AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10,624 ರನ್, 20 ಶತಕ: 32ನೇ ವಯಸ್ಸಿಗೆ ‘ಬಾಬಾ’ ವಿದಾಯ!

ಒಂದು ದಶಕಕ್ಕೂ ಹೆಚ್ಚು ಕಾಲ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ, 10 ಸಾವಿರಕ್ಕೂ ಅಧಿಕ ರನ್ ಗಳಿಸಿದರೂ ಟೀಮ್ ಇಂಡಿಯಾದ ಬಾಗಿಲು ತೆರೆಯದ ನಿರಾಸೆಯೊಂದಿಗೆ ಬಾಬಾ ಅಪರಾಜಿತ್ ತಮ್ಮ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ. 2012ರ ಅಂಡರ್-19 ವಿಶ್ವಕಪ್ ವಿಜೇತ ತಂಡದ ಹೀರೋ ಎನಿಸಿದ್ದ ಅವರು, 32ನೇ ವಯಸ್ಸಿನಲ್ಲಿಯೇ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

10,624 ರನ್, 20 ಶತಕ: 32ನೇ ವಯಸ್ಸಿಗೆ 'ಬಾಬಾ' ವಿದಾಯ!
Baba AparajithImage Credit source: GettyImages
ಝಾಹಿರ್ ಯೂಸುಫ್
|

Updated on: Nov 26, 2026 | 3:55 PM

Share

ಭಾರತೀಯ ದೇಶೀಯ ಕ್ರಿಕೆಟ್‌ನ ಅತ್ಯಂತ ಸ್ಥಿರ ಹಾಗೂ ನಂಬಿಕಸ್ತ ಆಟಗಾರರಲ್ಲಿ ಒಬ್ಬರಾದ ತಮಿಳುನಾಡು ತಂಡದ ಮಾಜಿ ನಾಯಕ ಬಾಬಾ ಅಪರಾಜಿತ್, ತಮ್ಮ 15 ವರ್ಷಗಳ ವೃತ್ತಿಪರ ಕ್ರಿಕೆಟ್ ಜೀವನಕ್ಕೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. 32ನೇ ವಯಸ್ಸಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿರುವ ಅವರು, ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳುತ್ತಿರುವುದಾಗಿ ಪ್ರಕಟಿಸಿದ್ದಾರೆ.

2026–27ರ ದೇಶೀಯ ಸೀಸನ್​ನ ಮಧ್ಯದಲ್ಲೇ ಈ ನಿರ್ಧಾರ ಪ್ರಕಟಿಸಿರುವ ಅಪರಾಜಿತ್, ಜನವರಿ 24, 2026 ರಂದು ಚಂಡೀಗಢ ವಿರುದ್ಧ ಕೇರಳ ಪರ ಆಡಿದ ಪಂದ್ಯವೇ ತಮ್ಮ ವೃತ್ತಿಜೀವನದ ಕೊನೆಯ ಪ್ರಥಮ ದರ್ಜೆ ಪಂದ್ಯವಾಗಿತ್ತು ಎಂದು ತಿಳಿಸಿದ್ದಾರೆ.

ಅಂಡರ್-19 ವಿಶ್ವಕಪ್ ಹೀರೋ:

2012ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗುವಲ್ಲಿ ಬಾಬಾ ಅಪರಾಜಿತ್ ಪ್ರಮುಖ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿ 171 ರನ್ ಗಳಿಸಿದ್ದಲ್ಲದೆ, ತಮ್ಮ ಆಫ್-ಸ್ಪಿನ್ ಬೌಲಿಂಗ್ ಮೂಲಕ 5 ವಿಕೆಟ್‌ಗಳನ್ನು ಕಬಳಿಸಿದ್ದರು.

ವಿಶೇಷವಾಗಿ ಪಾಕಿಸ್ತಾನ್ ವಿರುದ್ಧದ ಕ್ವಾರ್ಟರ್ ಫೈನಲ್ ಮತ್ತು ನ್ಯೂಝಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಗಳಲ್ಲಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಗೆದ್ದು ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ದೇಶೀಯ ಕ್ರಿಕೆಟ್‌ನ ಆಧಾರಸ್ತಂಭ:

ತಮ್ಮ 17ನೇ ವಯಸ್ಸಿನಲ್ಲೇ ತಮಿಳುನಾಡು ತಂಡಕ್ಕೆ ಪಾದಾರ್ಪಣೆ ಮಾಡಿದ ಬಾಬಾ ಅಪರಾಜಿತ್, ಒಂದು ದಶಕಕ್ಕೂ ಹೆಚ್ಚು ಕಾಲ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದರು. ತಮ್ಮ ಅವಳಿ ಸಹೋದರ ಬಾಬಾ ಇಂದ್ರಜಿತ್ ಅವರೊಂದಿಗೆ ಸೇರಿ ತಮಿಳುನಾಡು ತಂಡಕ್ಕೆ ಹಲವು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದರು.2024–25ರ ಋತುವಿನಲ್ಲಿ ವೃತ್ತಿಪರ ಆಟಗಾರನಾಗಿ ಕೇರಳ ತಂಡವನ್ನು ಸೇರಿಕೊಂಡಿದ್ದರು.

ತಮಿಳುನಾಡು ತಂಡವು 2017–18ರ ವಿಜಯ್ ಹಝಾರೆ ಟ್ರೋಫಿ ಹಾಗೂ 2020–21 ಮತ್ತು 2021–22ರ  ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲ್ಲುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡಗಳ ಭಾಗವಾಗಿದ್ದರೂ, ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. 2015ರಲ್ಲಿ ಭಾರತ ‘ಎ’ ತಂಡವನ್ನೂ ಪ್ರತಿನಿಧಿಸಿದ್ದರು.

ವೃತ್ತಿಜೀವನದ ಅಂಕಿಅಂಶಗಳು:

ಮಾದರಿ ಪಂದ್ಯಗಳು ಒಟ್ಟು ರನ್ ಸರಾಸರಿ ಶತಕ / ಅರ್ಧಶತಕ ಗರಿಷ್ಠ ಸ್ಕೋರ್ ವಿಕೆಟ್‌ಗಳು
ಪ್ರಥಮ ದರ್ಜೆ 102 5,199 39.68 12 / 27 212 76
ಲಿಸ್ಟ್-ಎ 114 4,278 45.03 8 / 30 137 65
ಟಿ20 63 1,147 27.30 0 / 4 67 31
ಒಟ್ಟು 279 10,624 — 20 / 61 212 172

ಮುಂದಿನ ನಡೆಯೇನು?

ಆಟಗಾರನಾಗಿ ನಿವೃತ್ತಿಯಾಗಿದ್ದರೂ ಕ್ರಿಕೆಟ್‌ನೊಂದಿಗಿನ ನಂಟನ್ನು ಕಡಿದುಕೊಳ್ಳುವುದಿಲ್ಲ ಎಂಬುದನ್ನು ಬಾಬಾ ಅಪರಾಜಿತ್ ಖಚಿತಪಡಿಸಿದ್ದಾರೆ. ಈಗಾಗಲೇ ಬಿಸಿಸಿಐ ಲೆವೆಲ್-2 ತರಬೇತಿ ಪ್ರಮಾಣಪತ್ರ ಪಡೆದಿರುವ ಅವರು, 2026ರ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವುದರಿಂದ ಹಿಂದೆ ಸರಿದು, ಚೆಪಾಕ್ ಸೂಪರ್ ಗಿಲ್ಲೀಸ್ ತಂಡದ ಸಹಾಯಕ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಅವರು ಶೀಘ್ರದಲ್ಲೇ ಪೂರ್ಣಪ್ರಮಾಣದ ತರಬೇತುದಾರರಾಗಿ ಹೊಸ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More