಕೆಲವು ಸಂಸದರು ಸಂಸತ್ತಿಗೆ ನಿಯಮಿತವಾಗಿ ಹಾಜರಾಗುತ್ತಾರೆ, ಚುರುಕಾದ ಪ್ರಶ್ನೆಗಳನ್ನು ಕೇಳುತ್ತಾರೆ, ಸಮಿತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಮತ್ತು ತಮ್ಮ ಎಂಪಿಎಲ್‌ಎಡಿಎಸ್ (MPLADS) ನಿಧಿಯನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ. ಇನ್ನು ಕೆಲವರು ಸಭೆಗೆ ಬರುವುದೇ ಇಲ್ಲ. ಈ ವ್ಯತ್ಯಾಸ ನಿಜವಾಗಿಯೂ ಇರುತ್ತದೆ. ಇದನ್ನು ಪರಿಶೀಲಿಸಲೂ ಸಾಧ್ಯವಿದೆ.
‘ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್’ (PRS Legislative Research) ನಂತಹ ಸ್ವತಂತ್ರ ಸಂಸ್ಥೆಗಳು ಪ್ರತಿಯೊಬ್ಬ ಸಂಸದರ ಈ ದತ್ತಾಂಶವನ್ನು ಸಾರ್ವಜನಿಕವಾಗಿ ದಾಖಲಿಸುತ್ತವೆ. ಅವರು ಎಷ್ಟು ಬಾರಿ ಸಂಸತ್ತಿಗೆ ಹಾಜರಾಗಿದ್ದಾರೆ, ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ, ಎಷ್ಟು ಚರ್ಚೆಗಳಲ್ಲಿ ಮಾತನಾಡಿದ್ದಾರೆ ಮತ್ತು ಅವರ ಎಷ್ಟು ಎಂಪಿಎಲ್‌ಎಡಿಎಸ್ ನಿಧಿ ಬಳಕೆಯಾಗಿದೆ ಎಂಬ ವಿವರ ನೀಡುತ್ತದೆ. ಇದನ್ನು ತಿಳಿಯಲು ಯಾವುದೇ ವೈಯಕ್ತಿಕ ಪರಿಚಯ ಅಥವಾ ಒಳಗಿನ ಸುಳಿವು ಬೇಕಿಲ್ಲ. ತಿಳಿಯುವ ಕುತೂಹಲವಿರುವ ಯಾರೇ ಆದರೂ ನೋಡಬಹುದಾದ ಸಾರ್ವಜನಿಕ ಮಾಹಿತಿ ಇದು.
ಇದನ್ನೂ ಓದಿ: ಸರ್ಕಾರ ನಿಮಗಾಗಿ ಏನೇನು ಮಾಡುತ್ತಿದೆ? ಸರಿಯಾಗಿ ಮಾಡುತ್ತಿದೆಯಾ? ಅದನ್ನು ಹೇಗೆ ತಿಳಿಯುತ್ತೀರಿ?
ಆದ್ದರಿಂದ ಮುಂದಿನ ಬಾರಿ ರಸ್ತೆ ಜಲಾವೃತಗೊಂಡು ನಿಮ್ಮ ಆಕ್ರೋಶ “ಸಂಸದರ” ಕಡೆಗೆ ತಿರುಗಿದಾಗ, ಒಂದೇ ಸಿಟ್ಟಿನ ಪ್ರಶ್ನೆಯ ಬದಲು ಎರಡು ಪ್ರತ್ಯೇಕ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸೂಕ್ತ:
ಈ ಕೆಲಸ ನನ್ನ ಸಂಸದರ ಜವಾಬ್ದಾರಿಯೇ ಅಥವಾ ನನ್ನ ನಗರ ಪಾಲಿಕೆ/ಪಂಚಾಯತಿಯ ಜವಾಬ್ದಾರಿಯೇ?
ಇದು ಯಾವುದೇ ಕಚೇರಿಗೆ ಸೇರಿದ ಕೆಲಸವಾಗಿದ್ದರೂ, ಆ ವ್ಯಕ್ತಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ?
ಇವು ಎರಡು ವಿಭಿನ್ನ ಪ್ರಶ್ನೆಗಳು. ಹೊಣೆಗಾರರನ್ನಾಗಿ ಮಾಡಲು ಇಬ್ಬರು ಬೇರೆ ಬೇರೆ ವ್ಯಕ್ತಿಗಳಿದ್ದಾರೆ. ಇವೆರಡನ್ನೂ ಗೊಂದಲ ಮಾಡಿಕೊಳ್ಳುವುದು ಕೇವಲ ಜವಾಬ್ದಾರಿಯನ್ನು ತಪ್ಪು ಜಾಗದಲ್ಲಿ ಹುಡುಕುವುದು ಮಾತ್ರವಲ್ಲ; ನಿಜವಾದ ಜವಾಬ್ದಾರಿ ಹೊರಬೇಕಾದ ಕಚೇರಿಯು ಮೌನವಾಗಿ ಜಾರಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಆಧಾರಗಳು: ವಿಕಿಪೀಡಿಯಾ, “ಮೆಂಬರ್ಸ್ ಆಫ್ ಪಾರ್ಲಿಮೆಂಟ್ ಲೋಕಲ್ ಏರಿಯಾ ಡೆವಲಪ್‌ಮೆಂಟ್ ಸ್ಕೀಮ್”; ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ಭಾರತ ಸರ್ಕಾರ, ಎಂಪಿಎಲ್‌ಎಡಿಎಸ್ ಮಾರ್ಗಸೂಚಿಗಳು; ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್, ಎಂಪಿ ಟ್ರ್ಯಾಕ್ ಮತ್ತು ವಿಧಾನ ಸಭಾ ಟ್ರ್ಯಾಕ್.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:20 pm, Mon, 28 September 26




