ಆರ್ಯವೀರ್ ಸೆಹ್ವಾಗ್ ಬಗ್ಗೆ ವೈಭವ್ ಹಾಕಿದ ‘2 ಪದಗಳ’ ಪೋಸ್ಟ್ ವೈರಲ್!
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಭಾರತ U19 ಏಷ್ಯಾ ಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನಲ್ಲಿ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ನೀಡಿದ ಅಮೋಘ ಪ್ರದರ್ಶನಕ್ಕೆ ಕ್ರಿಕೆಟ್ ಲೋಕವೇ ಫಿದಾ ಆಗಿದೆ. ಇತ್ತ ಬಿಹಾರ ತಂಡವನ್ನು ಮುನ್ನಡೆಸುತ್ತಿದ್ದ ಯುವ ತಾರೆ ವೈಭವ್ ಸೂರ್ಯವಂಶಿ, ಆರ್ಯವೀರ್ ಆಟವನ್ನು ಮೆಚ್ಚಿ ಹಂಚಿಕೊಂಡಿರುವ ಕೇವಲ '2 ಪದಗಳ' ಇನ್‌ಸ್ಟಾಗ್ರಾಮ್ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

2026ರ ಪುರುಷರ ಅಂಡರ್-19 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು ರೋಚಕ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ, ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ, ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಅವರನ್ನು ಶ್ಲಾಘಿಸಿ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ಆದ ಆ 2 ಪದಗಳು ಯಾವುವು?
ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆರ್ಯವೀರ್ ಸೆಹ್ವಾಗ್ ಅಗ್ರಸ್ಥಾನದಲ್ಲಿರುವ ಟಿವಿ ದೃಶ್ಯದ ಫೋಟೋವನ್ನು ವೈಭವ್ ಸೂರ್ಯವಂಶಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಆರ್ಯವೀರ್ ಅವರನ್ನು ಟ್ಯಾಗ್ ಮಾಡಿ “Star boiiiiii” (ಸ್ಟಾರ್ ಬೊಯ್) ಎಂದು ಕೇವಲ ಎರಡು ಪದಗಳಲ್ಲಿ ಕ್ಯಾಪ್ಷನ್ ನೀಡಿದ್ದಾರೆ.
ಇದರ ಜೊತೆಗೆ, ಭಾರತ ತಂಡವು ಗೆಲುವಿನ ರನ್ ಬಾರಿಸಿದ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ವೈಭವ್, “ಅಭಿನಂದನೆಗಳು, ಓಹ್ ಮ್ಯಾನ್… ಎಂತಹ ಅದ್ಭುತ ಪಂದ್ಯವಿದು!” ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ವೈಭವ್ ಸೂರ್ಯವಂಶಿ ಅವರು ಅಂದು ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಬಿಹಾರ ತಂಡವನ್ನು ಮುನ್ನಡೆಸಿದ ನಂತರ, ಒಮಾನ್‌ನಲ್ಲಿ ನಡೆದ ಈ ಫೈನಲ್ ಪಂದ್ಯವನ್ನು ವೀಕ್ಷಿಸಿ ತಂಡವನ್ನು ಹುರಿದುಂಬಿಸಿದ್ದಾರೆ.

ವೈಭವ್ ಸೂರ್ಯವಂಶಿ ಪೋಸ್ಟ್
ಟೂರ್ನಿಯಲ್ಲಿ ಆರ್ಯವೀರ್ ಸೆಹ್ವಾಗ್ ಅಬ್ಬರ:
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ‘ಸರಣಿ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
- ಅತಿ ಹೆಚ್ಚು ರನ್: 5 ಪಂದ್ಯಗಳಲ್ಲಿ 1 ಶತಕ ಹಾಗೂ 3 ಅರ್ಧಶತಕಗಳ ನೆರವಿನಿಂದ ಬರೋಬ್ಬರಿ 361 ರನ್ ಕಲೆಹಾಕಿ ಟೂರ್ನಿಯ ಟಾಪ್ ಸ್ಕೋರರ್ ಎನಿಸಿಕೊಂಡರು.
- ಫೈನಲ್‌ನಲ್ಲಿ ಮಿಂಚಿಂಗ್: ಪಾಕಿಸ್ತಾನ ನೀಡಿದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕನಾಗಿ ಕಣಕ್ಕಿಳಿದ ಆರ್ಯವೀರ್, 61 ಎಸೆತಗಳಲ್ಲಿ 58 ರನ್ ಸಿಡಿಸಿ ಭರ್ಜರಿ ಆರಂಭ ಒದಗಿಸಿದರು.
ಫೈನಲ್‌ನಲ್ಲಿ ರೋಚಕ ಜಯ:
ಶನಿವಾರ (ನವೆಂಬರ್ 14) ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ನೀಡಿದ 338 ರನ್‌ಗಳ ಬೃಹತ್ ಗುರಿಯನ್ನು ಭಾರತ ಕೊನೆಯ ಎಸೆತದಲ್ಲಿ ತಲುಪುವ ಮೂಲಕ ರೋಚಕ ಜಯ ಸಾಧಿಸಿತು. ಆರ್ಯವೀರ್ ಅವರ ಅರ್ಧಶತಕದ ಬಳಿಕ ನಾಯಕ ಲಕ್ಷ್ಯ ರೈಚಂದಾನಿ (80 ರನ್) ಜವಾಬ್ದಾರಿಯುತ ಆಟವಾಡಿದರು. ಅಂತಿಮ ಹಂತದಲ್ಲಿ ಮೋಹಿತ್ ಉಲ್ವಾ (49) ಮತ್ತು ಮನಲ್ ಚೌಹಾಣ್ (47) ಅವರ ನಿರ್ಣಾಯಕ ಆಟದ ನೆರವಿನಿಂದ ಭಾರತ ದಾಖಲೆಯ 9ನೇ ಬಾರಿಗೆ U19 ಏಷ್ಯಾ ಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
Published On - 9:10 am, Sun, 15 November 26




