ಆಪರೇಷನ್ ಎಪಿಕ್ ಫ್ಯೂರಿಯಲ್ಲಿ ಅಮೆರಿಕಕ್ಕೆ ಭಾರಿ ಪೆಟ್ಟು, ಇರಾನ್ ಮೇಲಿನ ದಾಳಿಯಲ್ಲಿ 42 ಯುದ್ಧ ವಿಮಾನಗಳು, ಡ್ರೋನ್‌ಗಳು ಧ್ವಂಸ
ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಅತ್ಯಂತ ಭೀಕರ ಹಾಗೂ ರಹಸ್ಯ ಮಿಲಿಟರಿ ಸಂಘರ್ಷದ ಆಘಾತಕಾರಿ ಸತ್ಯವೊಂದು ಈಗ ಜಗತ್ತಿನ ಕಣ್ಣೆದುರು ಬಂದಿದೆ. ಇರಾನ್ ಅನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ಮಹಾ ದಾಳಿ 'ಆಪರೇಷನ್ ಎಪಿಕ್ ಫ್ಯೂರಿ' (Operation Epic Fury) ವೇಳೆ ಯುಎಸ್ ವಾಯುಪಡೆಗೆ ಹಿಂದೆಂದೂ ಕಾಣದ ಭಾರಿ ಪೆಟ್ಟು ಬಿದ್ದಿದೆ. ಕೇವಲ ಒಂದೇ ಕಾರ್ಯಾಚರಣೆಯಲ್ಲಿ ಅಮೆರಿಕ ಭೀಕರ ಹಾನಿ ಅನುಭವಿಸಿದೆ.

ವಾಷಿಂಗ್ಟನ್, ಮೇ 20: ಅಮೆರಿಕ(America)ವು ಫೆಬ್ರವರಿ 28ರಂದು ಇರಾನ್ ವಿರುದ್ಧ ನಡೆಸಿದ ಹೈ-ವೋಲ್ಟೇಜ್ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಎಪಿಕ್ ಫ್ಯೂರಿ’ ವೇಳೆ ತನ್ನ ಅತ್ಯಂತ ಆಧುನಿಕ ಫೈಟರ್ ಜೆಟ್‌ಗಳು ಮತ್ತು ಡ್ರೋನ್‌ಗಳು ಸೇರಿದಂತೆ ಕನಿಷ್ಠ 42 ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಅಥವಾ ಭೀಕರವಾಗಿ ಹಾನಿಗೊಳಿಸಿಕೊಂಡಿದೆ ಎಂದು ಅಧಿಕೃತ ವರದಿ ಬಹಿರಂಗಪಡಿಸಿದೆ.
ಮಿಲಿಟರಿ ಕಾರ್ಯಾಚರಣೆಗಳ ರಹಸ್ಯ ವರ್ಗೀಕರಣ ನಿರ್ಬಂಧಗಳು, ಆ ಪ್ರದೇಶದಲ್ಲಿ ಇನ್ನೂ ನಡೆಯುತ್ತಿರುವ ಯುದ್ಧ ಮತ್ತು ಹಾನಿಯ ನಿಖರ ಮೌಲ್ಯಮಾಪನದ ಸವಾಲುಗಳಿಂದಾಗಿ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಸಿಆರ್ಎಸ್ (CRS) ವರದಿ ಹೇಳಿದೆ. ಯುಎಸ್ ರಕ್ಷಣಾ ಇಲಾಖೆ (Pentagon) ಮತ್ತು ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ (CENTCOM) ನೀಡಿದ ಆಂತರಿಕ ಹೇಳಿಕೆಗಳು ಹಾಗೂ ಮಾಧ್ಯಮ ವರದಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಈ ಕರಡು ಸಿದ್ಧಪಡಿಸಲಾಗಿದೆ.
ಇರಾನ್‌ನ ಪ್ರತಿದಾಳಿ ಅಥವಾ ತಾಂತ್ರಿಕ ವೈಫಲ್ಯದಿಂದಾಗಿ ಅಮೆರಿಕ ಕಳೆದುಕೊಂಡ ವಿಮಾನಗಳ ಪಟ್ಟಿ ಹೀಗಿದೆ.
ಫೈಟರ್ ಜೆಟ್‌ಗಳು: 4 ಅತ್ಯಂತ ಶಕ್ತಿಶಾಲಿ F-15E ಸ್ಟ್ರೈಕ್ ಈಗಲ್ ಮತ್ತು 1 ಅತ್ಯಾಧುನಿಕ F-35A ಲೈಟ್ನಿಂಗ್ II ಜಂಟಿ ದಾಳಿ ವಿಮಾನ.
ಟ್ಯಾಂಕರ್ ವಿಮಾನಗಳು: ಶತ್ರುಗಳ ಹೆಡೆಮುರಿ ಕಟ್ಟುವ 1 A-10 ಥಂಡರ್ಬೋಲ್ಟ್ II, ಇಂಧನ ಮರುಪೂರಣ ಮಾಡುವ 7 ಬೃಹತ್ KC-135 ಸ್ಟ್ರಾಟೋಟ್ಯಾಂಕರ್ ವಿಮಾನಗಳು ಮತ್ತು 2 MC-130J ಕಮಾಂಡೋ II ವಿಮಾನಗಳು.
ಹೆಲಿಕಾಪ್ಟರ್: ಇಡೀ ಯುದ್ಧವನ್ನು ನಿಯಂತ್ರಿಸುವ 1 E-3 ಸೆಂಟ್ರಿ ವಾಯುಗಾಮಿ ಎಚ್ಚರಿಕೆ (AWACS) ವಿಮಾನ ಮತ್ತು ರಕ್ಷಣಾ ಕಾರ್ಯಾಚರಣೆಯ 1 HH-60W ಜಾಲಿ ಗ್ರೀನ್ II ಹೆಲಿಕಾಪ್ಟರ್.
ಡ್ರೋನ್ ಪಡೆಗೆ ಮಾರಣಾಂತಿಕ ಪೆಟ್ಟು: ಅಮೆರಿಕದ ಹೆಮ್ಮೆಯ 24 MQ-9 ರೀಪರ್ ಡ್ರೋನ್‌ಗಳು ಮತ್ತು 1 ಹೈ-ಟೆಕ್ MQ-4C ಟ್ರೈಟಾನ್ ಕಣ್ಗಾವಲು ಡ್ರೋನ್ ಸಂಪೂರ್ಣ ನಾಶವಾಗಿವೆ.
ಮತ್ತಷ್ಟು ಓದಿ: ಭಾರತ-ಅಮೆರಿಕದಲ್ಲಲ್ಲ, ಪ್ರಧಾನಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಆತಿಥ್ಯ ವಹಿಸಲಿದೆ ಈ ರಾಷ್ಟ್ರ
29 ಬಿಲಿಯನ್ ಡಾಲರ್‌ಗೆ ಏರಿದ ಯುದ್ಧದ ವೆಚ್ಚ ಮೇ 12 ರಂದು ನಡೆದ ಯುಎಸ್ ಸದನದ ವಿನಿಯೋಗ ಉಪಸಮಿತಿಯ ಗಂಭೀರ ವಿಚಾರಣೆಯ ಸಂದರ್ಭದಲ್ಲಿ, ಪೆಂಟಗನ್‌ನ ಕಾರ್ಯಕಾರಿ ನಿಯಂತ್ರಕ ಜೂಲ್ಸ್ ಡಬ್ಲ್ಯೂ ಹರ್ಸ್ಟ್ III ಈ ಆಘಾತಕಾರಿ ಆರ್ಥಿಕ ನಷ್ಟವನ್ನು ಒಪ್ಪಿಕೊಂಡಿದ್ದಾರೆ. ಇರಾನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಅಮೆರಿಕದ ಒಟ್ಟು ವೆಚ್ಚವು ಬರೋಬ್ಬರಿ 29 ಶತಕೋಟಿ ಡಾಲರ್‌ಗಳಿಗೆ (ಸುಮಾರು 2,42,000 ಕೋಟಿ ರೂಪಾಯಿ) ಏರಿಕೆಯಾಗಿದೆ ಎಂದು ಅವರು ಸಾಕ್ಷ್ಯ ನುಡಿದಿದ್ದಾರೆ.
ಯುದ್ಧದ ವೆಚ್ಚ ಇಷ್ಟು ದೊಡ್ಡ ಮಟ್ಟದಲ್ಲಿ ಏರಿಕೆಯಾಗಲು ಪ್ರಮುಖ ಕಾರಣ, ರಣಾಂಗಣದಲ್ಲಿ ಹಾನಿಗೊಳಗಾದ ಬಿಲಿಯನ್ ಡಾಲರ್ ಮೌಲ್ಯದ ಯುದ್ಧೋಪಕರಣಗಳ ದುರಸ್ತಿ ಮತ್ತು ಧ್ವಂಸಗೊಂಡ ವಿಮಾನಗಳ ಬದಲಿ ವೆಚ್ಚದ ಪರಿಷ್ಕೃತ ಅಂದಾಜೇ ಆಗಿದೆ ಎಂದು ಹರ್ಸ್ಟ್ ಕಳವಳ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಇರಾನ್ ವಿರುದ್ಧ ಜಯಭೇರಿ ಬಾರಿಸಲು ಹೋದ ಸೂಪರ್ ಪವರ್ ಅಮೆರಿಕಗೆ, ‘ಆಪರೇಷನ್ ಎಪಿಕ್ ಫ್ಯೂರಿ’ ಇತಿಹಾಸದಲ್ಲೇ ಎಂದಿಗೂ ಮರೆಯಲಾಗದ ಆರ್ಥಿಕ ಹಾಗೂ ಮಿಲಿಟರಿ ಆಘಾತವನ್ನು ನೀಡಿದೆ ಎಂಬುದು ಈಗ ಸಾಬೀತಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

