[lazy-load-videos-and-sticky-control id=”hr1WMoCEX8E”]ಕೊರೊನಾ ವೈರಸ್ ಹಾವಳಿಗೆ ಜಗತ್ತಿಗೆ ಜಗತ್ತೇ ತಲ್ಲಣಗೊಂಡಿದೆ. ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೆಮ್ಮಾರಿಯನ್ನ ಹಿಮ್ಮೆಟ್ಟಿಸಲು ವಿಶ್ವದ ಯಾವುದೇ ದೇಶಕ್ಕೂ ಇನ್ನು ಸಾಧ್ಯವಾಗಿಲ್ಲ. ಹೀಗಾಗಿ ಕೆಲ ಪ್ರಮುಖ ವೈದ್ಯ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಕೊರೊನಾ ವೈರಸ್ ಕುರಿತ ಗೈಡ್‌ಲೈನ್ಸ್‌ಗಳನ್ನು ಪುನರ್ ರಚಿಸುವಂತೆ ಪತ್ರ ಬರೆದಿದ್ದಾರೆ.
32 ದೇಶಗಳ 239 ತಜ್ಞರು ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದಿದ್ದು, ಇದರಲ್ಲಿ ಕೊರೊನಾ ವೈರಸ್ ಗಾಳಿಯ ಮುಖಾಂತರವೂ ಹಬ್ಬುತ್ತಿದೆ. ಈ ಸಂಬಂಧ ಕೆಲ ಪುರಾವೆಗಳು ಸಿಕ್ಕಿವೆ. ಹೀಗಾಗಿ ತಕ್ಷಣವೇ ಕೊರೊನಾ ವೈರಸ್ ಗಾಳಿಯಿಂದಲೂ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಕುರಿತು ರೂಪಿಸಿರುವ ನಿಯಮಾವಳಿಗಳಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೆಚ್ಚಿನ ಜನರು ಇರುವಲ್ಲಿ ಕೊರೊನಾ ಪೀಡಿತ ವ್ಯಕ್ತಿ ಸ್ವಲ್ಪ ಕೆಮ್ಮಿದರೆ, ದೀರ್ಘವಾಗಿ ಉಸಿರಾಡಿದರೂ ಕೂಡಾ ಗಾಳಿಯಲ್ಲಿ ತೇಲಾಡುತ್ತೆ. ಇಂಥ ಕೊರೊನಾ ಕಣಗಳು ಸಮೀಪದಲ್ಲಿರುವವರಗೆ ತಾಗಿ ಸೋಂಕಿತರಾಗುತ್ತಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನರು ಇರುವಂಥ ಕೊಠಡಿಗಳು ಅಂದ್ರೆ ಶಾಲೆ, ಕಾಲೇಜು, ಕಚೇರಿ ಮತ್ತು ಸಭೆ ಸಮಾರಂಭಗಳಲ್ಲಿ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು ಎಂದು ಎಚ್ಚರಿಸಿದ್ದಾರೆ.
ಇದರ ಜೊತೆಗೆ ಇಂಥ ಸಂದರ್ಭಗಳಲ್ಲಿ ಕೊರೊನಾ ತಡೆಗಟ್ಟಲು ಸಲಹೆಯನ್ನೂ ನೀಡಿದ್ದಾರೆ. ಸಾಕಷ್ಟು ಜನರು ಸೇರಿರುವ ಕಡೆ ಅಲ್ಟ್ರಾವೈಯೋಲೆಟ್ ಲೈಟ್‌ನ ವ್ಯವಸ್ಥೆ ಮಾಡಬೇಕು. ಇದು ಕೊರೊನಾ ಸೋಂಕನ್ನು ಕೊಲ್ಲುತ್ತೆ. ಇಲ್ಲದಿದ್ರೆ ಇತರರಿಗೆ ಸೋಂಕು ತಗುಲೋದು ಪಕ್ಕಾ ಎಂದು ಎಚ್ಚರಿಸಿದ್ದಾರೆ.
ಹಾಗೇನೆ ಎನ್95 ನಂಥ ಮಾಸ್ಕ್‌ಗಳನ್ನು ಕಡ್ಡಾಯ ಮಾಡಬೇಕು ಎಂದೂ ಸಲಹೆ ನೀಡಿದ್ದಾರೆ. ಈ ಸಂಬಂಧ ತಾವು ವಿವರಿಸಿರುವ ವಿಷಯವನ್ನು ಪರಿಗಣಿಸಿ ಈಗಿರುವ ಕೊರೊನಾ ಕುರಿತು ಪಾಲಿಸಬೇಕಾದ ಗೈಡ್‌ಲೈನ್ಸ್‌ಗಳನ್ನು ಪುನರ್ ರಚಿಸಿ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟಿಸುವಂತೆ ಆಗ್ರಹಿಸಿದ್ದಾರೆ.
WHO ಹೇಳೋದೇನು?
ಆದ್ರೆ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ತಜ್ಞರ ಈ ಮಾಹಿತಿಯನ್ನು ನಾವು ಸಂಪೂರ್ಣವಾಗಿ ಒಪ್ಪುವುದಿಲ್ಲ. ಗಾಳಿಯಿಂದ ಕೊರೊನಾ ಹರಡುವ ಸಾಧ್ಯೆತೆಯನ್ನ ತಳ್ಳಿ ಹಾಕುವಂತಿಲ್ಲ. ಆದ್ರೆ ಈ ಬಗ್ಗೆ ಇನ್ನೂ ಬಲವಾದ ಪುರಾವೆಗಳು ಸಿಕ್ಕಿಲ್ಲ ಎಂದು ಈ 239 ತಜ್ಞರ ವಾದಕ್ಕೆ ಪ್ರತಿಕ್ರಿಯಿಸಿದೆ.
Published On - 2:32 pm, Mon, 6 July 20