AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊರ್ಕೆಲ್ ಹೊಗಳಿದ್ರು, ಗಿಲ್ ಕೈಬಿಟ್ರು; ಸಿರಾಜ್ ವಿಚಾರದಲ್ಲಿ ಶುರುವಾಯ್ತು ಚರ್ಚೆ

ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್‌ನಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದೇಶಿ ನೆಲದಲ್ಲಿ ಬುಮ್ರಾ ಜೊತೆ ಸಿರಾಜ್ ಮೊದಲ ಆಯ್ಕೆಯಾಗಿರಬೇಕು ಎಂದಿದ್ದಾರೆ. ಬೌಲಿಂಗ್ ಕೋಚ್ ಹೊಗಳಿದರೂ, ಉತ್ತಮ ಪ್ರದರ್ಶನ ನೀಡಿದರೂ ಪದೇ ಪದೇ ಅವಕಾಶ ನಿರಾಕರಿಸುತ್ತಿರುವುದು ಅನ್ಯಾಯವೆಂದು ಹರ್ಷ ಭೋಗ್ಲೆ ಕೂಡ ಆಕ್ಷೇಪಿಸಿದ್ದಾರೆ.

ಮೊರ್ಕೆಲ್ ಹೊಗಳಿದ್ರು, ಗಿಲ್ ಕೈಬಿಟ್ರು; ಸಿರಾಜ್ ವಿಚಾರದಲ್ಲಿ ಶುರುವಾಯ್ತು ಚರ್ಚೆ
Mohammed Siraj
ಪೃಥ್ವಿಶಂಕರ
|

Updated on: Nov 27, 2026 | 8:17 AM

Share

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಭಾರತ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಂಡದ ಈ ನಿರ್ಧಾರದ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಸಿರಾಜ್‌ಗೆ ಪದೇ ಪದೇ ಅವಕಾಶ ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ಆಯ್ಕೆ ಸಮಿತಿ ಹಾಗೂ ತಂಡದ ನಿರ್ವಹಣಾ ಮಂಡಳಿಯನ್ನು ಪ್ರಶ್ನಿಸಿದ್ದಾರೆ.

ಮೊರ್ಕೆಲ್ ಹೊಗಳಿದ್ರು, ಗಿಲ್ ಕೈಬಿಟ್ರು

ವಿದೇಶಿ ನೆಲದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೆ ಮೊಹಮ್ಮದ್ ಸಿರಾಜ್ ಕೂಡ ಮೊದಲ ಆಯ್ಕೆಯಾಗಿರಬೇಕು ಎಂಬುದು ಕೈಫ್ ಅಭಿಪ್ರಾಯ. ಅದರಲ್ಲೂ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಇತ್ತೀಚೆಗೆ ಸಿರಾಜ್ ಅವರನ್ನು ವಿಶ್ವದರ್ಜೆಯ ಬೌಲರ್ ಎಂದು ಹೊಗಳಿದ್ದರು. ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂದೂ ಹೇಳಿದ್ದರು. ಹೀಗಿರುವಾಗ ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ ಎಂದು ಕೈಫ್ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತದ ಬೌಲರ್‌ಗಳು ಎದುರಾಳಿ ತಂಡವನ್ನು ಆಲೌಟ್ ಮಾಡಲು ಪರದಾಡಿದ್ದರು. ಹೀಗಾಗಿ ಎರಡನೇ ಟೆಸ್ಟ್‌ನಲ್ಲಿ ಸಿರಾಜ್‌ಗೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೂ ತಂಡದ ಆಯ್ಕೆಯಲ್ಲಿ ಸಿರಾಜ್‌ಗೆ ಮತ್ತೆ ನಿರಾಸೆಯಾಗಿದೆ. ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಸಿರಾಜ್ ಅವರದ್ದಾಗಿದೆ. 11 ಪಂದ್ಯಗಳಲ್ಲಿ 43 ವಿಕೆಟ್ ಕಬಳಿಸಿದ್ದರೂ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ.

ಸಿರಾಜ್ ಕೈಬಿಟ್ಟಿದ್ದೇಕೆ? ಕೈಫ್ ಪ್ರಶ್ನೆ

ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಮೊಹಮ್ಮದ್ ಕೈಫ್, ‘ಭಾರತದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಸಿರಾಜ್ ಅವರನ್ನು ಮತ್ತೆ ತಂಡದಿಂದ ಕೈಬಿಟ್ಟಿರುವುದು ನಂಬಲು ಕಷ್ಟವಾಗುತ್ತಿದೆ. ವಿದೇಶಿ ನೆಲದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ಜೊತೆಗೆ ಸಿರಾಜ್ ಕೂಡ ಮೊದಲ ಆಯ್ಕೆಯಾಗಿರಬೇಕು. ವಿಶೇಷವೆಂದರೆ, ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಅವರೇ ಸಿರಾಜ್ ಅವರನ್ನು ವಿಶ್ವದರ್ಜೆಯ ಬೌಲರ್ ಎಂದು ಕರೆದಿದ್ದರು. ಅಲ್ಲದೆ, ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂದೂ ಹೇಳಿದ್ದರು’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಟಾಸ್ ಗೆದ್ದ ಟೀಂ ಇಂಡಿಯಾ; ಸಿರಾಜ್‌ಗೆ ಮತ್ತೆ ಕೊಕ್, ಗುರ್‌ನೂರ್ ಬ್ರಾರ್‌ಗೆ ಪಾದಾರ್ಪಣೆ ಭಾಗ್ಯ

ಸಿರಾಜ್‌ಗೆ ಅನ್ಯಾಯವಾಗುತ್ತಿದೆ ಎಂದ ಹರ್ಷ ಭೋಗ್ಲೆ

ಇನ್ನು ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಕೂಡ ಸಿರಾಜ್ ಅವರನ್ನು ನಿರಂತರವಾಗಿ ತಂಡದಿಂದ ಹೊರಗಿಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಹರ್ಷ ಭೋಗ್ಲೆ, ‘ಸಿರಾಜ್ ಈಗ ಭಾರತದ ಆರನೇ ಆಯ್ಕೆಯ ವೇಗದ ಬೌಲರ್ ಆಗಿದ್ದಾರೆ. ಇದು ನನಗೆ ತುಂಬಾ ಅನ್ಯಾಯವೆನಿಸುತ್ತದೆ. ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ ಐವರು ಬೌಲರ್‌ಗಳಲ್ಲಿ ಭಾರತದ ಪರ ಈಗ ಜಸ್‌ಪ್ರೀತ್ ಬುಮ್ರಾ ಮಾತ್ರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಯ್ಕೆಯಾದ ಬೌಲರ್‌ಗಳು ಉತ್ತಮವಾಗಿ ಆಡಲಿ ಎಂದು ಆಶಿಸುತ್ತೇನೆ. ಅವರಿಗೆ ಬೌಲಿಂಗ್ ಮಾಡಲು ಉತ್ತಮ ಪರಿಸ್ಥಿತಿಗಳಿವೆ. ಆದರೆ, ಅವಕಾಶ ಸಿಕ್ಕಾಗ ತಮ್ಮ ಬೆನ್ನಿಗೆ ತಂಡ ಎಷ್ಟು ದಿನ ನಿಲ್ಲಲಿದೆ ಎಂಬ ಆತಂಕ ಅವರಲ್ಲಿರಬಹುದು’ ಎಂದು ಬರೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More