
ಕೊಲಂಬೋ, ಮಾರ್ಚ್ 4: ಇರಾನ್ ಹಾಗೂ ಇಸ್ರೇಲ್ ಸೇನಾ ಸಂಘರ್ಷ (Iran Isreal Conflict) ತೀವ್ರಗೊಂಡಿದ್ದು, ಭಾರತದ ನೆರೆಯ ಶ್ರೀಲಂಕಾ ಕರಾವಳಿ ವರೆಗೂ ಅದರ ಬಿಸಿ ತಟ್ಟತೊಡಗಿದೆ. ಶ್ರೀಲಂಕಾ ಸಮುದ್ರ ಗಡಿಯೊಳಗೆ ಇರಾನ್‌ಗೆ ಸೇರಿದ ಹಡಗೊಂದಕ್ಕೆ ಬುಧವಾರ ಸಬ್‌ಮರೀನ್ ಮೂಲಕ ದಾಳಿ ನಡೆಸಲಾಗಿದೆ ಎಂದು ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ‘ರಾಯಿಟರ್ಸ್’ ವರದಿ ಮಾಡಿದೆ. ಈ ದಾಳಿಯ ಪರಿಣಾಮ ಕನಿಷ್ಠ 101 ಮಂದಿ ಕಣ್ಮರೆಯಾಗಿದ್ದು, 78 ಮಂದಿ ಗಾಯಗೊಂಡಿದ್ದಾರೆ.
ದಾಳಿಯಿಂದ ಹಡಗಿಗೆ ತೀವ್ರ ಹಾನಿಯಾಗಿ ಮುಳುಗಿದೆ ಎನ್ನಲಾಗಿದೆ. ಇದಕ್ಕೂ ಮೊದಲು, ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿ, ಮುಳುಗುತ್ತಿರುವ ಇರಾನ್ ಹಡಗಿನಲ್ಲಿ ಇದ್ದ 30 ಮಂದಿಯನ್ನು ಶ್ರೀಲಂಕಾ ಸೇನೆ ರಕ್ಷಣೆ ಮಾಡಿದೆ ಎಂದು ತಿಳಿಸಿತ್ತು. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದೆ. ದಾಳಿ ಹಿನ್ನಲೆ ಮತ್ತು ಕಾರಣಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಶ್ರೀಲಂಕಾ ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿ ಡಾ. ಅನಿಲ್ ಜಾಸಿಂಘೆ ಅವರು ನೀಡಿದ ಮಾಹಿತಿ ಪ್ರಕಾರ, ರಕ್ಷಣೆ ಮಾಡಲಾದವರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ, ಏಳು ಮಂದಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
180 ಜನರಿದ್ದ ಐಆರ್ಐಎಸ್ ದೇನಾ (IRIS Dena) ಹಡಗು ಸಂಕಷ್ಟದಲ್ಲಿದೆ ಎಂದು ಶ್ರೀಲಂಕಾ ನೌಕಾಪಡೆಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಹಡಗುಗಳು ಮತ್ತು ವಾಯುಪಡೆಯ ವಿಮಾನಗಳನ್ನು ಕಳುಹಿಸಿಕೊಡಲಾಯಿತು ಎಂದು ವಿದೇಶಾಂಗ ಸಚಿವ ವಿಜಿತಾ ಹೆರಾತ್ ತಿಳಿಸಿದ್ದಾರೆ.
ಇದನ್ನೂ ಓದಿ: ಇರಾನ್ನಲ್ಲಿವೆ ಎರಡೆರಡು ಸೇನೆಗಳು, IRGC ಎಂದರೆ ಯಾರು? ಇರಾನ್ ಸೇನೆಗಿಂತ ಹೇಗೆ ಭಿನ್ನ?
ಇಸ್ರೇಲ್-ಇರಾನ್ ಯುದ್ಧದ ಐದನೇ ದಿನದಂದು, ಅಮೆರಿಕ ಮತ್ತು ಇಸ್ರೇಲ್ ಟೆಹ್ರಾನ್ ಮತ್ತು ಇರಾನ್ನ ಇತರ ನಗರಗಳ ಮೇಲೆ ಹಲವಾರು ವೈಮಾನಿಕ ದಾಳಿಗಳನ್ನು ನಡೆಸಿವೆ. ಮತ್ತೊಂದೆಡೆ, ಇರಾನ್ ಸಹ ಪ್ರತಿದಾಳಿ ತೀವ್ರಗೊಳಿಸಿದೆ. ಇಸ್ರೇಲ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Wed, 4 March 26