AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಆಸೆ RCB… ದೊಡ್ಡ ಕನಸನ್ನು ಬಿಚ್ಚಿಟ್ಟ ಜೂನಿಯರ್ ಸೆಹ್ವಾಗ್

ತಂದೆಯಂತೆಯೇ ನಿರ್ಭೀತ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆಯುತ್ತಿರುವ ಜೂನಿಯರ್ ಸೆಹ್ವಾಗ್ ಖ್ಯಾತಿಯ ಆರ್ಯವೀರ್ ಸೆಹ್ವಾಗ್, ಇದೀಗ ಐಪಿಎಲ್ 2027ರ ಮಿನಿ ಹರಾಜಿನ ಕೇಂದ್ರಬಿಂದುವಾಗಿದ್ದಾರೆ. ₹30 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿಗೆ ಎಂಟ್ರಿ ಕೊಟ್ಟಿರುವ ಈ ಯುವ ಪ್ರತಿಭೆ, ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಜೊತೆ ಆಡಲು ಆರ್‌ಸಿಬಿ  ತಂಡವನ್ನು ಸೇರುವ ಇಂಗಿತವನ್ನು ಬಿಚ್ಚಿಟ್ಟಿದ್ದಾರೆ.

ನನ್ನ ಆಸೆ RCB… ದೊಡ್ಡ ಕನಸನ್ನು ಬಿಚ್ಚಿಟ್ಟ ಜೂನಿಯರ್ ಸೆಹ್ವಾಗ್
Aaryavir Sehwag Image Credit source: x.com
ಝಾಹಿರ್ ಯೂಸುಫ್
|

Updated on: Nov 26, 2026 | 10:09 PM

Share

ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಇದೀಗ ಐಪಿಎಲ್‌ಗೆ ಎಂಟ್ರಿ ಕೊಡಲು ಸಜ್ಜಾಗಿ ನಿಂತಿದ್ದಾರೆ. 2027ರ ಐಪಿಎಲ್ ಮಿನಿ ಹರಾಜಿಗಾಗಿ ₹30 ಲಕ್ಷ ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿರುವ 19 ವರ್ಷದ ಈ ಯುವ ಬ್ಯಾಟರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸೇರುವ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ, ತಮ್ಮ ರೋಲ್ ಮಾಡೆಲ್ ವಿರಾಟ್ ಕೊಹ್ಲಿ!

ಇತ್ತೀಚೆಗೆ CREX ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಆರ್ಯವೀರ್ ಸೆಹ್ವಾಗ್, ತಮ್ಮ ಐಪಿಎಲ್ ಕನಸುಗಳು ಮತ್ತು ನೆಚ್ಚಿನ ಆಟಗಾರರ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

“ನಾನು ಬಾಲ್ಯದಿಂದಲೂ ವಿರಾಟ್ ಕೊಹ್ಲಿ ಅವರ ಆಟವನ್ನು ನೋಡುತ್ತಾ ಬೆಳೆದವನು. ಅವರು ಈ ಯುಗದ ಶ್ರೇಷ್ಠ ಬ್ಯಾಟರ್. ಅವರೊಂದಿಗೆ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡು, ಬ್ಯಾಟಿಂಗ್ ಸಲಹೆಗಳನ್ನು ಪಡೆಯಬೇಕೆಂಬುದೇ ನನ್ನ ಆಸೆ. ಆ ಒಂದು ಅವಕಾಶಕ್ಕಾಗಿ ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ” ಎಂದು ಆರ್ಯವೀರ್ ಸೆಹ್ವಾಗ್ ಹೇಳಿದ್ದಾರೆ.

ಈ ಮೂಲಕ ಆರ್ಯವೀರ್ ಸೆಹ್ವಾಗ್ ಪರೋಕ್ಷವಾಗಿ ಆರ್‌ಸಿಬಿ ಪರ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ವಿರಾಟ್ ಕೊಹ್ಲಿ ಐಪಿಎಲ್ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಹೀಗಾಗಿ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಬೇಕೆಂದರೆ ಆರ್ಯವೀರ್ ಆರ್‌ಸಿಬಿ ತಂಡವನ್ನೇ ಸೇರಬೇಕು. ಆದ್ದರಿಂದ ಈ ಬಾರಿಯ ಮಿನಿ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ಜೂನಿಯರ್ ಸೆಹ್ವಾಗ್ ಅವರನ್ನು ಖರೀದಿಸಲಿದೆಯಾ ಎಂಬುದೇ ಈಗಿರುವ ದೊಡ್ಡ ಕುತೂಹಲ.

ಇನ್ನು ವಿರಾಟ್ ಕೊಹ್ಲಿ ಮಾತ್ರವಲ್ಲದೆ, ಗುಜರಾತ್ ಟೈಟಾನ್ಸ್ ನಾಯಕ ಶುಭ್‌ಮನ್ ಗಿಲ್ ಮತ್ತು ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಶೈಲಿಯಿಂದಲೂ ತಾವು ಬಹಳಷ್ಟು ಕಲಿಯಲು ಬಯಸುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ, “ಹರಾಜಿನಲ್ಲಿ ಯಾವ ಫ್ರಾಂಚೈಸಿ ನನ್ನನ್ನು ಆಯ್ಕೆ ಮಾಡಿದರೂ ನಾನು ಕೃತಜ್ಞನಾಗಿರುತ್ತೇನೆ. ಒಂದು ವೇಳೆ ಆರ್‌ಸಿಬಿಗೆ ಆಯ್ಕೆಯಾಗದಿದ್ದರೂ, ಐಪಿಎಲ್‌ನಲ್ಲಿ ಕೊಹ್ಲಿ ವಿರುದ್ಧ ಆಡುವಾಗಲಾದರೂ ಅವರನ್ನು ಭೇಟಿಯಾಗಿ ಮಾತನಾಡುವ ಅವಕಾಶ ಸಿಗುತ್ತದೆ,” ಎಂದು ಆರ್ಯವೀರ್ ಪ್ರಬುದ್ಧ ಉತ್ತರ ನೀಡಿದ್ದಾರೆ.

ಭರ್ಜರಿ ಫಾರ್ಮ್‌ನಲ್ಲಿರುವ ಆರ್ಯವೀರ್:

2026ರ ಅಂಡರ್-19 ಏಷ್ಯಾ ಕಪ್‌ನಲ್ಲಿ ಆರ್ಯವೀರ್ ಸೆಹ್ವಾಗ್ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. 5 ಇನ್ನಿಂಗ್ಸ್‌ಗಳಿಂದ 90.25ರ ಸರಾಸರಿಯಲ್ಲಿ 361 ರನ್ ಗಳಿಸುವ ಮೂಲಕ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಹಾಗೂ ‘ಸರಣಿ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಯುಎಇ ವಿರುದ್ಧ 160 ರನ್‌ಗಳ ಭರ್ಜರಿ ಶತಕ ಮತ್ತು ಪಾಕಿಸ್ತಾನ್ ವಿರುದ್ಧದ ಫೈನಲ್‌ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದೇ ಭರ್ಜರಿ ಫಾರ್ಮ್‌ನೊಂದಿಗೆ ಇದೀಗ ಆರ್ಯವೀರ್ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: IPL 2027: ಬೆನ್ ಸ್ಟೋಕ್ಸ್‌ಗೆ ಗ್ರೀನ್ ಸಿಗ್ನಲ್, ಹ್ಯಾರಿ ಬ್ರೂಕ್‌ಗೆ ನಿಷೇಧ!

ಅದರಂತೆ, ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಆರ್ಯವೀರ್ ಸೆಹ್ವಾಗ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ದೇಶೀಯ ಯುವ ಬ್ಯಾಟರ್‌ಗಳ ಹುಡುಕಾಟದಲ್ಲಿರುವ ಆರ್‌ಸಿಬಿ ಹಾಗೂ ತಂದೆ ವೀರೇಂದ್ರ ಸೆಹ್ವಾಗ್ ಅವರ ಹಳೆಯ ತಂಡ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಜೂನಿಯರ್ ಸೆಹ್ವಾಗ್ ಖರೀದಿಗೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಅಂತಿಮವಾಗಿ ತಮ್ಮ ಆಸೆಯಂತೆ ಆರ್ಯವೀರ್ ಆರ್‌ಸಿಬಿ ಜೆರ್ಸಿ ತೊಟ್ಟು ವಿರಾಟ್ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುತ್ತಾರಾ, ತವರು ತಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುತ್ತಾರಾ, ಅಥವಾ ಬೇರೊಂದು ತಂಡದ ಪಾಲಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More