ಭಾರತದ ರಾಜ್ಯ ರಾಜ್ಯಗಳ ಅಭಿವೃದ್ಧಿಯಲ್ಲಿ ವ್ಯತ್ಯಯಗಳಿರುವುದು ಯಾಕೆ? ಅಲ್ಲಿದೆ ಸ್ವಾತಂತ್ರ್ಯಪೂರ್ವದ ಇತಿಹಾಸದ ಪ್ರಭಾವ
Santosh Nair's article in 'Your India' series: 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ 565 ಸಂಸ್ಥಾನಗಳು ಒಕ್ಕೂಟಕ್ಕೆ ಸೇರಿಕೊಂಡವು. ಸರ್ದಾರ್ ಪಟೇಲ್ ಮತ್ತು ವಿ.ಪಿ. ಮೆನನ್ ಅವರ ವಿಲೀನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇರಳದಂತಹ ಕೆಲವು ಸಂಸ್ಥಾನಗಳು ಸ್ವಾತಂತ್ರ್ಯಪೂರ್ವದಲ್ಲೇ ಶಿಕ್ಷಣ, ಆರೋಗ್ಯದಲ್ಲಿ ಮುಂಚೂಣಿಯಲ್ಲಿದ್ದರೆ, ಇನ್ನು ಕೆಲವು ಹಿಂದುಳಿದಿದ್ದವು. ಈ ಐತಿಹಾಸಿಕ ಅಂತರವು ಇಂದಿಗೂ ರಾಜ್ಯಗಳ ಅಭಿವೃದ್ಧಿ, ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯಗಳ ಪ್ರಸ್ತುತ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವುಗಳ ಆರಂಭಿಕ ಇತಿಹಾಸವನ್ನು ಗಮನಿಸುವುದು ಮುಖ್ಯ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಅದು ಕೇವಲ ಒಂದು ದೇಶವಷ್ಟೇ ಎಚ್ಚರಗೊಳ್ಳಲಿಲ್ಲ. ಬದಲಿಗೆ ನೂರಾರು ಸಣ್ಣ ಸಣ್ಣ ದೇಶಗಳು ಒಂದೇ ಬಾರಿಗೆ ಎಚ್ಚರಗೊಂಡವು.
ಆಗ ಭಾರತದಲ್ಲಿ 565 ಸಂಸ್ಥಾನಗಳಿದ್ದವು. ಪ್ರತಿಯೊಂದಕ್ಕೂ ತನ್ನದೇ ಆದ ರಾಜ ಅಥವಾ ರಾಣಿ, ತನ್ನದೇ ನಿಯಮಗಳು, ಹಣ ಹಾಗೂ ಕಾರ್ಯವೈಖರಿ ಇತ್ತು. ಒಟ್ಟಾರೆಯಾಗಿ ಈ ಸಣ್ಣ ರಾಜಮನೆತನಗಳು ಭಾರತದ ಭೂಪ್ರದೇಶದ ಅರ್ಧದಷ್ಟು ಭಾಗವನ್ನು ಆವರಿಸಿದ್ದವು. ಇವುಗಳಲ್ಲಿ ಯಾವುದೂ ಅಧಿಕೃತವಾಗಿ ಬ್ರಿಟಿಷ್ ಇಂಡಿಯಾದ ಭಾಗವಾಗಿರಲಿಲ್ಲ. ಪಕ್ಕಪಕ್ಕದಲ್ಲೇ ಕುಳಿತಿದ್ದ 565 ಸಣ್ಣ ದೇಶಗಳಂತೆ, ಅವು ತಮ್ಮದೇ ಆದ ರೀತಿಯಲ್ಲಿ ಪ್ರತ್ಯೇಕವಾಗಿದ್ದವು.
ಮುಂದಿನ ಎರಡು ವರ್ಷಗಳಲ್ಲಿ, ವಿ.ಪಿ. ಮೆನನ್ ಎಂಬ ಅಧಿಕಾರಿಯ ನೆರವಿನೊಂದಿಗೆ ಸರ್ದಾರ್ ಪಟೇಲ್ ಅವರು ಈ ಎಲ್ಲಾ ರಾಜಮನೆತನಗಳನ್ನು ಒಂದೇ ಭಾರತದ ಅಡಿಯಲ್ಲಿ ತರಲು ಶ್ರಮಿಸಿದರು. ಅದು ಸುಲಭವಾಗಿರಲಿಲ್ಲ. ಪ್ರತಿಯೊಬ್ಬ ರಾಜನನ್ನು, ಒಬ್ಬೊಬ್ಬರಾಗಿ, ಕೆಲವೊಮ್ಮೆ ಪ್ರೀತಿಯ ಮಾತುಗಳಿಂದ, ಇನ್ನು ಕೆಲವೊಮ್ಮೆ ಒತ್ತಡದ ಮೂಲಕ ಒಪ್ಪಿಸಬೇಕಾಯಿತು. ಕೆಲವು ರಾಜರು ಕೆಲವೇ ದಿನಗಳಲ್ಲಿ ಒಪ್ಪಿಕೊಂಡರು. ‘ತಿರುವಾಂಕೂರು’ (Travancore) ಎಂಬ ಸಂಸ್ಥಾನವು ಆರಂಭದಲ್ಲಿ ತಾನು ಸ್ವತಂತ್ರವಾಗಿರಲು ಬಯಸುವುದಾಗಿ ತಿಳಿಸಿತ್ತು, ಆದರೆ ನಂತರ ತನ್ನ ನಿರ್ಧಾರವನ್ನು ಬದಲಾಯಿಸಿ ಭಾರತವನ್ನು ಸೇರಿಕೊಂಡಿತು. ‘ಜುನಾಗಢ’ ಎಂಬ ಮತ್ತೊಂದು ಸಂಸ್ಥಾನದಲ್ಲಿ ಬಹುಸಂಖ್ಯಾತ ಪ್ರಜೆಗಳು ಹಿಂದೂಗಳಾಗಿದ್ದರೂ, ಅದರ ಆಡಳಿತಗಾರರು ಪಾಕಿಸ್ತಾನವನ್ನು ಸೇರಲು ಯತ್ನಿಸಿದರು. ಆದರೆ ಆ ನಿರ್ಧಾರವನ್ನು ನಂತರ ರದ್ದುಗೊಳಿಸಲಾಯಿತು. ಶ್ರೀಮಂತವಾಗಿದ್ದ ‘ಹೈದರಾಬಾದ್’ ಸಂಸ್ಥಾನವು ಭಾರತ ಸೇರಲು ದೀರ್ಘಕಾಲದವರೆಗೆ ಪ್ರತಿರೋಧಿಸಿತ್ತು. ಅಂತಿಮವಾಗಿ 1948ರಲ್ಲಿ ಭಾರತೀಯ ಸೇನೆಯು ಮಧ್ಯಪ್ರವೇಶಿಸಬೇಕಾಯಿತು. 1950ರ ವೇಳೆಗೆ, 565 ಸಂಸ್ಥಾನಗಳಲ್ಲಿ ಬಹುತೇಕ ಎಲ್ಲವೂ ಭಾರತದ ಭಾಗವಾಗಿದ್ದವು.
ಆದರೆ, ಇಂದಿಗೂ ಪ್ರಸ್ತುತವಾಗಿರುವ ಪ್ರಮುಖ ವಿಷಯ ಇಲ್ಲಿದೆ.
ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದು, ಅದಕ್ಕಿಂತ ಮುಂಚಿನ ವರ್ಷಗಳಲ್ಲಿ ಆಯಾ ಸಂಸ್ಥಾನಗಳು ತಮ್ಮ ಪ್ರಜೆಗಳಿಗಾಗಿ ಈಗಾಗಲೇ ಮಾಡಿದ್ದ ಅಥವಾ ಮಾಡದೆ ಬಿಟ್ಟಿದ್ದ ಕಾರ್ಯಗಳನ್ನು ಅಳಿಸಿಹಾಕಲಿಲ್ಲ.
ಇದನ್ನೂ ಓದಿ: ಭಾರತವು ರಾಜ್ಯವೊಂದನ್ನು ಅಳಿಸಿಹಾಕಬಹುದು, ಆದರೆ ಯಾವುದೇ ರಾಜ್ಯವು ಭಾರತವನ್ನು ಅಳಿಸಿಹಾಕಲು ಸಾಧ್ಯವಿಲ್ಲ
ಉದಾಹರಣೆಗೆ ಕೇರಳವನ್ನು ತೆಗೆದುಕೊಳ್ಳಿ. ಸ್ವಾತಂತ್ರ್ಯಕ್ಕೂ ಮುಂಚೆ ‘ಕೇರಳ’ ಹೆಸರಿರಲಿಲ್ಲ. ಅದು ತಿರುವಾಂಕೂರು ಸಂಸ್ಥಾನವಾಗಿತ್ತು. ದೇಶದ ಹೆಚ್ಚಿನ ಭಾಗಗಳಿಗಿಂತ ಮುಂಚಿತವಾಗಿಯೇ ಮುತುವರ್ಜಿಯಿಂದ ಶಾಲೆಗಳನ್ನು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿಲಾಗಿತ್ತು. ಸ್ವಾತಂತ್ರ್ಯವು ಪ್ರತಿಯೊಬ್ಬರ ಗುರಿಯಾಗುವ ಬಹುಕಾಲದ ಮುಂಚೆಯೇ, ಅಲ್ಲಿನ ಆಡಳಿತಗಾರರು ಶಿಕ್ಷಣವನ್ನು ಬಲವಾಗಿ ನಂಬಿದ್ದರು. ಭಾರತದ ಉಳಿದೆಡೆ ಹೆಣ್ಣುಮಕ್ಕಳು ಶಾಲೆಗೆ ಹೋಗುವುದು ಅಪರೂಪವಾಗಿದ್ದಾಗಲೇ ಅಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿದ್ದರು. ತಿರುವಾಂಕೂರು ಭಾರತದ ಭಾಗವಾದಾಗ ಆ ಹಳೆಯ ಅಭ್ಯಾಸವೇನೂ ಮಾಯವಾಗಲಿಲ್ಲ. ಅದು ಕೇರಳಕ್ಕೆ ಆರಂಭಿಕ ಮುನ್ನಡೆಯಾಯಿತು.
ಇತರ ಸಂಸ್ಥಾನಗಳು ಅದೇ ರೀತಿ ಮಾಡಲಿಲ್ಲ. ಕೆಲ ರಾಜರು ಬೇರೆ ವಿಷಯಗಳ ಮೇಲೆ ಗಮನ ಹರಿಸಿದರು. ಕಡಿಮೆ ಸಂಪನ್ಮೂಲಗಳಿದ್ದ ರಾಜರು ಕಡಿಮೆ ಶಾಲೆಗಳನ್ನು ನಿರ್ಮಿಸಿದರು. ಇನ್ನು ಭಾರತೀಯ ರಾಜರ ಬದಲಿಗೆ ನೇರವಾಗಿ ಬ್ರಿಟಿಷರಿಂದಲೇ ಆಳಲ್ಪಟ್ಟ ಪ್ರದೇಶಗಳು ಇನ್ನಷ್ಟು ಕಡಿಮೆ ಸೌಲಭ್ಯಗಳನ್ನು ಪಡೆದಿದ್ದವು. ಏಕೆಂದರೆ ಬ್ರಿಟಿಷರು ಸ್ಥಳೀಯ ಮಕ್ಕಳಿಗಾಗಿ ಶಾಲೆಗಳನ್ನು ನಿರ್ಮಿಸುವುದಕ್ಕಿಂತ ಹೆಚ್ಚಾಗಿ, ಕಂದಾಯ ವಸೂಲಿ ಮಾಡುವುದು ಮತ್ತು ಬಂದರುಗಳಿಗೆ ಸರಕುಗಳನ್ನು ಸಾಗಿಸುವುದರ ಬಗ್ಗೆ ಮಾತ್ರ ಹೆಚ್ಚು ಆಸಕ್ತಿ ಹೊಂದಿದ್ದರು.
ಆದ್ದರಿಂದ 1950ರಲ್ಲಿ ಈ ಎಲ್ಲಾ ಭಾಗಗಳು ಸೇರಿ “ಭಾರತ” ಆದಾಗ, ಅವು ಒಂದೇ ಹಂತದಿಂದ/ಸ್ಥಾನದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿಲ್ಲ. ಕೆಲವು ರಾಜ್ಯಗಳು ಈಗಾಗಲೇ ಮುಂಚೂಣಿಯಲ್ಲಿದ್ದುಕೊಂಡು ಪ್ರಾರಂಭಿಸಿದವು. ಇನ್ನು ಕೆಲವು ಈಗಾಗಲೇ ಹಿಂದುಳಿದುಕೊಂಡು ಒಳಬಂದವು. ಮತ್ತು ಆ ಅಂತರಕ್ಕೆ ಜನರು ಕಾರಣವಾಗಿರಲಿಲ್ಲ. ಅದು ವರ್ಷಗಳ ಹಿಂದೆ ಆಡಳಿತಗಾರರು ತೆಗೆದುಕೊಂಡ ನಿರ್ಧಾರಗಳಿಂದ ಬಂದಿದ್ದಾಗಿತ್ತು. ಈಗ ಇರುವ ಯಾವ ವ್ಯಕ್ತಿಗಳ ಪಾತ್ರ ಅದರಲ್ಲಿ ಇಲ್ಲ.
ಇದು ಇಂದಿಗೂ ಭಾರತವನ್ನು ರೂಪಿಸುತ್ತಿದೆ. ಕೇರಳದಂತೆ ಶಾಲೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯಗಳು ಹೆಚ್ಚಾಗಿ ಮುನ್ನಡೆಯಲ್ಲೇ ಉಳಿದುಕೊಂಡಿವೆ. ಹಿಂದುಳಿದಿದ್ದ ರಾಜ್ಯಗಳು, ಸಂವಿಧಾನವನ್ನು ಬರೆಯುವ ಮುಂಚಿನಿಂದಲೂ ಬಂದಿದ್ದ ಅನಾನುಕೂಲತೆಗಳನ್ನು ಹೊತ್ತುಕೊಂಡು, ಮುಂಚೂಣಿಗೆ ಬರಲು ದಶಕಗಳಿಂದ ಹೆಣಗಾಡುತ್ತಿವೆ.
ಇದನ್ನೂ ಓದಿ: ಡೊಮಿನಿಯನ್‌ನಿಂದ ಗಣರಾಜ್ಯಕ್ಕೆ: ಭಾರತದ ಸಂವಿಧಾನ, ಜನವರಿ 26ರ ಮಹತ್ವ
ಅಂದಮಾತ್ರಕ್ಕೆ ಇಂದಿನ ವ್ಯತ್ಯಾಸಗಳಿಗೆ ಇತಿಹಾಸ ಮಾತ್ರವೇ ಕಾರಣ ಎಂದಲ್ಲ. 1950ರಿಂದ ಬಂದ ಪ್ರತಿಯೊಂದು ರಾಜ್ಯ ಸರ್ಕಾರವೂ ತನ್ನದೇ ಆದ ಆಯ್ಕೆಗಳನ್ನು ಮಾಡಿದೆ. ಅವುಗಳಲ್ಲಿ ಕೆಲವು ಒಳ್ಳೆಯವು, ಕೆಲವು ಅಲ್ಲ. ಆ ನಿರ್ಧಾರಗಳೂ ಅಷ್ಟೇ ಮಹತ್ವದ್ದಾಗಿವೆ. ಆದರೆ ಯಾವುದೇ ಎರಡು ರಾಜ್ಯಗಳು ಈ ಸ್ಪರ್ಧೆಯನ್ನು ಒಂದೇ ಆರಂಭಿಕ ರೇಖೆಯಿಂದ (Starting Line) ಪ್ರಾರಂಭಿಸಲಿಲ್ಲ ಎಂಬುದನ್ನು ನೆನಪಿನಲ್ಲಿಡುವುದು ಸೂಕ್ತ.
ಆದ್ದರಿಂದ ಮುಂದಿನ ಬಾರಿ ಯಾರಾದರೂ ಒಂದು ಭಾರತೀಯ ರಾಜ್ಯವನ್ನು ಮತ್ತೊಂದಕ್ಕೆ ಹೋಲಿಸಿದಾಗ, ಮೊದಲು ಒಂದು ಪ್ರಶ್ನೆಯನ್ನು ಕೇಳಿಕೊಳ್ಳುವುದು ಅರ್ಥಪೂರ್ಣ:
ಈ ರಾಜ್ಯ ಎಷ್ಟು ದೂರ ಬಂದಿದೆ ಎಂದು ಮಾತ್ರವಲ್ಲ. ಅದರ ಕಥೆ ನಿಜವಾಗಿ ಎಷ್ಟು ಹಿಂದಿನಿಂದ ಪ್ರಾರಂಭವಾಯಿತು?
ಆಧಾರಗಳು: ವಿ.ಪಿ. ಮೆನನ್, “ದಿ ಸ್ಟೋರಿ ಆಫ್ ದಿ ಇಂಟಿಗ್ರೇಷನ್ ಆಫ್ ದಿ ಇಂಡಿಯನ್ ಸ್ಟೇಟ್ಸ್” (1956); ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಸ್ಮಾರಕ, “ಇಂಟಿಗ್ರೇಷನ್: ಹಿಸ್ ಗ್ರೇಟೆಸ್ಟ್ ಲೆಗಸಿ”; ತಿರುವಾಂಕೂರಿನ ಶಿಕ್ಷಣ ಮತ್ತು ಆರೋಗ್ಯ ವಲಯದ ಆರಂಭಿಕ ಹೂಡಿಕೆಯ ಕುರಿತಾದ ಐತಿಹಾಸಿಕ ಸಂಶೋಧನೆಗಳು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




