ಆರಂಭಿಕರ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ: ಫೈನಲ್ ಕನಸು ನುಚ್ಚುನೂರು!
ಶ್ರೀಲಂಕಾ ಎ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡದ ಪರ ಅಭಿಷೇಕ್ ಶರ್ಮಾ (78), ತಿಲಕ್ ವರ್ಮಾ (53) ಹಾಗೂ ಶಹಬಾJf ಅಹ್ಮದ್ (54*) ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳೊಂದಿಗೆ ಟೀಮ್ ಇಂಡಿಯಾ 50 ಓವರ್ಗಳಲ್ಲಿ 317 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ಲಂಕಾ ಪಡೆ ಯಶಸ್ವಿಯಾಗಿದೆ.

ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಶ್ರೀಲಂಕಾ ಎ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 317 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಆರಂಭಿಕರಿಬ್ಬರು ಭರ್ಜರಿ ಆರಂಭ ಒದಗಿಸಿದ್ದರು.
ಆರಂಭಿಕರ ಆರ್ಭಟ:
318 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಶ್ರೀಲಂಕಾ ಎ ತಂಡಕ್ಕೆ ಆರಂಭಿಕ ಜೋಡಿಯಾದ ಸಿನೆತ್ ಜಯವರ್ಧನೆ ಮತ್ತು ಲಸಿತ್ ಕ್ರೂಸ್‌ಪುಲ್ಲೆ ಮೊದಲ ವಿಕೆಟ್‌ಗೆ 174 ರನ್‌ಗಳ ಭರ್ಜರಿ ಜೊತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು
ಮೊದಲ 10 ಓವರ್‌ಗಳ ಪವರ್‌ಪ್ಲೇನಲ್ಲೇ ವಿಕೆಟ್ ನಷ್ಟವಿಲ್ಲದೆ 85 ರನ್ ಕಲೆಹಾಕಿದ ಈ ಜೋಡಿ ಭಾರತೀಯ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದ ಸಿನೆತ್ ಜಯವರ್ಧನೆ, 70 ಎಸೆತಗಳಲ್ಲಿ 10 ಫೋರ್ ಮತ್ತು 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 105 ರನ್ ಸಿಡಿಸಿ 22ನೇ ಓವರ್‌ನಲ್ಲಿ ಶಹಬಾಝ್ ಅಹ್ಮದ್ ಅವರಿಗೆ ವಿಕೆಟ್ ಒಪ್ಪಿಸಿದರು.
ಜಯವರ್ಧನೆ ಔಟಾದ ಬಳಿಕವೂ ಜವಾಬ್ದಾರಿಯುತ ಆಟ ಮುಂದುವರಿಸಿದ ಮತ್ತೋರ್ವ ಆರಂಭಿಕ ಆಟಗಾರ ಲಸಿತ್ ಕ್ರೂಸ್‌ಪುಲ್ಲೆ, ಆಕರ್ಷಕ ಶತಕ (107 ಎಸೆತಗಳಲ್ಲಿ 116 ರನ್) ಬಾರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ಇವರಿಬ್ಬರ ಶತಕದ ಇನ್ನಿಂಗ್ಸ್‌ಗಳು ಶ್ರೀಲಂಕಾ ಎ ತಂಡದ ರನ್ ಚೇಸ್ ಅನ್ನು ಸುಲಭಗೊಳಿಸಿ, ಭಾರತದ ಬೌಲಿಂಗ್ ಪಡೆಯನ್ನು ಒತ್ತಡಕ್ಕೆ ಸಿಲುಕಿಸಿದವು.
ಫೈನಲ್ಗೆ ಎಂಟ್ರಿ:
ಆರಂಭಿಕರು ಹಾಕಿಕೊಟ್ಟ ಭದ್ರ ಬುನಾದಿಯನ್ನು ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ವಿಕೆಟ್ ಕೀಪರ್ ನಿಶಾನ್ ಮದುಷ್ಕ (58) ಹಾಗೂ ನಾಯಕ ಪವನ್ ರತ್ನಾಯಕೆ (31) ಸಮರ್ಥವಾಗಿ ಮುನ್ನಡೆಸಿದರು. ಈ ಮೂಲಕ ಶ್ರೀಲಂಕಾ ತಂಡ 41.3 ಓವರ್ಗಳಲ್ಲಿ 318 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಶ್ರೀಲಂಕಾ ಎ ತಂಡವು ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಫೈನಲ್ಗೆ ಲಗ್ಗೆಯಿಟ್ಟಿದೆ.
ಇತ್ತ ಯುಎಇ ವಿರುದ್ಧ ಪ್ರಚಂಡ ಪ್ರದರ್ಶನ ನೀಡಿ ಇಡೀ ವಿಶ್ವದ ಗಮನ ಸೆಳೆದಿದ್ದ ಭಾರತ ಎ ತಂಡವು ಲಂಕನ್ನರ ವಿರುದ್ಧ ಮಂಡಿಯೂರುವ ಮೂಲಕ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಅಭಿಯಾನವನ್ನು ಅಂತ್ಯಗೊಳಿಸಿದೆ.
ಭಾರತ ಎ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ(ನಾಯಕ), ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ರಿಂಕು ಸಿಂಗ್, ಸೂರ್ಯಾಂಶ್ ಶೆಡ್ಗೆ, ಶಹಬಾಝ್ ಅಹ್ಮದ್, ತನುಷ್ ಕೋಟ್ಯಾನ್, ಹರ್ಷ್ ದುಬೆ, ಹರ್ಷಿತ್ ರಾಣಾ, ಅರ್ಷದ್ ಖಾನ್.
ಇದನ್ನೂ ಓದಿ: IPL 2027: ಬೆನ್ ಸ್ಟೋಕ್ಸ್‌ಗೆ ಗ್ರೀನ್ ಸಿಗ್ನಲ್, ಹ್ಯಾರಿ ಬ್ರೂಕ್‌ಗೆ ನಿಷೇಧ!
ಶ್ರೀಲಂಕಾ ಎ (ಪ್ಲೇಯಿಂಗ್ XI): ಲಸಿತ್ ಕ್ರೂಸ್ಪುಲ್ಲೆ, ಸಿನೆತ್ ಜಯವರ್ದನ, ನಿಶಾನ್ ಮದುಷ್ಕ (ವಿಕೆಟ್ ಕೀಪರ್), ಪವನ್ ರತ್ನಾಯಕೆ (ನಾಯಕ), ನಿಪುನ್ ಧನಂಜಯ, ಜನಿತ್ ಲಿಯಾನಗೆ, ವನುಜಾ ಸಹನ್, ವಿಜಯಕಾಂತ್ ವ್ಯಾಸಕಾಂತ್, ರವಿಂದು ಫೆರ್ನಾಂಡೋ, ಲಹಿರು ಸಮರಕೋನ್, ಗರುಕ ಸಂಕೇತ್.




