ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ: ಪ್ರತಿದಾಳಿಗೆ ಆಗಂತುಕ ಸಾವು

ಅಮೆರಿಕದ ಶ್ವೇತಭವನದ ಬಳಿ ಗುಂಡಿನ ದಾಳಿ ನಡೆದಿದ್ದು, ಅಧಿಕಾರಿಗಳ ಪ್ರತಿದಾಳಿಗೆ ಶಂಕಿತನೊಬ್ಬ ಮೃತಪಟ್ಟಿದ್ದಾನೆ. ಘಟನೆ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದು, ಸುರಕ್ಷಿತವಾಗಿದ್ದಾರೆ. ಓರ್ವ ಪಾದಚಾರಿಗೆ ಗಾಯಗಳಾಗಿದ್ದು, ತನಿಖೆ ಮುಂದುವರಿದಿದೆ. ಘಟನೆ ಬಗ್ಗೆ ಸೀಕ್ರೆಟ್ ಸರ್ವಿಸ್ ಮಾಹಿತಿ ಹಂಚಿಕೊಂಡಿದ್ದು, ಶ್ವೇತಭವನದ ಹೊರಗೆ ಶಂಕಿತ 20 ಸುತ್ತು ಗುಂಡು ಹಾರಿಸಿದ್ದ ಎನ್ನಲಾಗಿದೆ.

ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ: ಪ್ರತಿದಾಳಿಗೆ ಆಗಂತುಕ ಸಾವು
ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ
Image Credit source: shutterstock.com

Updated on: May 24, 2026 | 6:30 AM

ವಾಷಿಂಗ್‌ಟನ್, ಮೇ 24: ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ ನಡೆದಿದ್ದು, ಪೆನ್ಸಿಲ್ವೇನಿಯಾ ಅವೆನ್ಯೂ NW ಬಳಿ ಫೈರಿಂಗ್​ ನಡೆದಿದೆ. ಗುಂಡಿನ ದಾಳಿ ನಡೆದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು ಎನ್ನಲಾಗಿದೆ. ​ಶ್ವೇತಭವನದ ಹೊರಗೆ ಶಂಕಿತ 20 ಸುತ್ತು ಗುಂಡು ಹಾರಿಸಿದ್ದು. ಅಮೆರಿಕದ ಭದ್ರತಾ ಪಡೆಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಅಮೆರಿಕದ ಸೀಕ್ರೆಟ್ ಸರ್ವಿಸ್ ಶನಿವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಸಂಜೆ ಸುಮಾರು 6 ಗಂಟೆಯ ನಂತರ ವ್ಯಕ್ತಿಯೋರ್ವ ಭದ್ರತಾ ತಪಾಸಣಾ ಕೇಂದ್ರದತ್ತ ಬಂದು ತನ್ನ ಬ್ಯಾಗಿನಿಂದ ಗನ್ ತೆಗೆದು ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ಆರಂಭಿಸಿದ್ದ ಎನ್ನಲಾಗಿದೆ.

ಟ್ರಂಪ್​​ ಸೇಫ್​​

ಇನ್ನು ದಾಳಿಯ ವೇಳೆ ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು ಗುಂಡು ಹಾರಿಸಿದ್ದು, ಶಂಕಿತನಿಗೆ ಗುಂಡು ತಗುಲಿತ್ತು. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಸೀಕ್ರೆಟ್ ಸರ್ವಿಸ್ ತಿಳಿಸಿದೆ. ಘಟನೆಯಲ್ಲಿ ಓರ್ವ ಪಾದಚಾರಿಗೂ ಗಾಯಗಳಾಗಿವೆ. ಆದರೆ ಆ ವ್ಯಕ್ತಿಗೆ ಶಂಕಿತನ ಗುಂಡಿನಿಂದ ಗಾಯವಾಗಿದೆಯೋ ಅಥವಾ ಅಧಿಕಾರಿಗಳ ಪ್ರತಿದಾಳಿಯ ವೇಳೆ ಗಾಯವಾಗಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸೀಕ್ರೆಟ್ ಸರ್ವಿಸ್ ಅಧಿಕಾರಿಗಳಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆ ನಡೆಯುವ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ಒಳಗೇ ಇದ್ದರು. ಆದರೆ ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರಕ್ಷಣೆಗೆ ಹೋದವರಿಗೇ ಕಾದಿತ್ತು ಆಪತ್ತು, ಅಮೆರಿಕದಲ್ಲಿ ಮೂವರನ್ನು ಬಲಿ ಪಡೆದ ನಿಗೂಢ ವಸ್ತು, ಸಿಬ್ಬಂದಿ ಅಸ್ವಸ್ಥ

ಇನ್ನು ವೈಟ್ ಹೌಸ್ ಸಮೀಪ ಗುಂಡಿನ ದಾಳಿ ನಡೆದಿರುವುದು ಇದು ಮೊದಲೇನಲ್ಲ. ಕಳೆದ ನವೆಂಬರ್‌ನಲ್ಲಿ ವೆಸ್ಟ್ ವರ್ಜೀನಿಯಾ ನ್ಯಾಷನಲ್ ಗಾರ್ಡ್‌ನ ಇಬ್ಬರು ಸದಸ್ಯರ ಮೇಲೆ ಕೂಡ ಇದೇ ಪ್ರದೇಶದಲ್ಲಿ ದಾಳಿ ನಡೆದಿತ್ತು. ಆ ಘಟನೆಯಲ್ಲಿ ಅಮೆರಿಕ ಸೇನೆಯ ಸ್ಪೆಷಲಿಸ್ಟ್ ಸಾರಾ ಬೆಕ್‌ಸ್ಟ್ರೋಮ್ ಮೃತಪಟ್ಟಿದ್ದು, ಆಂಡ್ರೂ ವೋಲ್ಫ್ ಗಂಭೀರವಾಗಿ ಗಾಯಗೊಂಡಿದ್ದರು. ಇದಕ್ಕೂ ಮುನ್ನ ಏಪ್ರಿಲ್ 25ರಂದು ಅಧ್ಯಕ್ಷ ಟ್ರಂಪ್ ಭಾಗವಹಿಸಿದ್ದ ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಅಸೋಸಿಯೇಷನ್ ಡಿನ್ನರ್ ಕಾರ್ಯಕ್ರಮದ ವೇಳೆ ಹತ್ಯೆ ಯತ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಕ್ಯಾಲಿಫೋರ್ನಿಯಾದ ಕೋಲ್ ಟೋಮಾಸ್ ಆಲೆನ್ ವಿರುದ್ಧ ಟ್ರಂಪ್ ಹತ್ಯೆ ಯತ್ನದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಆತ ಫೆಡರಲ್ ಕಸ್ಟಡಿಯಲ್ಲಿ ಇದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:29 am, Sun, 24 May 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us