ಅಮೆರಿಕನ್ ನೌಕಾಪಡೆಯ ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರ; ಇರಾನ್‌ನ 3 ತೈಲ ಟ್ಯಾಂಕರ್ ಧ್ವಂಸ
ಇರಾನ್ ಪಡೆಗಳು ಅಮೆರಿಕದ ಎರಡು ಯುದ್ಧನೌಕೆಗಳನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಅಮೆರಿಕನ್ ಪಡೆಗಳು ಪ್ರತೀಕಾರ ತೀರಿಸಿಕೊಂಡಿವೆ. ಇಂದು ಇರಾನ್‌ನ ಮೂರು ಕಚ್ಚಾ ತೈಲ ಸಾಗಣೆ ಹಡಗುಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಾಶಪಡಿಸಿರುವುದಾಗಿ ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಈ ಘಟನೆಯಲ್ಲಿ ಯಾವುದೇ ಅಮೆರಿಕನ್ ಸಿಬ್ಬಂದಿಗೆ ಹಾನಿಯಾಗಿಲ್ಲ. ಅಮೆರಿಕನ್ ಯುದ್ಧನೌಕೆಗಳು ಇರಾನ್‌ನ ಕ್ಷಿಪಣಿ ದಾಳಿಯಿಂದ ಯಶಸ್ವಿಯಾಗಿ ಪಾರಾಗಿವೆ ಎಂದು ಅದು ತಿಳಿಸಿದೆ.

ವಾಷಿಂಗ್ಟನ್, ಸೆಪ್ಟೆಂಬರ್ 5: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಅಮೆರಿಕದ 2 ಯುದ್ಧನೌಕೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಮಿಲಿಟರಿ ಅದಕ್ಕೆ ಪ್ರತಿಯಾಗಿ ದಾಳಿ ನಡೆಸಿ ಇರಾನ್‌ನ 3 ಕಚ್ಚಾ ತೈಲ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿದೆ. ಇರಾನ್‌ನ ಐಆರ್‌ಜಿಸಿ ಪಡೆಗಳು ಅಮೆರಿಕ ನೌಕಾಪಡೆಯ 2 ಪ್ರಮುಖ ಯುದ್ಧನೌಕೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿದ್ದವು. ಇರಾನ್ ದಾಳಿ ನಡೆಸಿದ ತಕ್ಷಣವೇ ಕಠಿಣ ಕ್ರಮಕ್ಕೆ ಮುಂದಾದ ಯುಎಸ್ ಸೆಂಟ್ರಲ್ ಕಮಾಂಡ್, ಇರಾನ್‌ಗೆ ಸೇರಿದ 3 ಕಚ್ಚಾ ತೈಲ ಸಾಗಣೆ ಟ್ಯಾಂಕರ್‌ಗಳ ಮೇಲೆ ನೌಕಾ ಪಡೆಗಳ ಮೂಲಕ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಿ, ಕಾರ್ಯಾಚರಣೆ ನಡೆಸದಂತೆ ನಿಷ್ಕ್ರಿಯಗೊಳಿಸಿದೆ.
ಈ ಘಟನೆಯಿಂದಾಗಿ ಪರ್ಷಿಯನ್ ಕೊಲ್ಲಿ ಮತ್ತು ಮಧ್ಯಪ್ರಾಚ್ಯದ ಕಡಲ ಮಾರ್ಗಗಳಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಇದನ್ನೂ ಓದಿ: ಇರಾನ್‌ನ ಪ್ರಮುಖ ತೈಲ ಕೇಂದ್ರ ಖಾರ್ಗ್ ದ್ವೀಪದ ಬಳಿ ಅಮೆರಿಕ ಕ್ಷಿಪಣಿ ದಾಳಿ: ತೈಲ ಟ್ಯಾಂಕರ್ ಧ್ವಂಸ, ಸರಣಿ ಸ್ಫೋಟ
“ಐಆರ್‌ಜಿಸಿಗೆ ನಮ್ಮ ಸಂದೇಶ ಸ್ಪಷ್ಟವಾಗಿದೆ. ನೀವು ನಮ್ಮ 2 ಹಡಗುಗಳ ಮೇಲೆ ದಾಳಿ ನಡೆಸಿದರೆ, ನಾವು ನಿಮ್ಮ 3 ಹಡಗುಗಳನ್ನು ನಾಶಪಡಿಸಿ ಇನ್ನಷ್ಟು ಹೆಚ್ಚಿನ ಆರ್ಥಿಕ ನಷ್ಟವನ್ನು ಉಂಟುಮಾಡುತ್ತೇವೆ. ಅಮೆರಿಕನ್ ಪಡೆಗಳನ್ನು ರಕ್ಷಿಸಲು ನಾವು ಹಿಂಜರಿಯುವುದಿಲ್ಲ. ಅಗತ್ಯಬಿದ್ದರೆ ಇರಾನ್‌ನ ತೈಲ ಹಡಗುಗಳ ಪಡೆಯನ್ನೇ ಧ್ವಂಸಗೊಳಿಸುತ್ತೇವೆ” ಎಂದು ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ಎಚ್ಚರಿಕೆ ನೀಡಿದ್ದಾರೆ.
🚨US Says It Struck 3 Iranian Tankers After Missile Attack.@CENTCOM : the strikes came after the IRGC fired ballistic missiles at a US carrier and a destroyer.
Both ships escaped, no Americans were hurt.
🚢The tankers hit: Downy, near Kharg Island. Stark 1, near Jask.… https://t.co/dNe2qbPU37 pic.twitter.com/ZLCCA3PKoa
— Jack Prandelli (@jackprandelli) September 5, 2026
ಹಾರ್ಮುಜ್ ಜಲಸಂಧಿಯು ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾಗಿದ್ದು, ವಿಶ್ವದ ಶೇಕಡಾ 20ರಷ್ಟು (ಐದನೇ ಒಂದು ಭಾಗ) ತೈಲವು ಈ ಮಾರ್ಗದ ಮೂಲಕವೇ ಹಾದುಹೋಗುತ್ತದೆ. ಆದರೆ ನಿರಂತರ ಸೇನಾ ದಾಳಿಗಳಿಂದಾಗಿ ವಾಣಿಜ್ಯ ನೌಕೆಗಳ ಸಂಚಾರ ಇಲ್ಲಿ ತೀವ್ರವಾಗಿ ಕುಸಿದಿದೆ. ಇರಾನ್ ಪಡೆಗಳು ವಾಣಿಜ್ಯ ಹಡಗುಗಳಿಗೆ ಮತ್ತು ಅಮೆರಿಕನ್ ಸಿಬ್ಬಂದಿಗೆ ಬೆದರಿಕೆ ಹಾಕಲು ಯತ್ನಿಸುತ್ತಿವೆ ಎಂದು ಆರೋಪಿಸಿರುವ ಅಮೆರಿಕ, ಇತ್ತೀಚಿನ ದಿನಗಳಲ್ಲಿ ಈ ಜಲಸಂಧಿಯ ಸುತ್ತ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಹಿಂದೆ ಅಮೆರಿಕನ್ ಪಡೆಗಳು ‘ಲಾರಾಕ್ ದ್ವೀಪ’ದಲ್ಲಿದ್ದ ಇರಾನ್‌ನ ಸೇನಾ ನೆಲೆಗಳ ಮೇಲೆಯೂ ದಾಳಿ ನಡೆಸಿದ್ದವು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




