ಸರ್ಕಾರ ನಿಮಗಾಗಿ ಏನೇನು ಮಾಡುತ್ತಿದೆ? ಸರಿಯಾಗಿ ಮಾಡುತ್ತಿದೆಯಾ? ಅದನ್ನು ಹೇಗೆ ತಿಳಿಯುತ್ತೀರಿ?
Santosh Nair's article in 'Your India' series: ಸರ್ಕಾರ ಎಂದರೆ ಕೇವಲ ರಾಜಕೀಯ ಮತ್ತು ಸುದ್ದಿಗಳಲ್ಲಿ ಬರುವ ಪ್ರಮುಖ ಘಟನೆಗಳಷ್ಟೇ ಅಲ್ಲ; ಉಚಿತ ನೀರು, ವಿದ್ಯುತ್, ರಸ್ತೆ, ಹವಾಮಾನ ಮುನ್ಸೂಚನೆಯಿಂದ ಹಿಡಿದು ನೀವು ಬಳಸುವ ನೋಟಿನವರೆಗೆ ಸರ್ಕಾರ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದಿನನಿತ್ಯ ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ನೀವು ಬೆಳಗಿನ ಮೊದಲ ಕಪ್ ಚಹಾ ಕುಡಿಯುವಷ್ಟರಲ್ಲಿ, ಸರ್ಕಾರ ಈಗಾಗಲೇ ನಿಮ್ಮ ಬೆಳಗಿನ ಅವಧಿಯನ್ನು ಹನ್ನೆರಡು ರೀತಿಯಲ್ಲಿ ಸ್ಪರ್ಶಿಸಿರುತ್ತದೆ.
ಬೆಳಿಗ್ಗೆ ಎದ್ದು ಸಮಯ ನೋಡುತ್ತೀರಿ. ನೀವು ನೋಡುವ ಗಡಿಯಾರವು ದಶಕಗಳ ಹಿಂದೆ ಸರ್ಕಾರವು ಇಡೀ ದೇಶಕ್ಕೆ ನಿಗದಿಪಡಿಸಿದ ಕಾಲಮಾನದಲ್ಲೇ (Time Zone) ಓಡುತ್ತಿರುತ್ತದೆ.
ನಳವನ್ನು ತಿರುಗಿಸಿ ನೀರು ಹಿಡಿಯುತ್ತೀರಿ. ಆ ನೀರನ್ನು ಸಂಸ್ಕರಿಸಿ, ಪಂಪ್ ಮಾಡಿ, ಸರ್ಕಾರಿ ಸಂಸ್ಥೆ ಅಳವಡಿಸಿದ ಪೈಪ್‌ಗಳ ಮೂಲಕ ನಿಮ್ಮ ಮನೆಗೆ ತಲುಪಿಸಿರುವುದು ಜಲಮಂಡಳಿ.
ಲೈಟ್‌ನ ಸ್ವಿಚ್ ಹಾಕುತ್ತೀರಿ. ಪ್ರತಿಯೊಬ್ಬರ ಮನೆಗೆ ತಲುಪುವ ಈ ವಿದ್ಯುತ್ ಸರಬರಾಜಿನ ತಂತಿಗಳನ್ನು ರಾಜ್ಯ ವಿದ್ಯುತ್ ಕಂಪನಿಯೇ ನಿರ್ವಹಿಸುತ್ತದೆ.
ಮನೆಯಿಂದ ಹೊರಡುವ ಮುನ್ನ ಹವಾಮಾನ ಹೇಗಿದೆ ಎಂದು ಪರಿಶೀಲಿಸುತ್ತೀರಿ. ನೀವು ನೋಡಿದ ಆ ಮುನ್ಸೂಚನೆಯನ್ನು ನೀಡಿದ್ದು ‘ಭಾರತೀಯ ಹವಾಮಾನ ಇಲಾಖೆ’ (IMD) ಎಂಬ ಸರ್ಕಾರಿ ಸಂಸ್ಥೆ. ನೀವು ಯೋಚಿಸುವ ಅಗತ್ಯವಿಲ್ಲದಂತೆ ನಿಮಗಾಗಿ ಅವರು ಆಕಾಶವನ್ನು ವೀಕ್ಷಿಸುತ್ತಿರುತ್ತಾರೆ.
ಮನೆಯಿಂದ ಹೊರಗೆ ಹೆಜ್ಜೆ ಇಡುತ್ತೀರಿ. ನಿಮ್ಮ ಕಾಲಡಿಯ ರಸ್ತೆಯನ್ನು ನಿರ್ಮಿಸಿ, ದುರಸ್ತಿ ಮಾಡಿದ್ದು ಸರ್ಕಾರಿ ಇಲಾಖೆ. ವೃತ್ತದಲ್ಲಿರುವ ಸಂಚಾರ ದೀಪಗಳು (Traffic Signals) ಸರ್ಕಾರ ರೂಪಿಸಿದ ನಿಯಮಗಳಂತೆಯೇ ಕಾರ್ಯನಿರ್ವಹಿಸುತ್ತವೆ.
ನಗದು ಹಣ ನೀಡಿ ಏನನ್ನಾದರೂ ಖರೀದಿಸುತ್ತೀರಿ. ನಿಮ್ಮ ಕೈಯಲ್ಲಿರುವ ಆ ನೋಟನ್ನು ಮುದ್ರಿಸಿದ್ದು ರಿಸರ್ವ್ ಬ್ಯಾಂಕ್ (RBI) ಎಂಬ ಸರ್ಕಾರಿ ಸಂಸ್ಥೆ ಮತ್ತು ಆ ಹಣದ ಮೌಲ್ಯಕ್ಕೆ ಸ್ವತಃ ಸರ್ಕಾರವೇ ಭರವಸೆ ನೀಡುತ್ತದೆ.
ಇದನ್ನೂ ಓದಿ: ಭಾರತದ ಸಂವಿಧಾನಕ್ಕಿದೆ ಭಾರೀ ಭದ್ರತೆ; ಲೋಕಸಭೆ ವಿಧೇಯಕ ವಿಫಲವಾಗಿದ್ದು ತಾಜಾ ನಿದರ್ಶನ
ಇದ್ಯಾವುದರಲ್ಲೂ ನೀವು “ಸರ್ಕಾರ”ದ ಬಗ್ಗೆ ಒಮ್ಮೆಯೂ ಯೋಚಿಸುವ ಅಗತ್ಯ ಬರಲಿಲ್ಲ! ಪ್ರಮುಖವಾಗಿ ಸರ್ಕಾರದ ಅತಿ ದೊಡ್ಡ ಕೆಲಸವೇ ಅದು. ಸರ್ಕಾರದ ಅತಿ ದೊಡ್ಡ ಜವಾಬ್ದಾರಿ ಎಂದರೆ ಸುದ್ದಿಯಾಗುವ ದೊಡ್ಡ ದೊಡ್ಡ ಘಟನೆಗಳಲ್ಲ; ನಿಶ್ಶಬ್ದವಾಗಿ, ಯಾರೂ ಗಮನಿಸದಷ್ಟು ಸುಲಭವಾಗಿ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗುವುದು.
ಹಾಗಾದರೆ, ಸರಳ ಪದಗಳಲ್ಲಿ ಹೇಳುವುದಾದರೆ ಸರ್ಕಾರ ನಿಜವಾಗಿಯೂ ಏನು ಮಾಡುತ್ತದೆ?
ಮುಖ್ಯವಾಗಿ ಮೂರು ಬೃಹತ್ ಕೆಲಸಗಳನ್ನು ಮಾಡುತ್ತದೆ:
ಮೊದಲನೆಯದಾಗಿ, ನಿಯಮಗಳನ್ನು ರೂಪಿಸುತ್ತದೆ: ದೇಶದ 100 ಕೋಟಿಗೂ ಅಧಿಕ ಜನರು ನಿರಂತರ ಗೊಂದಲಗಳಿಲ್ಲದೆ ಒಟ್ಟಾಗಿ ಜೀವಿಸಲು, ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂದು ತಿಳಿಸುವ ಕಾನೂನುಗಳನ್ನು ಸರ್ಕಾರ ರೂಪಿಸುತ್ತದೆ. ಇಂತಹ ಕಾನೂನುಗಳು ಸಂಸತ್ತಿನಲ್ಲಿ ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ನಾವು ಕಳೆದ ಲೇಖನದಲ್ಲಿ ನೋಡಿದ್ದೆವು.
ಎರಡನೆಯದಾಗಿ, ಸೇವೆಗಳನ್ನು ನಡೆಸುವುದು: ಶಾಲೆಗಳು, ಆಸ್ಪತ್ರೆಗಳು, ರಸ್ತೆಗಳು, ರೈಲ್ವೆಗಳು, ಪೋಲಿಸ್ ಇಲಾಖೆ, ನ್ಯಾಯಾಲಯಗಳು, ಅಂಚೆ ವ್ಯವಸ್ಥೆ, ನೀರು ಮತ್ತು ವಿದ್ಯುತ್ ಸರಬರಾಜು — ಇವೆಲ್ಲವೂ ನಿರಂತರವಾಗಿ, ಪ್ರತಿದಿನವೂ ಸುಸೂತ್ರವಾಗಿ ನಡೆಯಲು ಯೋಜನೆ, ನಿರ್ಮಾಣ ಮತ್ತು ನಿರ್ವಹಣೆಯ ಅಗತ್ಯವಿದೆ. ಹೆಚ್ಚಿನ ಸರ್ಕಾರಿ ನೌಕರರು ತಮ್ಮ ಸಮಯವನ್ನು ವಿನಿಯೋಗಿಸುವುದು ಇಲ್ಲೇ. ಕೇಂದ್ರ ಸರ್ಕಾರವೊಂದೇ ಸುಮಾರು 48 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಭಾರತೀಯ ರೈಲ್ವೆಯೊಂದರಲ್ಲೇ 10 ಲಕ್ಷಕ್ಕೂ ಹೆಚ್ಚು ನೌಕರರಿದ್ದಾರೆ. ಇದು ಇಡೀ ವಿಶ್ವದಲ್ಲೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ.
ಮೂರನೆಯದಾಗಿ, ರಕ್ಷಣೆ ನೀಡುವುದು: ಗಡಿಯಲ್ಲಿ ಸೇನೆಯು ದೇಶವನ್ನು ಕಾಯುತ್ತದೆ. ಒಳಗೆ ಪೊಲೀಸರು ಶಾಂತಿ-ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುತ್ತಾರೆ. ಜನರ ನಡುವೆ ವ್ಯಾಜ್ಯಗಳು ಎದುರಾದಾಗ ನ್ಯಾಯಾಲಯಗಳು ಅವುಗಳನ್ನು ಪರಿಹರಿಸುತ್ತವೆ. ಇವು ಬೆಳಗಿನ ಹೊತ್ತು ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ ಎಂದಲ್ಲಿ ಈ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಎಂದೇ ಅರ್ಥ.
ಈ ಎಲ್ಲಾ ಕೆಲಸಗಳ ವೆಚ್ಚವನ್ನು ಭರಿಸಲು ಸರ್ಕಾರವು ತೆರಿಗೆಯ ಮೂಲಕ ಹಣವನ್ನು ಸಂಗ್ರಹಿಸುತ್ತದೆ. ಈ ಹಣವನ್ನು ಮೇಲಿನ ಮೂರು ಕೆಲಸಗಳಿಗೆ ಹಾಗೂ ಪ್ರವಾಹ, ನೈಸರ್ಗಿಕ ವಿಕೋಪಗಳು, ಬೆಳೆ ನಷ್ಟ, ಅಥವಾ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
ಇಲ್ಲಿ ನಾವು ಗಂಭೀರವಾಗಿ ಆಲೋಚಿಸಬೇಕಾದ ವಿಷಯ ಒಂದಿದೆ. ಇಂದು ನಿಮ್ಮ ಬೆಳಗಿನ ಸಮಯದಲ್ಲಿ ಸರ್ಕಾರ ನಿಮಗಾಗಿ ಮಾಡಿದ ಯಾವುದೇ ಕೆಲಸಕ್ಕೂ ನಿಮ್ಮಿಂದ ಪ್ರತ್ಯೇಕ ಅನುಮತಿಯ ಅಗತ್ಯವಿರಲಿಲ್ಲ. ನೀರಿನ ಶುದ್ಧೀಕರಣದ ವೇಳಾಪಟ್ಟಿಯನ್ನು ನೀವು ಅನುಮೋದಿಸಲಿಲ್ಲ; ರಸ್ತೆ ದುರಸ್ತಿಯ ಬಜೆಟ್ ಅನ್ನು ನೀವು ಪರಿಶೀಲಿಸಲಿಲ್ಲ; ಹಣ ಮುದ್ರಣ ಪ್ರಕ್ರಿಯೆಯನ್ನು ನೀವು ತಪಾಸಣೆ ಮಾಡಲಿಲ್ಲ. ಆದರೂ, ನಿಮ್ಮ ಬೆಳಗಿನ ಮೊದಲ ಕಪ್ ಚಹಾ ಕುಡಿಯುವ ಮುನ್ನವೇ ಇವೆಲ್ಲವೂ ನಿಮ್ಮ ಜೀವನವನ್ನು ಸ್ಪರ್ಶಿಸಿವೆ.
ಇದನ್ನೂ ಓದಿ: ಭಾರತದ ರಾಜ್ಯ ರಾಜ್ಯಗಳ ಅಭಿವೃದ್ಧಿಯಲ್ಲಿ ವ್ಯತ್ಯಯಗಳಿರುವುದು ಯಾಕೆ? ಅಲ್ಲಿದೆ ಸ್ವಾತಂತ್ರ್ಯಪೂರ್ವದ ಇತಿಹಾಸದ ಪ್ರಭಾವ
ನಮ್ಮ ಪರವಾಗಿ ಇಷ್ಟೊಂದು ದೊಡ್ಡ ಜವಾಬ್ದಾರಿಯನ್ನು ಮತ್ತೊಬ್ಬರ ಕೈಗೆ ನೀಡುವುದು ಸಣ್ಣ ವಿಷಯವಲ್ಲ. ಪ್ರತಿದಿನ ಯಾವುದೇ ಎರಡನೇ ಆಲೋಚನೆಯಿಲ್ಲದೆ ನಾವು ನೀಡುವ ಅತ್ಯಂತ ದೊಡ್ಡ ಜವಾಬ್ದಾರಿ ಇದು.
ಇದು ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಸರ್ಕಾರ ಇಷ್ಟೊಂದು ಕೆಲಸಗಳನ್ನು, ಇಷ್ಟು ಮೌನವಾಗಿ, ನಿರಂತರವಾಗಿ ಮಾಡುತ್ತಿದೆ ಹೌದು. ಆದರೆ, ಅದು ಆ ಕೆಲಸವನ್ನು ಎಷ್ಟು ಉತ್ತಮವಾಗಿ ಮಾಡುತ್ತಿದೆ ಎಂದು ಎಷ್ಟು ತಿಳಿದ್ದೀರಿ?
ಒಟ್ಟಾರೆ ನಗರ ಗಮನಿಸುವುದಲ್ಲ; ನಿಮ್ಮ ಬೀದಿ, ನಿಮ್ಮ ಶಾಲೆ, ನಿಮ್ಮ ಆಸ್ಪತ್ರೆ, ನಿಮ್ಮ ಕುಡಿಯುವ ನೀರಿನ ಪೂರೈಕೆಯ ಬಗ್ಗೆ ನಿರ್ದಿಷ್ಟವಾಗಿ ನಿಮಗೆ ಎಷ್ಟು ತಿಳಿದಿದೆ?
ನಮ್ಮಲ್ಲಿ ಹೆಚ್ಚಿನವರು ನಮ್ಮ ಅಡುಗೆಮನೆಯ ವೆಚ್ಚ, ನಮ್ಮ ಸಂಬಳ, ನಮ್ಮ ಕುಟುಂಬದ ಖರ್ಚುಗಳನ್ನು ಕೊನೆಯ ಪೈಸೆಯವರೆಗೂ ಸರಿಯಾಗಿ ಹೇಳಬಲ್ಲೆವು. ಆದರೆ, ಬೆಳಗಿನ ಉಪಹಾರದವರೆಗೆ ನಮ್ಮನ್ನು ಸುರಕ್ಷಿತವಾಗಿ ತಲುಪಿಸಿದ ಈ ಬೃಹತ್ ವ್ಯವಸ್ಥೆಯ ಕುರಿತು ಆತ್ಮವಿಶ್ವಾಸದಿಂದ ಉತ್ತರಿಸಬಲ್ಲವರು ನಮ್ಮಲ್ಲಿ ಅತ್ಯಂತ ಕಡಿಮೆ ಜನರಿದ್ದಾರೆ.
ಈ ಸ್ಥಿತಿ ಬದಲಾಗಬೇಕು. ಒಂದು ಬಾರಿಗೆ ಒಂದು ಪ್ರಶ್ನೆ ಮೂಲಕ ಬದಲಾಯಿಸುವುದು ಬಹುಶಃ ಅತ್ಯಂತ ಅಗತ್ಯವಾದ ಹೆಜ್ಜೆಯಾಗಬಹುದು.
ಆಧಾರಗಳು: ವಿಕಿಪೀಡಿಯಾ (ಉದ್ಯೋಗಿಗಳ ದತ್ತಾಂಶ 2023), ಭಾರತ ಸರ್ಕಾರದ ರೈಲ್ವೆ ಸಚಿವಾಲಯ, ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್. ಸೆಪ್ಟೆಂಬರ್ 25, 2026
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




