AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯೇ ‘ದೀಪತೂನ್​’ನಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ ಆದೇಶ; ತಮಿಳುನಾಡು ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್

ಮಧುರೈನ ತಿರುಪ್ಪರಂಕುಂಡ್ರಮ್ ಬೆಟ್ಟದ ಮೇಲಿರುವ ವಿವಾದಿತ ‘ದೀಪತೂನ್’ ಕಲ್ಲಿನ ಸ್ತಂಭದ ಮೇಲೆ ನಾಳೆ (ನವೆಂಬರ್ 28) ಕಾರ್ತಿಕ ದೀಪವನ್ನು ಬೆಳಗುವಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ನವೆಂಬರ್ 20ರಂದು ತಾನು ನೀಡಿದ್ದ ಮಧ್ಯಂತರ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ತಮಿಳುನಾಡು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ಮಧುರೈ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. 

ನಾಳೆಯೇ ‘ದೀಪತೂನ್​’ನಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ ಆದೇಶ; ತಮಿಳುನಾಡು ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್
Karthigai Deepam (2)
ಸುಷ್ಮಾ ಚಕ್ರೆ
|

Updated on:Nov 27, 2026 | 5:02 PM

Share

ನವದೆಹಲಿ, ನವೆಂಬರ್ 27: ತಮಿಳುನಾಡಿನ ತಿರುಪ್ಪರಂಕುಂಡ್ರಮ್ ದೇವಾಲಯದ ‘ದೀಪತೂನ್’ನಲ್ಲಿ ಶನಿವಾರ ಕಾರ್ತಿಕ ದೀಪವನ್ನು ಬೆಳಗುವಂತೆ ಸುಪ್ರೀಂ ಕೋರ್ಟ್ ಇಂದು ನಿರ್ದೇಶಿಸಿದೆ. ದೇವಾಲಯದ ಭದ್ರತೆಯ ಹೊಣೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಗೆ (ಸಿಆರ್​ಪಿಎಫ್​) ವಹಿಸುವಂತೆ ಕೋರ್ಟ್ ಆದೇಶಿಸಿದೆ. ನ್ಯಾಯಾಲಯವು ದೇವಾಲಯದ ಟ್ರಸ್ಟಿಗಳ ಸಮಿತಿಯನ್ನು ಅಮಾನತುಗೊಳಿಸಿ, ದೇವಾಲಯದ ವಿಧಿವಿಧಾನಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಆಡಳಿತ ನಡೆಸಲು ಇಬ್ಬರು ನ್ಯಾಯಾಧೀಶರನ್ನು ‘ರಿಸೀವರ್‌ಗಳಾಗಿ’ ನೇಮಿಸಿದೆ. ಅಲ್ಲದೆ, ನವೆಂಬರ್ 20ರ ತನ್ನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಆರೋಪದ ಮೇಲೆ ಒಟ್ಟು 13 ಮಂದಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.

ತನ್ನ ಹಿಂದಿನ ಆದೇಶದ ಉಲ್ಲಂಘನೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ದೇವಾಲಯದ ಟ್ರಸ್ಟಿಗಳ ಸಮಿತಿಯು ಎಂದಿಗೂ ತನ್ನ ಮುಂದೆ ಹಾಜರಾಗಿಲ್ಲ ಮತ್ತು ಅದರ ಪರವಾಗಿ ನೀಡಲಾದ ಹೇಳಿಕೆಯು ಮೇಲ್ನೋಟಕ್ಕೆ ನ್ಯಾಯಾಲಯದ ಅಧಿಕಾರ ಮತ್ತು ಆದೇಶಗಳಿಗೆ ಮಾಡಿದ ಅವಮಾನದಂತೆ ಕಂಡುಬರುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: ‘ದೇವಾಲಯದ ಆಡಳಿತವೇ ಹೊಣೆ’; ದೀಪ ಬೆಳಗಿಸುವ ಆದೇಶ ಉಲ್ಲಂಘನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿದ ತಮಿಳುನಾಡು ಸರ್ಕಾರ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ. ತಿರುಪ್ಪರಂಕುಂಡ್ರಮ್ ಬೆಟ್ಟದ ಉಚ್ಚಿಪಿಳ್ಳಯಾರ್ ಮಂಟಪದಲ್ಲಿ ಬೆಳಗಿಸಲಾದ ದೀಪದ ಜ್ಯೋತಿಯನ್ನೇ ಬಳಸಿಕೊಂಡು ನಾಳೆ (ನವೆಂಬರ್ 28) ದೀಪತೂನ್ ಸ್ತಂಭದ ಮೇಲೆ ದೀಪ ಬೆಳಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಸಮೀಪದ ದರ್ಗಾದಿಂದ ಎಲ್ಲಾ ಬದಿಗಳಲ್ಲಿ ಕನಿಷ್ಠ 50 ಮೀಟರ್ ದೂರವನ್ನು ಕಾಯ್ದುಕೊಂಡು ಪ್ರತಿಯೊಬ್ಬ ಭಕ್ತರಿಗೂ ದೀಪ ಬೆಳಗಲು ಅವಕಾಶ ನೀಡುವಂತೆ ನ್ಯಾಯಾಲಯ ತಿಳಿಸಿದೆ.

ದೇವಾಲಯದ ಟ್ರಸ್ಟಿಗಳ ಮಂಡಳಿ ಅಮಾನತು:

ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಅನುಮತಿ ನೀಡದ ಕಾರಣಕ್ಕಾಗಿ ಅರುಲ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಟ್ರಸ್ಟಿಗಳ ಮಂಡಳಿಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದೆ. ಅಲ್ಲದೆ, ರಾಜ್ಯ ಪೊಲೀಸರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ದೇವಾಲಯ ಮತ್ತು ತಿರುಪ್ಪರಂಕುಂಡ್ರಮ್ ಬೆಟ್ಟದ ಸಂಪೂರ್ಣ ಭದ್ರತೆಯನ್ನು ತಕ್ಷಣವೇ ಸಿಆರ್‌ಪಿಎಫ್ ವಶಕ್ಕೆ ಒಪ್ಪಿಸಲು ಆದೇಶಿಸಿದೆ.

ದೇವಾಲಯದ ಭದ್ರತಾ ವ್ಯವಸ್ಥೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಚೆನ್ನೈನಲ್ಲಿರುವ ಸಿಆರ್‌ಪಿಎಫ್ ಕಮಾಂಡೆಂಟ್‌ಗೆ ನ್ಯಾಯಾಲಯ ನಿರ್ದೇಶನ ನೀಡಿದ್ದು, ಸಮೀಪದ ದರ್ಗಾದಲ್ಲಿರುವ ಪ್ರಸ್ತುತ ಭದ್ರತಾ ವ್ಯವಸ್ಥೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ. ನ್ಯಾಯಾಲಯ ನೇಮಿಸಿದ ರಿಸೀವರ್‌ಗಳಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ಪೀಠ, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಎದುರಿಸುತ್ತಿರುವ ಅಧಿಕಾರಿಗಳು ಡಿಸೆಂಬರ್ 15ರಂದು ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಉನ್ನತ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್:

ನವೆಂಬರ್ 20ರ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಆರೋಪದ ಮೇಲೆ ತಮಿಳುನಾಡು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಮಧುರೈ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿಯವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ, ಅಧಿಕಾರಿಗಳ ನಡುವೆ ನಡೆದ ಸಂವಹನದ ಸಂಪೂರ್ಣ ವಿವರಗಳನ್ನೊಳಗೊಂಡ ಅಫಿಡವಿಟ್ ಸಲ್ಲಿಸುವಂತೆ ಪೀಠ ಸೂಚಿಸಿದೆ.

ಇದನ್ನೂ ಓದಿ: ಕಾರ್ತಿಕ ದೀಪೋತ್ಸವ ವಿವಾದ; ತಮಿಳುನಾಡಿನಲ್ಲಿ ದೀಪ ಬೆಳಗುವ ವಿಚಾರ ಕಾನೂನು ಸಮರಕ್ಕೆ ಕಾರಣವಾಗಿದ್ದು ಏಕೆ?

“ಅಧಿಕಾರಿಗಳು ರಾಜಕೀಯ ನಾಯಕರ ಅಣತಿಯಂತೆ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಆಡಳಿತಾತ್ಮಕ ಅರಾಜಕತೆ ಉಂಟಾಗಿದೆ. ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವವರನ್ನು ಉಕ್ಕಿನ ಹಸ್ತದಿಂದ ಹತ್ತಿಕ್ಕಲಾಗುವುದು. ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ನ್ಯಾಯದ ಹಾದಿಯನ್ನು ಕಲುಷಿತಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ನ್ಯಾಯಪೀಠವು ತಮಿಳುನಾಡಿನ ಆಡಳಿತಾರೂಢ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ.

ವಿವಾದದ ಹಿನ್ನೆಲೆಯೇನು?:

ನವೆಂಬರ್ 24ರ ಕಾರ್ತಿಕ ದೀಪೋತ್ಸವದಂದು ತಿರುಪ್ಪರಂಕುಂಡ್ರಮ್ ಬೆಟ್ಟದ ಮೇಲಿರುವ ದೀಪತೂನ್ ಸ್ತಂಭದ ಮೇಲೆ ಒಂದು ಬಾರಿ ದೀಪ ಬೆಳಗಲು ಸುಪ್ರೀಂ ಕೋರ್ಟ್ ನವೆಂಬರ್ 20ರಂದು ಅನುಮತಿ ನೀಡಿತ್ತು. ಆದರೆ, ಅಂದು ಸಾಂಪ್ರದಾಯಿಕ ಉಚ್ಚಿಪಿಳ್ಳಯಾರ್ ಮಂಟಪದಲ್ಲಿ ಮಾತ್ರ ದೀಪ ಬೆಳಗಿಸಲಾಯಿತೇ ಹೊರತು ದೀಪತೂನ್​ನಲ್ಲಿ ದೀಪ ಬೆಳಗಲು ತಮಿಳುನಾಡು ಪೊಲೀಸರು ಮತ್ತು ದೇವಾಲಯ ಆಡಳಿತ ಮಂಡಳಿ ಅವಕಾಶ ನೀಡಿರಲಿಲ್ಲ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಂಡವನ್ನೂ ಪೊಲೀಸರು ತಡೆದಿದ್ದರು. ಇದನ್ನು ಪ್ರಶ್ನಿಸಿ ಹಿಂದೂ ಭಕ್ತರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಈ ಮಹತ್ವದ ಆದೇಶ ಹೊರಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Fri, 27 November 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್