AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಪ್ರತ್ಯೇಕ ಒಟಿಟಿಯಲ್ಲಿ ‘ಹನುಮಾನ್ ಅಂಶ್’ ಲಭ್ಯ; ಕನ್ನಡ ಸೇರಿ 6 ಭಾಷೆಗಳಲ್ಲಿ ಪ್ರಸಾರ

ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಚಿತ್ರವು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿದೆ. ಕೇವಲ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ವಿಶ್ವದಾದ್ಯಂತ ಬರೋಬ್ಬರಿ 450 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿ ದಾಖಲೆ ಬರೆದಿದೆ. ಈಗ ಎರಡು ಪ್ರತ್ಯೇಕ ಒಟಿಟಿಗಳಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಎರಡು ಪ್ರತ್ಯೇಕ ಒಟಿಟಿಯಲ್ಲಿ ‘ಹನುಮಾನ್ ಅಂಶ್’ ಲಭ್ಯ; ಕನ್ನಡ ಸೇರಿ 6 ಭಾಷೆಗಳಲ್ಲಿ ಪ್ರಸಾರ
Hanuman Ansh Poster
ಮದನ್​ ಕುಮಾರ್​
|

Updated on: Nov 26, 2026 | 3:48 PM

Share

2026ರ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾ ‘ಹನುಮಾನ್ ಅಂಶ್’ ಒಟಿಟಿ ಬಿಡುಗಡೆಯಲ್ಲಿ ಹೊಸ ಹಾದಿ ಹಿಡಿದಿದೆ. ಎರಡು ಪ್ರತ್ಯೇಕ ಒಟಿಟಿ ವೇದಿಕೆಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಈ ಚಿತ್ರ ಸ್ಟ್ರೀಮಿಂಗ್ ಆಗಲಿದ್ದು, ಒಟ್ಟು ಆರು ಭಾಷೆಗಳಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ನವೆಂಬರ್ 27ರಂದು ‘ಸೋನಿ ಲಿವ್’ ಒಟಿಟಿ ಮೂಲಕ ಹಿಂದಿ ಭಾಷೆಯಲ್ಲಿ ಈ ಚಿತ್ರ ಪ್ರೀಮಿಯರ್ ಆಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ‘ನೆಟ್‌ಫ್ಲಿಕ್ಸ್’ ಮಹತ್ವದ ಘೋಷಣೆ ಮಾಡಿದ್ದು, ನವೆಂಬರ್ 29ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಗುಜರಾತಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

‘ನಂಬಿಕೆಯೇ ಅವರ ಜೀವನವನ್ನು ಬದಲಿಸಿತು. ಅವರ ಭಕ್ತಿ ಸಾವಿರಾರು ಜನರ ಬದುಕನ್ನು ಬದಲಿಸಿತು. ಹನುಮಂತನ ಪರಮ ಭಕ್ತನ ದೈವಿಕ ಕಥೆಯನ್ನು ಈಗ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿ. ನವೆಂಬರ್ 29ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಗುಜರಾತಿ ಭಾಷೆಗಳಲ್ಲಿ ಹನುಮಾನ್ ಅಂಶ್ ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ಬಿಡುಗಡೆಯಾಗಲಿದೆ’ ಎಂದು ನೆಟ್‌ಫ್ಲಿಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

ಚಿತ್ರದ ನಿರ್ಮಾಪಕಿ ಅನುಪ್ರಿಯಾ ನಾಗರ್ ಅವರು ‘ಹನುಮಾನ್ ಅಂಶ್’ ಚಿತ್ರದ ಮುಂದುವರಿದ ಭಾಗ ನಿರ್ಮಾಣವಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ. ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದೇ ಈ ಸಿನಿಮಾ ಮಾಡುವ ಹಿಂದಿನ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದಾರೆ.

‘ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ನೀಮ್ ಕರೋಲಿ ಬಾಬಾ ಅವರ ಕಥೆಗಳನ್ನು ಯುವ ಪ್ರೇಕ್ಷಕರಿಗೆ, ವಿಶೇಷವಾಗಿ ಜೆನ್ ಜೀ ಪೀಳಿಗೆಗೆ ತಲುಪಿಸುವುದು ನನ್ನ ಏಕೈಕ ಗುರಿಯಾಗಿತ್ತು. ನಮಗೆ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ವಿದೇಶಿಯರ ಮೂಲಕ ತಿಳಿಯುವಂತಾಗಿದೆ. ನಾನೂ ಸಹ ವಿದೇಶಿಯರ ಮೂಲಕವೇ ಅವರ ಬಗ್ಗೆ ತಿಳಿದುಕೊಂಡೆ. ಭಾರತದ ಯುವತಿಯಾಗಿ, ನಮ್ಮದೇ ನೆಲದ ಸಂತರ ಕಥೆಯನ್ನು ನಮ್ಮ ಮೂಲಕವೇ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ನನಗೆ ಬೇಸರವಾಗಿತ್ತು’ ಎಂದು ಅನುಪ್ರಿಯಾ ಹೇಳಿದ್ದಾರೆ.

ಈ ಸಿನಿಮಾಗಾಗಿ ತಾವು ಮಾಡಿದ ವೈಯಕ್ತಿಕ ಹೂಡಿಕೆಯ ಬಗ್ಗೆಯೂ ಅನುಪ್ರಿಯಾ ಹಂಚಿಕೊಂಡಿದ್ದಾರೆ. ‘ನಾನು ಯುಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂರು ವರ್ಷಗಳ ಅವಧಿಯಲ್ಲಿ ಪಾರ್ಟ್-ಟೈಮ್ ಕೆಲಸಗಳನ್ನು ಮಾಡಿ ಸಂಪಾದಿಸಿ ಉಳಿಸಿದ್ದ ಹಣವನ್ನು ಈ ಚಿತ್ರಕ್ಕೆ ಹಾಕಿದ್ದೇನೆ. ನನ್ನ ಜೀವನದ ಸುಂದರ ಘಟ್ಟದಲ್ಲಿ ಮಹಾರಾಜ್ ಜಿ ಅವರ ಪರಿಚಯವಾದಾಗ, ಈ ಪ್ರಾಜೆಕ್ಟ್ ಮಾಡಲೇಬೇಕೆಂದು ನಿರ್ಧರಿಸಿ ರಿಸ್ಕ್ ತೆಗೆದುಕೊಂಡೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಹನುಮಾನ್ ಅಂಶ್’ ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ; ತಡವಾಗಿ ಬೆಳಕಿಗೆ ಬಂತು ವಿಷಯ

‘ಡಿವೈನ್ ಡಿಟೂರ್’ ಪುಸ್ತಕವನ್ನು ಆಧರಿಸಿದ ‘ಹನುಮಾನ್ ಅಂಶ್’ ಚಿತ್ರದ ಕಥೆಯಲ್ಲಿ ಶೋಭಿನವ್ ಸತ್ಯ ಅವರು ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ನಟಿಸಿದ್ದಾರೆ. ತಾಯಿಯ ಮರಣದ ನಂತರ ಆಧ್ಯಾತ್ಮಿಕ ಹಾದಿಯತ್ತ ತಿರುಗುವ ಲಕ್ಷ್ಮೀ ನಾರಾಯಣ್ ಎಂಬ ಯುವಕನ ಪಯಣ ಹಾಗೂ ಬಾಬಾ ಅವರ ಪ್ರೀತಿ, ಕರುಣೆ ಮತ್ತು ನಿಸ್ವಾರ್ಥ ಸೇವೆಯ ಸಂದೇಶಗಳನ್ನು ಚಿತ್ರ ಒಳಗೊಂಡಿದೆ. ತಾರಾಗಣದಲ್ಲಿ ವಿಹಾನ್ ಶೆಡ್ಗೆ, ಚಂದನ್ ಕೆ. ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ ಸೇರಿದಂತೆ ಹಲವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More