AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಅಮೆರಿಕದಲ್ಲಲ್ಲ, ಪ್ರಧಾನಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಆತಿಥ್ಯ ವಹಿಸಲಿದೆ ಈ ರಾಷ್ಟ್ರ

ಜಾಗತಿಕ ರಾಜಕೀಯ ವಲಯದಲ್ಲಿ ಈಗ ಮತ್ತೊಂದು ಅತ್ಯಂತ ಮಹತ್ವದ ಹಾಗೂ ಹೈ-ವೋಲ್ಟೇಜ್ ಶೃಂಗಸಭೆಗೆ ವೇದಿಕೆ ಸಿದ್ಧವಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶೀಘ್ರದಲ್ಲೇ ಮುಖಾಮುಖಿ ಸಭೆ ನಡೆಯಲಿದ್ದು, ಈ ಬಾರಿ ಇಬ್ಬರು ನಾಯಕರ ಮಿಲನಕ್ಕೆ ಭಾರತ ಅಥವಾ ಅಮೆರಿಕ ಅಲ್ಲ, ಬದಲಿಗೆ ಐತಿಹಾಸಿಕ ಯುರೋಪಿಯನ್ ರಾಷ್ಟ್ರವೊಂದು ಸಾಕ್ಷಿಯಾಗಲಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಭಾರತ-ಅಮೆರಿಕದಲ್ಲಲ್ಲ, ಪ್ರಧಾನಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಆತಿಥ್ಯ ವಹಿಸಲಿದೆ ಈ  ರಾಷ್ಟ್ರ
ನರೇಂದ್ರ ಮೋದಿ-ಟ್ರಂಪ್ Image Credit source: PTI
ನಯನಾ ರಾಜೀವ್
|

Updated on: May 20, 2026 | 9:14 AM

Share

ನವದೆಹಲಿ, ಮೇ 20: ವಿಶ್ವದ ಇಬ್ಬರು ಪ್ರಭಾವಶಾಲಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ನಡುವೆ ಶೀಘ್ರದಲ್ಲೇ ಮತ್ತೊಂದು ಮಹತ್ವದ ಮಾತುಕತೆ ನಡೆಯಲಿದೆ. ಆದರೆ, ಈ ಸಭೆಯು ಭಾರತದಲ್ಲಾಗಲಿ ಅಥವಾ ಅಮೆರಿಕದಲ್ಲಾಗಲಿ ನಡೆಯುತ್ತಿಲ್ಲ. ಬದಲಿಗೆ ಫ್ರಾನ್ಸ್​ ದೇಶದಲ್ಲಿ ಉಭಯ ನಾಯಕರು ಒಟ್ಟಿಗೆ ಕುಳಿತು ಜಾಗತಿಕ ವಿದ್ಯಾಮಾನಗಳ ಚರ್ಚೆ ನಡೆಸಲಿದ್ದಾರೆ. ಮುಂದಿನ ತಿಂಗಳು ಅಂದರೆ ಜೂನ್​​ನಲ್ಲಿ ಫ್ರಾನ್ಸ್​ ಆಯೋಜಿಸಿರುವ ಜಿ-7 ಶೃಂಗಸಭೆಯಲ್ಲಿ ಈ ಇಬ್ಬರು ನಾಯಕರು ಭಾಗವಹಿಸಲಿದ್ದಾರೆ.

ಈ ವರ್ಷದ ಜಿ-7 ಶೃಂಗಸಭೆಯು ಫ್ರಾನ್ಸ್‌ನ ಪ್ರಸಿದ್ಧ ಪ್ರವಾಸಿ ತಾಣವಾದ ಫ್ರೆಂಚ್ ಆಲ್ಪ್ಸ್‌ನ ಏವಿಯನ್-ಲೆಸ್-ಬೈನ್ಸ್ನಲ್ಲಿ ಜೂನ್ 15 ರಿಂದ 17 ರವರೆಗೆ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ 80 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೇವಲ ಒಂದು ದಿನದ ನಂತರ ಫ್ರಾನ್ಸ್‌ನಲ್ಲಿ ಈ ಜಿ-7 ಸಭೆ ನಡೆಯುತ್ತಿರುವುದು ವಿಶೇಷವಾಗಿದೆ. ಈ ಶೃಂಗಸಭೆಯಲ್ಲಿ ಟ್ರಂಪ್ ಅವರು ಪ್ರಮುಖವಾಗಿ ಕೃತಕ ಬುದ್ಧಿಮತ್ತೆ (AI), ಜಾಗತಿಕ ವ್ಯಾಪಾರ, ಭಯೋತ್ಪಾದನೆ ಹಾಗೂ ಅಪರಾಧದ ವಿರುದ್ಧದ ಹೋರಾಟದ ಬಗ್ಗೆ ಗಂಭೀರ ಚರ್ಚೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಳೆದ ಫೆಬ್ರವರಿ 17 ರಿಂದ 19, 2026 ರವರೆಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಆತ್ಮೀಯವಾಗಿ ಆಹ್ವಾನಿಸಿದ್ದರು. ಈ ಆಹ್ವಾನವನ್ನು ಸ್ವೀಕರಿಸಿರುವ ಪ್ರಧಾನಿ ಮೋದಿ ಅವರ ಫ್ರಾನ್ಸ್ ಪ್ರವಾಸ ಮಾರ್ಚ್ ಆರಂಭದಲ್ಲೇ ದೃಢಪಟ್ಟಿದೆ ಎಂದು ಭಾರತದಲ್ಲಿರುವ ಫ್ರೆಂಚ್ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಇದರಿಂದಾಗಿ ಜೂನ್‌ನಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್‌ಗೆ ಪ್ರಯಾಣ ಬೆಳೆಸುವುದು ಖಚಿತವಾಗಿದೆ.

ಮತ್ತಷ್ಟು ಓದಿ: ಪ್ರಧಾನಿ ನರೇಂದ್ರ ಮೋದಿ ನೆದರ್‌ಲ್ಯಾಂಡ್ಸ್ ಭೇಟಿಯಿಂದ ಭಾರತಕ್ಕೆ ಏನೆಲ್ಲ ಲಾಭ? ಇಲ್ಲಿದೆ ಮಾಹಿತಿ

ಈ ಜಿ-7 ಶೃಂಗಸಭೆಯಲ್ಲಿ ಯಾವುದೇ ಔಪಚಾರಿಕ ಅಥವಾ ನಿಜವಾದ ಒಪ್ಪಂದಗಳಿಗೆ ಸಹಿ ಹಾಕಲಾಗುವುದಿಲ್ಲ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ, ಭವಿಷ್ಯದ ದ್ವಿಪಕ್ಷೀಯ ಒಪ್ಪಂದಗಳಿಗೆ ಭದ್ರ ಬುನಾದಿ ಹಾಕಬಲ್ಲ ಜಾಗತಿಕ ಒಮ್ಮತವನ್ನು ನಿರ್ಮಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಇರಾನ್ ಬಿಕ್ಕಟ್ಟನ್ನು ಶೃಂಗಸಭೆಯ ಕಾರ್ಯಸೂಚಿಯಲ್ಲಿ ಸೇರಿಸುವ ಸಾಧ್ಯತೆಯಿದ್ದರೂ, ಡೊನಾಲ್ಡ್ ಟ್ರಂಪ್ ಮಾತ್ರ ವ್ಯಾಪಾರ ಮತ್ತು ಆರ್ಥಿಕತೆಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ.

ಇದಕ್ಕೂ ಮುನ್ನ, ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 13, 2025 ರಂದು ಶ್ವೇತಭವನದಲ್ಲಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಇದೀಗ ಜೂನ್ ತಿಂಗಳಲ್ಲಿ ಫ್ರಾನ್ಸ್‌ನ ಸುಂದರ ಪರಿಸರದಲ್ಲಿ ನಡೆಯಲಿರುವ ಇಬ್ಬರು ನಾಯಕರ ಈ ಮುಖಾಮುಖಿ ಭೇಟಿ, ಇಡೀ ವಿಶ್ವದ ರಾಜತಾಂತ್ರಿಕ ವಲಯದಲ್ಲಿ ಭಾರೀ ಕುತೂಹಲ ಹಾಗೂ ಹೊಸ ಸಂಚಲನವನ್ನು ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More