ನವದೆಹಲಿ: ಜರ್ಮನಿಯ (German) 23 ವರ್ಷದ ಯುವತಿಯೊಬ್ಬಳು ತಾನು ಸತ್ತಿದ್ದೇನೆ ಎಂದು ಎಲ್ಲರನ್ನೂ ನಂಬಿಸಲು ತನ್ನದೇ ರೀತಿ ಕಾಣುವ ಯುವತಿಯನ್ನು ಇನ್ಸ್ಟಾಗ್ರಾಂನಲ್ಲಿ(Instagram) ಹುಡುಕಿ, ಆಕೆಯ ಪರಿಚಯ ಮಾಡಿಕೊಂಡು, ತನ್ನ ಸ್ನೇಹಿತನೊಂದಿಗೆ ಸೇರಿ ಅವಳನ್ನು ಕೊಲೆ (Murder) ಮಾಡಿರುವ ಆಘಾತಕಾರಿ ಘಟನೆ (Shocking News) ನಡೆದಿದೆ. ಕಳೆದ ಆಗಸ್ಟ್‌ನಲ್ಲಿ ದಕ್ಷಿಣ ಜರ್ಮನಿಯ ಇಂಗೋಲ್‌ಸ್ಟಾಡ್‌ನಲ್ಲಿ ನಿಲುಗಡೆ ಮಾಡಲಾದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಯುವತಿಯ ರಕ್ತಸಿಕ್ತವಾದ ಮೃತದೇಹ ಪತ್ತೆಯಾಗಿತ್ತು. ಅಲ್ಲಿದ್ದ ಸಾಕ್ಷಿಗಳನ್ನು ನೋಡಿ ಆ ಮೃತದೇಹ ಮ್ಯೂನಿಚ್ ಮೂಲದ 23 ವರ್ಷದ ಬ್ಯೂಟಿಷಿಯನ್ ಶರಬನ್ ಎಂಬ ಮಹಿಳೆಯದ್ದು ಎಂದು ಗುರುತಿಸಲಾಗಿತ್ತು. ಆದರೆ, ಅದೆಲ್ಲವೂ ಆಕೆಯ ಪ್ಲಾನ್ ಎಂಬುದು ಇದೀಗ ಬಯಲಾಗಿದೆ.
ಶರಬನ್ ಕುಟುಂಬದ ಕೆಲವು ಸದಸ್ಯರು ಆ ಶವದ ಮೇಲಿದ್ದ ಬಟ್ಟೆ, ಅಲ್ಲಿದ್ದ ವಸ್ತುಗಳನ್ನು ನೋಡಿ ಮೃತದೇಹವನ್ನು ಗುರುತಿಸಿದ್ದರು. ಆದರೆ, ಮರುದಿನ ಶವಪರೀಕ್ಷೆ ವರದಿಯಲ್ಲಿ ಹಲವು ಅನುಮಾನಗಳು ಮೂಡಿದ್ದವು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಆ ಶವ ಖಡಿಡ್ಜಾ ಎಂಬ 23 ವರ್ಷದ ಯುವತಿಯದ್ದು ಎಂದು ಗೊತ್ತಾಗಿದೆ. ನೆರೆಯ ರಾಜ್ಯವಾದ ಬಾಡೆನ್-ವಾರ್ಟೆಂಬರ್ಗ್‌ನಲ್ಲಿರುವ ಹೈಲ್‌ಬ್ರಾನ್‌ನಿಂದ ಅಲ್ಜೀರಿಯಾದ ಸೌಂದರ್ಯ ಬ್ಲಾಗರ್ ಆಗಿರುವ ಆಕೆ ಶರಬನ್ಗೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಳು.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲೊಂದು ಭೀಕರ ಘಟನೆ; ಗರ್ಲ್ಫ್ರೆಂಡ್ನ 3 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ, ಕೊಲೆ
ಶರಬನ್ ಮತ್ತು ಖಡಿಡ್ಜಾಳ ಮೈಬಣ್ಣ ಮತ್ತು ಕಪ್ಪು ಕೂದಲಿನ ಸಾಮ್ಯತೆ, ದೇಹದ ಆಕಾರ ಹಾಗೂ ಮುಖದ ಹೋಲಿಕೆಯಿಂದ ಎಲ್ಲರೂ ಅದು ಶರಬನ್ಳ ಮೃತದೇಹ ಎಂದು ನಂಬಿದ್ದರು. ಅವರಿಬ್ಬರೂ ಒಂದೇ ರೀತಿ ಕಾಣುತ್ತಿದ್ದರು. ಹೀಗಾಗಿ, ಶರಬನ್ ಆಕೆಯನ್ನು ಪರಿಚಯ ಮಾಡಿಕೊಂಡು ಭೇಟಿಯಾಗಿ, ಸ್ನೇಹ ಬೆಳೆಸಿದ್ದಳು.
ಇದೀಗ ಪೊಲೀಸರು ಶರಬನ್ ಹಾಗೂ ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ. ಆದರೆ, ಕೊಲೆಗೆ ಕಾರಣವೇನೆಂಬ ಬಗ್ಗೆ ಇನ್ನೂ ನಿಖರ ಕಾರಣ ಹೊರಬಿದ್ದಿಲ್ಲ. ಆ ಯುವತಿಯನ್ನು ಶರಬನ್ ಹಾಗೂ ಆಕೆಯ ಗೆಳೆಯ 50ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾರೆ. ಆಕೆಯ ಮುಖದ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಆಕೆಯ ಮುಖ ಸುಲಭವಾಗಿ ಗೊತ್ತಾಗುವಂತಿರಲಿಲ್ಲ. ಬಂಧಿತರಾಗಿರುವ ಶರಬನ್ ಹಾಗೂ ಆಕೆಯ ಸ್ನೇಹಿತನ ಆರೋಪ ಸಾಬೀತಾದರೆ ಇಬ್ಬರೂ ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ.