ಏಷ್ಯಾಕಪ್ ಟೂರ್ನಿಯಿಂದ ರಜತ್ ಪಾಟಿದಾರ್ ಔಟ್!
ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಭಾರತ ‘ಎ’ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಜಾಗಕ್ಕೆ ರಣಜಿ ಟ್ರೋಫಿಯಲ್ಲಿ ಸತತ ದ್ವಿಶತಕ ಸಿಡಿಸಿ ಅಬ್ಬರಿಸಿರುವ ಯುವ ದಾಂಡಿಗ ಆಯುಷ್ ಬದೋನಿ ಆಯ್ಕೆಯಾಗಿದ್ದಾರೆ.

ಮುಂಬರುವ ಎಸಿಸಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಗೂ ಮುನ್ನ ಭಾರತ ‘ಎ’ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟಿದಾರ್ ತಂಡದಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಯುವ ಆಲ್‌ರೌಂಡರ್ ಆಯುಷ್ ಬದೋನಿ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ.
ಕಳೆದ ಕೆಲವು ಸಮಯದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಜತ್ ಪಾಟಿದಾರ್, ತಮ್ಮ ಫಿಟ್‌ನೆಸ್ ನಿರ್ವಹಣೆಯ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ 50 ಓವರ್‌ಗಳ (ಏಕದಿನ) ಮಾದರಿಯ ಕ್ರಿಕೆಟ್ ಆಯ್ಕೆಗೆ ತಮ್ಮನ್ನು ಪರಿಗಣಿಸಬೇಡಿ ಎಂದು ರಜತ್ ಸ್ವತಃ ಬಿಸಿಸಿಐ ಆಯ್ಕೆ ಸಮಿತಿಗೆ ಮನವಿ ಮಾಡಿದ್ದರು. ಅವರ ಕೋರಿಕೆಯನ್ನು ಪುರಸ್ಕರಿಸಿರುವ ಮಂಡಳಿ, ಅವರಿಗೆ ವಿಶ್ರಾಂತಿ ನೀಡಿದೆ.
ರಿಂಕು ಸಿಂಗ್‌ಗೆ ಉಪನಾಯಕನ ಪಟ್ಟ:
ಈ ಹಿಂದೆ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಗೆ ರಜತ್ ಪಾಟಿದಾರ್ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಅವರು ಹೊರಗುಳಿದಿರುವ ಕಾರಣ ಉಪನಾಯಕ ಸ್ಥಾನವನ್ನು ರಿಂಕು ಸಿಂಗ್‌ಗೆ ವಹಿಸಲಾಗಿದೆ. ಇನ್ನು ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಎ ತಂಡವನ್ನು ತಿಲಕ್ ವರ್ಮಾ ಮುನ್ನಡೆಸಲಿದ್ದಾರೆ.
ಬದೋನಿಗೆ ಒಲಿದ ಅದೃಷ್ಟ:
ರಜತ್ ಪಾಟಿದಾರ್ ಜಾಗಕ್ಕೆ ಬಂದಿರುವ ಡೆಲ್ಲಿಯ ಯುವ ಆಟಗಾರ ಆಯುಷ್ ಬದೋನಿ ಸದ್ಯ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ರಣಜಿ ಟ್ರೋಫಿ ಟೂರ್ನಿಯಲ್ಲಿ ಬ್ಯಾಕ್-ಟು-ಬ್ಯಾಕ್ ದ್ವಿಶತಕ ಸಿಡಿಸಿ ಬದೋನಿ ಅಬ್ಬರಿಸಿದ್ದರು. ಈ ಅದ್ಭುತ ದೇಶಿ ಪ್ರದರ್ಶನವೇ ಅವರಿಗೆ ಭಾರತ ‘ಎ’ ತಂಡದ ಬಾಗಿಲು ತೆರೆಯುವಂತೆ ಮಾಡಿದೆ.
ನವೆಂಬರ್ 19 ರಿಂದ ಟೂರ್ನಿ ಆರಂಭ:
ಉದಯೋನ್ಮುಖ ಆಟಗಾರರ ಈ ಪ್ರತಿಷ್ಠಿತ ಟೂರ್ನಿಯು ನವೆಂಬರ್ 19 ರಿಂದ ಕತಾರ್‌ನ ದೋಹಾದಲ್ಲಿ ಜರುಗಲಿದೆ. ಟೂರ್ನಿಯಲ್ಲಿ ಭಾರತ ‘ಎ’ ತಂಡವು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಪಾಕಿಸ್ತಾನ್ ‘ಎ’, ನೇಪಾಳ ಮತ್ತು ಯುಎಇ ತಂಡಗಳ ವಿರುದ್ಧ ಸೆಣಸಾಡಲಿದೆ.
ಇದನ್ನೂ ಓದಿ: ಬ್ಯಾಟ್ ಎಸೆದ ಫ್ಯಾನ್: ಗುರಾಯಿಸಿ ಎಚ್ಚರಿಕೆ ನೀಡಿದ ವಿರಾಟ್ ಕೊಹ್ಲಿ!
ಭಾರತ ‘ಎ’ ತಂಡ: ತಿಲಕ್ ವರ್ಮಾ (ನಾಯಕ), ರಿಂಕು ಸಿಂಗ್ (ಉಪನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಆಯುಷ್ ಬದೋನಿ, ಸೂರ್ಯಂಶ್ ಶೇಡ್ಗೆ, ಶಾಬಾಝ್ ಅಹ್ಮದ್, ವಿಪ್ರಾಜ್ ನಿಗಮ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಷದ್ ಖಾನ್.




