ಸೌತ್ ಆಫ್ರಿಕಾದಲ್ಲಿ ಭೀಕರ ಶೂಟೌಟ್; ಒಂಬತ್ತು ಮಂದಿ ಬಲಿ, 10 ಜನರಿಗೆ ಗಾಯ

Several killed by gunmen attack at South Africa: ಆಫ್ರಿಕಾ ಖಂಡದಲ್ಲೇ ಮುಂದುವರಿದ ದೇಶವೆನಿಸಿರುವ ಸೌತ್ ಆಫ್ರಿಕಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪರಾಧ ಘಟನೆಗಳು ಹೆಚ್ಚುತ್ತಿವೆ. ಜೋಹಾನ್ಸ್​ಬರ್ಗ್​ನಿಂದ 40 ಕಿಮೀ ಹೊರಗಿರುವ ಒಂದು ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ಆಗಂತುಕ ವ್ಯಕ್ತಿಗಳಿಂದ ಗುಂಡಿ ದಾಳಿಯಾಗಿದೆ. ಈ ಘಟನೆಯಲ್ಲಿ 9 ಮಂದಿ ಬಲಿಯಾಗಿದ್ದಾರೆ. 10 ಜನರು ಗಾಯಗೊಂಡಿದ್ದಾರೆ.

ಸೌತ್ ಆಫ್ರಿಕಾದಲ್ಲಿ ಭೀಕರ ಶೂಟೌಟ್; ಒಂಬತ್ತು ಮಂದಿ ಬಲಿ, 10 ಜನರಿಗೆ ಗಾಯ
ಸೌತ್ ಆಫ್ರಿಕಾ

Updated on: Dec 21, 2025 | 3:32 PM

ಜೋಹಾನ್ಸ್​ಬರ್ಗ್, ಡಿಸೆಂಬರ್ 21: ಜಗತ್ತಿನ ವಿವಿಧೆಡೆ ಭಯೋತ್ಪಾದನೆ ಮತ್ತು ಅಪರಾಧ ದಾಳಿಗಳು ಹೆಚ್ಚುತ್ತಲೇ ಇವೆ. ಆಸ್ಟ್ರೇಲಿಯಾದಲ್ಲಿ ಉಗ್ರರು ಸಾರ್ವಜನಿಕರ ಮೇಲೆ ಗುಂಡಿನ ದಾಳಿ ಎಸಗಿದ ಘಟನೆ ಮರೆಯಾಗುವ ಮುನ್ನವೇ ಸೌತ್ ಆಫ್ರಿಕಾದಲ್ಲಿ ಬಂದೂಕುದಾರಿಗಳಿಂದ ಭೀಕರ ದಾಳಿಯಾಗಿದೆ. ಜೋಹಾನ್ಸ್​ಬರ್ಗ್​ನ ಹೊರವಲಯದ ಚಿನ್ನದ ಗಣಿ ಸಮೀಪ ಇರುವ ಬೆಕ್ಕೆರ್ಸ್​ಡನ್ ಟೌನ್​ಶಿಪ್ ಬಳಿ ಆಗಂತುಕ ಬಂದೂಕುದಾರಿಗಳು ಸಾರ್ವಜನಿಕರ ಮೇಲೆ ದಾಳಿ (gunmen attack) ಎಸಗಿದ್ದಾರೆ. ಈ ಘಟನೆಯಲ್ಲಿ 9 ಮಂದಿ ಬಲಿಯಾಗಿದ್ದಾರೆ. ಹತ್ತು ಜನರು ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಬೆಕ್ಕೆರ್ಸ್ಡಲ್ ಬಾರ್ ಮೇಲೆ ದಾಳಿಕೋರರು ನುಗ್ಗಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ಎಸಗಿದ್ದಾರೆ. ಸ್ಥಳೀಯ ಕಾಲಮಾನ ರಾತ್ರಿ 1 ಗಂಟೆಯಲ್ಲಿ ಈ ಘಟನೆ ನಡೆದಿದೆ. ಭಾರತೀಯ ಕಾಲಮಾನ ಬೆಳಗ್ಗೆ 4:30ರ ಸಮಯ ಆಗಿರಬಹುದು. ಈ ಗುಂಡಿನ ದಾಳಿಯಲ್ಲಿ ಬಲಿಯಾದ ಒಂಬತ್ತು ಮಂದಿಯಲ್ಲಿ ಮೂವರು ಬಾರ್​ನ ಒಳಗೆಯೇ ಅಸು ನೀಗಿದ್ಧಾರೆ. ಇನ್ನುಳಿದವರು ಹೊರಗೆ ತಪ್ಪಿಸಿಕೊಳ್ಳಲು ಹೋಗುವಾಗ ಗುಂಡೇಟು ತಿಂದು ಸತ್ತಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ; ಯೂನಸ್ ಸರ್ಕಾರದಿಂದ 7 ಜನರ ಬಂಧನ

ಬಾರ್ ಮೇಲೆ ದಾಳಿ ನಡೆಸಿದವರು ಎಷ್ಟು ಮಂದಿ ಇದ್ದರು ಎಂಬುದು ಗೊತ್ತಾಗಿಲ್ಲ. ಆದರೆ, ಹೆಚ್ಚಿನವರ ಬಳಿ ಪಿಸ್ತೂಲ್ ಗನ್​ಗಳಿದ್ದವು. ಒಬ್ಬನ ಬಳಿ ಎಕೆ-47 ರೈಫಲ್ ಕೂಡ ಇತ್ತು. ಇವರು ಬಾರ್​ಗೆ ನುಗ್ಗಿ, ವಿನಾಕಾರಣ ಕಂಡ ಕಂಡವರ ಮೇಲೆ ಗುಂಡಿನ ದಾಳಿ ಎಸಗಿರುವುದು ಗೊತ್ತಾಗಿದೆ.

ಈ ಆಗಂತುಕ ದಾಳಿಕೋರರು ತಮ್ಮ ಗುಂಡೇಟಿನಿಂದ ಸತ್ತಾದ ಜನರಿಂದ ಸೆಲ್ ಫೋನ್ ಇತ್ಯಾದಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಕಾರಣಕ್ಕೆ, ದಾಳಿಕೋರರು ಕ್ರಿಮಿನಲ್​ಗಳಾಗಿದ್ದಿರಬಹುದು, ಇದು ಪೂರ್ಣ ಅಪರಾಧ ಕೃತ್ಯವಾಗಿದೆ ಎಂಬುದು ಪೊಲೀಸರ ಆರಂಭಿಕ ಸಂದೇಹವಾಗಿದೆ.

ಇದನ್ನೂ ಓದಿ: ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ

ಇದೇ ಡಿಸೆಂಬರ್ 6ರಂದು ಸೌತ್ ಆಫ್ರಿಕಾದ ಪ್ರಿಟೋರಿಯಾ ನಗರದ ಬಳಿಯೂ ಪಬ್​ವೊಂದರ ಮೇಲೆ ಕ್ರಿಮಿನಲ್​ಗಳು ದಾಳಿ ಎಸಗಿ ಹಲವರನ್ನು ಬಲಿಪಡೆದಿದ್ದರು. ಆವತ್ತಿನ ದಾಳಿಯಲ್ಲಿ ಮೂವರು ಮಕ್ಕಳೂ ಬಲಿಯಾಗಿದ್ದರು. ಅವರಲ್ಲಿ ಮೂರು ವರ್ಷದ ಮಗುವೂ ಸೇರಿದೆ. ವಲಸೆ ಕಾರ್ಮಿಕರ ಹಾಸ್ಟೆಲ್​ನೊಳಗೆ ಇದ್ದ ಪಬ್ ಮೇಲೆ ಆ ದಾಳಿಯಾಗಿತ್ತು.

ಆಫ್ರಿಕಾ ಖಂಡದಲ್ಲೇ ಹೆಚ್ಚು ಮುಂದುವರಿದ ದೇಶವಾಗಿರುವ ಸೌತ್ ಆಫ್ರಿಕಾದಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ಗಣನೀಯವಾಗಿ ಹೆಚ್ಚುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ