ಪ್ರಾರ್ಥನೆ ನೆಪದಲ್ಲಿ ಎದ್ದುನಿಂತು ಕ್ಯಾ. ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಿದ್ದ ಫ್ಲೈದುಬೈ ಸಹ ಪೈಲಟ್!
ದುಬೈ-ಟೆಲ್ ಅವೀವ್ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ಕೊಡಲಿ ದಾಳಿಗೊಳಗಾದ ಭಾರತೀಯ ಪೈಲಟ್ ಕ್ಯಾ. ಸ್ಮಿತ್ ಮಚ್ಚರ್‌ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಕರೆ ಮಾಡಿ ಆರೋಗ್ಯ ವಿಚಾರಿಸಿ, ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಈ ವೇಳೆ ಅಂದು ನಡೆದ ಘಟನೆ ಬಗ್ಗೆ ಹಲವು ಪ್ರಮುಖ ವಿಚಾರಗಳು ಬಹಿರಂಗವಾಗಿದ್ದು, ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿ ತನ್ನ ಆಸನದಿಂದ ಎದ್ದು ನಿಂತವ ಏಕಾಏಕಿ ದಾಳಿ ನಡೆಸಿರೋದು ಗೊತ್ತಾಗಿದೆ.

ಅಬುಧಾಬಿ, ಅಕ್ಟೋಬರ್ 4: ಸೆಪ್ಟೆಂಬರ್ 30ರಂದು ದುಬೈ-ಟೆಲ್ ಅವೀವ್ ಮಾರ್ಗದ FZ1073 ವಿಮಾನದಲ್ಲಿ ನಡೆದ ಘಟನೆಯ ಮತ್ತೊಂದು ಆತಂಕಕಾರಿ ಸಂಗತಿ ಬಯಲಾಗಿದೆ. ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿ ತನ್ನ ಆಸನದಿಂದ ಎದ್ದು ನಿಂತಿದ್ದ. ಆ ಬಳಿಕ ಕೆಲವೇ ನಿಮಿಷಗಳಲ್ಲಿ ಕ್ಯಾ.ಸ್ಮಿತ್ ಮಚ್ಚರ್ ಅವರ ಮೇಲೆ ಹಿಂದಿನಿಂದ ಕೊಡಲಿಯಿಂದ ಹಲ್ಲೆ ನಡೆಸಿದ್ದ. ಈ ವೇಳೆ ಕಾಕ್‌ಪಿಟ್ ಬಾಗಿಲನ್ನು ಮಚ್ಚರ್ ಒಮ್ಮೆ ತೆರೆದಿದ್ದರಾದರೂ ಸಹ ಪೈಲಟ್ ಅದನ್ನು ಮುಚ್ಚಿದ್ದ. ಬಳಿಕ ದೃಷ್ಟಿ ಸಂಪೂರ್ಣ ಮಸುಕಾಗಿದ್ದರೂ ಕೊನೆಯ ಪ್ರಯತ್ನದಲ್ಲಿ ಬಾಗಿಲನ್ನು ತೆರೆಯಲು ಮಚ್ಚರ್ ಯಶಸ್ವಿಯಾಗಿದ್ದರು. ಇದರಿಂದ ಪ್ರಯಾಣಿಕರು ಕಾಕ್‌ಪಿಟ್‌ಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂಬುದೀಗ ಗೊತ್ತಾಗಿದೆ.
ಕ್ಯಾ.ಸ್ಮಿತ್ ಮಚ್ಚರ್‌ಗೆ ಇಸ್ರೇಲ್ ಪ್ರಧಾನಿ ಕರೆ
ಭಾರತೀಯ ಪೈಲಟ್ ಕ್ಯಾ.ಸ್ಮಿತ್ ಮಚ್ಚರ್‌ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶೀಘ್ರ ಗುಣಮುಖರಾಗುವಂತೆ ಸ್ಮಿತ್ ಮಚ್ಚರ್‌ಗೆ ಹಾರೈಸಿದ ಅವರು, ನೀವು ಭಾರತ ಮತ್ತು ಇಸ್ರೇಲ್ ಜನರ ಪಾಲಿಗೆ ನಿಜವಾದ ಹೀರೋ ಎಂದು ಶ್ಲಾಘಿಸಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ನಿಮ್ಮ ಧೈರ್ಯ ಮತ್ತು ಸಮಯಪ್ರಜ್ಞೆ ಕಂಡು ನನಗೆ ಆಶ್ಚರ್ಯವಾಗಿದೆ ಎಂದವರು ಸ್ಮಿತ್ರನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸ್ಮಿತ್ಗೆ ಆಹ್ವಾನ ನೀಡಿದ ನೆತನ್ಯಾಹು, ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆ ವೇಳೆ ದೀಪ ಬೆಳಗಿಸಲು ನಿಮ್ಮನ್ನು ಮತ್ತು ತನ್ನ ಸ್ನೇಹಿತ ಪ್ರಧಾನಿ ಮೋದಿರನ್ನು ಆಹ್ವಾನಿಸುವೆ ಎಂದಿದ್ದಾರೆ. ಸ್ಮಿತ್ ಜೊತೆ ಸುಮಾರು 6 ನಿಮಿಷಗಳ ಕಾಲ ನೆತನ್ಯಾಹು ಮಾತನಾಡಿದ್ದಾರೆ.
ಇದನ್ನೂ ಓದಿ: ನಿಮ್ಮ ಬಗ್ಗೆ ಹೆಮ್ಮೆಯಿದೆ’; ಆಸ್ಪತ್ರೆಯಲ್ಲಿ ಪೈಲಟ್ ಸ್ಮಿತ್ ಮಚ್ಚರ್ ಹಣೆಗೆ ಮುತ್ತನ್ನಿಟ್ಟ ಯುಎಇ ಉಪ ಪ್ರಧಾನಿ
ನೆತನ್ಯಾಹು- ಮಚ್ಚರ್ ಮಾತುಕತೆ ವೇಳೆ ಹಲವು ವಿಚಾರ ಬಹಿರಂಗ
ನೆತನ್ಯಾಹು ಜೊತೆಗಿನ ಮಾತುಕತೆಯಲ್ಲಿ ದಾಳಿ ಆರಂಭವಾಗುವ ಕೆಲವೇ ಕ್ಷಣಗಳ ಮುನ್ನ ಕಾಕ್‌ಪಿಟ್‌ನಲ್ಲಿ ನಡೆದಿದ್ದ ಘಟನೆಗಳ ಬಗ್ಗೆ ಮಚ್ಚರ್ ಹೆಚ್ಚಿನ ವಿವರ ನೀಡಿದ್ದಾರೆ. ಬೋಯಿಂಗ್ 737 MAX 8 ವಿಮಾನ ಸಾಮಾನ್ಯವಾಗಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಓಮನ್‌ನ ಸಹ ಪೈಲಟ್ ಪ್ರಾರ್ಥನೆ ಸಲ್ಲಿಸಲು ಎದ್ದು ನಿಂತಿದ್ದರು. ಇದು ಮಚ್ಚರ್‌ಗೆ ಅಸಾಮಾನ್ಯವಾಗಿ ಕಾಣಿಸಲಿಲ್ಲ. ಸಹ ಪೈಲಟ್‌ನ ಧಾರ್ಮಿಕ ಆಚರಣೆಗೆ ಗೌರವ ನೀಡಿ, ತಾವು ಹಿಂದಕ್ಕೆ ನೋಡದಿರಲು ಉದ್ದೇಶಪೂರ್ವಕವಾಗಿ ಅವರು ನಿರ್ಧರಿಸಿದ್ದರು. ಆದರೆ ಸುಮಾರು ನಾಲ್ಕೈದು ನಿಮಿಷಗಳ ಬಳಿಕ ತಲೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿದ್ದ ಅನುಭ ಮಚ್ಚರ್ ಅವರಿಗಾಗಿದೆ. ಈ ವೇಳೆ ವಿಮಾನಕ್ಕೇ ಯಾವುದೋ ಭಾರೀ ಅವಘಡ ಸಂಭವಿಸಿದೆ ಎಂದು ಅವರು ಭಾವಿಸಿದ್ದರು. ಆದರೆ ಮತ್ತೊಂದು ಹೊಡೆತ ಬಿದ್ದ ಬಳಿಕವಷ್ಟೇ ತಮ್ಮ ಹಿಂದೆ ಕುಳಿತಿದ್ದ ವ್ಯಕ್ತಿಯೇ ದಾಳಿ ನಡೆಸುತ್ತಿದ್ದಾನೆ ಎಂಬುದು ಮಚ್ಚರ್ ಅವರಿಗೆ ತಿಳಿಯಿತು ಎನ್ನಲಾಗಿದೆ. ಈ ಘಟನೆಗಳ ಕ್ರಮದಲ್ಲಿ, ದಾಳಿ ನಡೆಸುವುದಕ್ಕೂ ಮುನ್ನ ಸಹ ಪೈಲಟ್ ಪ್ರಾರ್ಥನೆಯ ನೆಪವನ್ನು ಬಳಸಿಕೊಂಡಿರುವುದು ಬಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:05 am, Sun, 4 October 26




