- TV9 Kannada Kannada News Photos Cricket Photos WI Openers Make History vs India: Greaves and Campbell Break 24-Year ODI Record
24 ವರ್ಷಗಳ ಬರ ಅಂತ್ಯಗೊಳಿಸಿದ ವಿಂಡೀಸ್ ಆರಂಭಿಕರು..!
ತಿರುವನಂತಪುರದಲ್ಲಿ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆರಂಭಿಕರಾದ ಗ್ರೀವ್ಸ್ ಮತ್ತು ಕ್ಯಾಂಪ್ಬೆಲ್ ಇತಿಹಾಸ ಸೃಷ್ಟಿಸಿದ್ದಾರೆ. ಕೇವಲ 13.3 ಓವರ್ಗಳಲ್ಲಿ 100 ರನ್ ಜೊತೆಯಾಟವಾಡಿ, ಭಾರತದ ನೆಲದಲ್ಲಿ 24 ವರ್ಷಗಳ ನಂತರ ಶತಕದ ಆರಂಭಿಕ ಜೊತೆಯಾಟದ ದಾಖಲೆ ನಿರ್ಮಿಸಿದರು. ಅವರ ಆಕ್ರಮಣಕಾರಿ ಬ್ಯಾಟಿಂಗ್ನಿಂದಾಗಿ ಮೊದಲ 10 ಓವರ್ಗಳಲ್ಲಿ 85 ರನ್ ಗಳಿಸಿ, ಗಿಲ್ ಅವರ ಬೌಲಿಂಗ್ ನಿರ್ಧಾರವನ್ನು ತಪ್ಪು ಎಂದು ಸಾಬೀತುಪಡಿಸಿದರು.
Updated on:Sep 27, 2026 | 4:41 PM

ತಿರುವನಂತಪುರದ ಗ್ರೀನ್ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೆರಿಬಿಯನ್ ಆರಂಭಿಕ ಜೋಡಿ ಇತಿಹಾಸ ಸೃಷ್ಟಿಸಿದೆ. ಕೇವಲ ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿರುವ ವಿಂಡೀಸ್ ತಂಡದ ದಾಂಡಿಗರು ತಾಳ್ಮೆಯ ಇನ್ನಿಂಗ್ಸ್ ಕಟ್ಟಿ ಭಾರತದ ವಿರುದ್ಧ ದಾಖಲೆ ನಿರ್ಮಿಸಿದ್ದಾರೆ(PC- West Indies X).

ಈ ಪಂದ್ಯದಲ್ಲಿ ಭಾರತದ ನಾಯಕ ಶುಭ್ಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರ ಆರಂಭಿಕರಾದ ಜಸ್ಟಿನ್ ಗ್ರೀವ್ಸ್ ಮತ್ತು ಜಾನ್ ಕ್ಯಾಂಪ್ಬೆಲ್ ಮೈದಾನದಲ್ಲಿ ರನ್ಗಳ ಮಳೆ ಸುರಿಸುವ ಮೂಲಕ ಗಿಲ್ ನಿರ್ಧಾರವನ್ನು ಸಂಪೂರ್ಣವಾಗಿ ತಪ್ಪು ಎಂದು ಸಾಬೀತುಪಡಿಸಿದರು(PC- West Indies X).

ಈ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಜಸ್ಟಿನ್ ಗ್ರೀವ್ಸ್ ಮತ್ತು ಜಾನ್ ಕ್ಯಾಂಪ್ಬೆಲ್ ಭಾರತೀಯ ಬೌಲರ್ಗಳ ಬೆವರಿಳಿಸಿ ಕೇವಲ 13.3 ಓವರ್ಗಳಲ್ಲಿ 100 ರನ್ಗಳ ಪಾಲುದಾರಿಕೆಯನ್ನು ಪೂರ್ಣಗೊಳಿಸಿದರು. 24 ವರ್ಷಗಳ ಕಾಯುವಿಕೆಯ ನಂತರ, ವೆಸ್ಟ್ ಇಂಡೀಸ್ನ ಆರಂಭಿಕ ಜೋಡಿಯು ಭಾರತದ ನೆಲದಲ್ಲಿ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಶತಕದ ಪಾಲುದಾರಿಕೆಯನ್ನು ದಾಖಲಿಸಿದ್ದು ಇದೇ ಮೊದಲು(PC- West Indies X).

ಏತನ್ಮಧ್ಯೆ, ವೆಸ್ಟ್ ಇಂಡೀಸ್ 2025 ರಿಂದ 20 ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದೆ, ಆದರೆ ತಂಡದ ಯಾವುದೇ ಆರಂಭಿಕ ಜೋಡಿಯೂ ಮೊದಲ ವಿಕೆಟ್ಗೆ 65 ರನ್ಗಳ ಗಡಿ ದಾಟಿರಲಿಲ್ಲ. ಆದರೆ ಎರಡನೇ ಬಾರಿಗೆ ಆರಂಭಿಕ ಜೋಡಿಯಾಗಿ ಕಣಕ್ಕಿಳಿದಿದ್ದ ಜಾನ್ ಕ್ಯಾಂಪ್ಬೆಲ್ ಮತ್ತು ಜಸ್ಟಿನ್ ಗ್ರೀವ್ಸ್ ಕೇವಲ 81 ಎಸೆತಗಳಲ್ಲಿ 100 ರನ್ಗಳ ಜೊತೆಯಾಟ ಹಂಚಿಕೊಂಡರು(PC- West Indies X).

ಗ್ರೀವ್ಸ್ ಮತ್ತು ಕ್ಯಾಂಪ್ಬೆಲ್ ಮೊದಲ ಓವರ್ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಭಾರತದ ಬೌಲರ್ಗಳ ಲಯ ತಪ್ಪಿಸಿದರು. ಇದರ ಪರಿಣಾಮವಾಗಿ 10 ಓವರ್ಗಳ ಪವರ್ಪ್ಲೇ ಅಂತ್ಯದ ವೇಳೆಗೆ ವೆಸ್ಟ್ ಇಂಡೀಸ್ ವಿಕೆಟ್ ಕಳೆದುಕೊಳ್ಳದೆ 85 ರನ್ ಕಲೆಹಾಕಿತು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ವಿರುದ್ಧ ಮೊದಲ 10 ಓವರ್ಗಳಲ್ಲಿ ವೆಸ್ಟ್ ಇಂಡೀಸ್ ಗಳಿಸಿದ ಮೂರನೇ ಅತ್ಯಧಿಕ ಮೊತ್ತವಾಗಿದೆ(PC- West Indies X).
Published On - 4:41 pm, Sun, 27 September 26

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.
Read More



