AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಣೆಗೆ ಹೋದವರಿಗೇ ಕಾದಿತ್ತು ಆಪತ್ತು, ಅಮೆರಿಕದಲ್ಲಿ ಮೂವರನ್ನು ಬಲಿ ಪಡೆದ ನಿಗೂಢ ವಸ್ತು, ಸಿಬ್ಬಂದಿ ಅಸ್ವಸ್ಥ

ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯದಲ್ಲಿ ಅತ್ಯಂತ ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದು ನಡೆದಿದೆ. ಮನೆಯೊಂದರಲ್ಲಿ ಪತ್ತೆಯಾದ ನಿಗೂಢ ವಸ್ತುವೊಂದು ಮೂವರ ಪ್ರಾಣವನ್ನು ಬಲಿ ಪಡೆದಿದ್ದಲ್ಲದೆ, ರಕ್ಷಣೆಗೆ ಧಾವಿಸಿದ ಸಿಬ್ಬಂದಿಯನ್ನೂ ಆಸ್ಪತ್ರೆ ಸೇರುವಂತೆ ಮಾಡಿದೆ. ಇಡೀ ಪ್ರದೇಶವನ್ನು ತಲ್ಲಣಗೊಳಿಸಿದ ಈ ನಿಗೂಢ ಘಟನೆ ಇದಾಗಿದೆ. ಘಟನಾ ಸ್ಥಳದಲ್ಲಿದ್ದ ಯಾವುದೋ ಒಂದು ಅಪರಿಚಿತ ನಿಗೂಢ ವಸ್ತುವಿನ ಸಂಪರ್ಕಕ್ಕೆ ಬಂದ ತಕ್ಷಣವೇ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಕ್ಷಣಾ ಸಿಬ್ಬಂದಿಗೆ ವಾಕರಿಕೆ, ತಲೆತಿರುಗುವಿಕೆ ಮತ್ತು ದೌರ್ಬಲ್ಯದಂತಹ ಲಕ್ಷಣಗಳು ಕಾಣಿಸಿಕೊಂಡವು.

ರಕ್ಷಣೆಗೆ ಹೋದವರಿಗೇ ಕಾದಿತ್ತು ಆಪತ್ತು, ಅಮೆರಿಕದಲ್ಲಿ ಮೂವರನ್ನು ಬಲಿ ಪಡೆದ ನಿಗೂಢ ವಸ್ತು, ಸಿಬ್ಬಂದಿ ಅಸ್ವಸ್ಥ
ಪೊಲೀಸ್ Image Credit source: AP News
ನಯನಾ ರಾಜೀವ್
|

Updated on: May 21, 2026 | 9:19 AM

Share

ನ್ಯೂ ಮೆಕ್ಸಿಕೋ, ಮೇ 21: ಅಮೆರಿಕ(America)ದ ನ್ಯೂ ಮೆಕ್ಸಿಕೋ ರಾಜ್ಯದ ಅಲ್ಬುಕರ್ಕ್ ನಗರದ ಸಮೀಪವಿರುವ ಮೌಂಟೇನ್‌ಏರ್ ಎಂಬ ಗ್ರಾಮೀಣ ಪ್ರದೇಶದಲ್ಲಿ ಈ ಬೆಚ್ಚಿಬೀಳಿಸುವ ಘಟನೆ ಸಂಭವಿಸಿದೆ. ಮನೆಯೊಂದರಲ್ಲಿ ಮಾದಕವಸ್ತು ಮಿತಿಮೀರಿದ ಸೇವನೆಯಿಂದ (Drug Overdose) ಜನರು ಪ್ರಜ್ಞಾಹೀನರಾಗಿದ್ದಾರೆ ಎಂಬ ಮಾಹಿತಿ ಪಡೆದು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಆದರೆ, ಅಲ್ಲಿ ಅವರಿಗೆ ಕಾದಿದ್ದು ಮಾತ್ರ ದೊಡ್ಡ ಗಂಡಾಂತರ. ಪೊಲೀಸರು ಮತ್ತು ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ತಲುಪಿದಾಗ ಮನೆಯೊಳಗೆ ನಾಲ್ಕು ಜನರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರಲ್ಲಿ ಮೂವರು ಈಗಾಗಲೇ ಸಾವನ್ನಪ್ಪಿದ್ದರು. ಮತ್ತೊಬ್ಬನನ್ನು ತಕ್ಷಣವೇ ಅಲ್ಬುಕರ್ಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ, ಅಸಲಿ ಆತಂಕ ಆರಂಭವಾಗಿದ್ದು ಇದರ ನಂತರವೇ.

ರಕ್ಷಣೆಗೆ ಹೋದವರಿಗೇ ತಟ್ಟಿದ ಕಂಟಕ ಘಟನಾ ಸ್ಥಳದಲ್ಲಿದ್ದ ಯಾವುದೋ ಒಂದು ಅಪರಿಚಿತ ನಿಗೂಢ ವಸ್ತುವಿನ ಸಂಪರ್ಕಕ್ಕೆ ಬಂದ ತಕ್ಷಣವೇ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಕ್ಷಣಾ ಸಿಬ್ಬಂದಿಗೆ ವಾಕರಿಕೆ, ತಲೆತಿರುಗುವಿಕೆ ಮತ್ತು ದೌರ್ಬಲ್ಯದಂತಹ ಲಕ್ಷಣಗಳು ಕಾಣಿಸಿಕೊಂಡವು. ಸಿಬ್ಬಂದಿಯನ್ನು ತಕ್ಷಣವೇ ನ್ಯೂ ಮೆಕ್ಸಿಕೊ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಇಬ್ಬರು ರಕ್ಷಣಾ ಕಾರ್ಯಕರ್ತರ ಸ್ಥಿತಿ ಇಂದಿಗೂ ಅತ್ಯಂತ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿ ವಿಲ್ಸನ್ ಸಿಲ್ವರ್ ತಿಳಿಸಿದ್ದಾರೆ.

ರಸ್ತೆ ಬಂದ್, ಹ್ಯಾಜ್‌ಮ್ಯಾಟ್ ತಂಡದಿಂದ ತನಿಖೆ ಪ್ರಾಥಮಿಕ ತನಿಖೆಯ ಪ್ರಕಾರ, ಈ ನಿಗೂಢ ಕಿಲ್ಲರ್ ವಸ್ತುವು ಗಾಳಿಯ ಮೂಲಕ ಹರಡುತ್ತಿಲ್ಲ, ಬದಲಿಗೆ ಸ್ಪರ್ಶ ಅಥವಾ ಸಂಪರ್ಕದ ಮೂಲಕ ಹರಡುತ್ತದೆ ಎಂಬುದು ತಿಳಿದುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆ ಮನೆಗೆ ಹೋಗುವ ರಸ್ತೆಯನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಆ ಅಪರಿಚಿತ ವಸ್ತು ಯಾವುದು ಎಂಬುದನ್ನು ಪತ್ತೆಹಚ್ಚಲು ಅಗ್ನಿಶಾಮಕ ದಳದ ಹ್ಯಾಜ್‌ಮ್ಯಾಟ್ (Hazmat – ಅಪಾಯಕಾರಿ ವಸ್ತುಗಳ ಪತ್ತೆ ಹಚ್ಚುವ ವಿಶೇಷ ತಂಡ) ತಂಡ ಸತತವಾಗಿ ಶ್ರಮಿಸುತ್ತಿದೆ.

ಮತ್ತಷ್ಟು ಓದಿ: ಕೊನೆ ಕ್ಷಣದಲ್ಲಿ ಇರಾನ್ ಮೇಲಿನ ಭೀಕರ ದಾಳಿ ಮುಂದೂಡಿದ ಅಮೆರಿಕ, ಗಲ್ಫ್ ರಾಷ್ಟ್ರಗಳ ಮನವಿಗೆ ಓಗೊಟ್ಟ ಟ್ರಂಪ್

ಆರಂಭಿಕ ಸಾಕ್ಷ್ಯಗಳ ಪ್ರಕಾರ, ಇದು ಅತ್ಯಂತ ಅಪಾಯಕಾರಿ ಮಾದಕ ವಸ್ತುವಿನಿಂದ (Drugs) ಸಂಭವಿಸಿರಬಹುದು ಎಂದು ಮೌಂಟೇನ್‌ಏರ್ ಮೇಯರ್ ಪೀಟರ್ ನೀಟೊ ತಿಳಿಸಿದ್ದಾರೆ. ಆದರೆ ಸಾರ್ವಜನಿಕರಿಗೆ ಯಾವುದೇ ತಕ್ಷಣದ ಬೆದರಿಕೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಘಟನೆ ಹೊರಬೀಳುತ್ತಿದ್ದಂತೆ, ಸ್ಥಳೀಯ ನಿವಾಸಿಗಳು ತಮ್ಮ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾದಕ ದ್ರವ್ಯದ ಸಮಸ್ಯೆ ಇಡೀ ದೇಶಕ್ಕೆ ಗಂಭೀರ ಕಂಟಕವಾಗಿ ಪರಿಣಮಿಸಿದೆ, ಇದಕ್ಕೆ ಯಾವುದೇ ತ್ವರಿತ ಪರಿಹಾರವಿಲ್ಲಎಂದು ಮೇಯರ್ ಪೀಟರ್ ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಆ ನಿಗೂಢ ವಸ್ತು ಯಾವುದು ಎಂಬುದು ಇಡೀ ಅಮೆರಿಕದ ಪೊಲೀಸರಿಗೆ ದೊಡ್ಡ ರಹಸ್ಯವಾಗಿ ಉಳಿದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More