‘ಅಮೆರಿಕ ತಪ್ಪೆಸಗಿದರೆ ಯುದ್ಧದ ನಿಯಮಗಳನ್ನು ನಾವೇ ನಿರ್ಧರಿಸುತ್ತೇವೆ’; ಇರಾನ್ ಖಡಕ್ ಎಚ್ಚರಿಕೆ

ಇರಾನ್ ಯುದ್ಧದ ಕುರಿತಾದ ಅನಿಶ್ಚಿತತೆ ಮುಂದುವರಿದಿರುವ ಬೆನ್ನಲ್ಲೇ, ಇಸ್ಲಾಮಿಕ್ ಗಣರಾಜ್ಯವು ಎಂದಿಗೂ "ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ" ಎಂಬ ಅತಂತ್ರ ಸ್ಥಿತಿಯಲ್ಲಿ ಉಳಿಯುವುದಿಲ್ಲ ಎಂದು ಇರಾನ್‌ನ ಪ್ರಮುಖ ಸಂಧಾನಕಾರ ಹಾಗೂ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಲಿಬಾಫ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಲು ಇರಾನ್ ಮುಂದಿಟ್ಟಿರುವ 7 ಷರತ್ತುಗಳನ್ನು ಅಮೆರಿಕ ಒಪ್ಪಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ. ಸಂಸತ್ತಿನ ವರ್ಚುವಲ್ ಅಧಿವೇಶನದ ಆರಂಭಿಕ ಭಾಷಣದಲ್ಲಿ ಮಾತನಾಡಿದ ಗಲಿಬಾಫ್, ಅಮೆರಿಕಕ್ಕೆ "ಸಂಧಾನ ಬೇಕೋ ಅಥವಾ ಯುದ್ಧ ಬೇಕೋ" ಎಂಬುದು ಇರಾನ್‌ಗೆ ಮುಖ್ಯವಲ್ಲ ಎಂದು ಹೇಳಿದ್ದಾರೆ.

‘ಅಮೆರಿಕ ತಪ್ಪೆಸಗಿದರೆ ಯುದ್ಧದ ನಿಯಮಗಳನ್ನು ನಾವೇ ನಿರ್ಧರಿಸುತ್ತೇವೆ’; ಇರಾನ್ ಖಡಕ್ ಎಚ್ಚರಿಕೆ
ಮೊಹಮ್ಮದ್ ಬಾಗರ್ ಗಲಿಬಾಫ್
Image Credit source: Getty Images

Updated on: Nov 15, 2026 | 7:29 PM

ಟೆಹ್ರಾನ್, ನವೆಂಬರ್ 15: ಇರಾನ್ ಹಾಗೂ ಅಮೆರಿಕದ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಒಂದು ವೇಳೆ ಅಮೆರಿಕವು ಯಾವುದೇ ರೀತಿಯ ಮಿಲಿಟರಿ ತಪ್ಪೆಸಗಿದರೆ ಮುಂದಿನ ಯುದ್ಧದ ಸಂಪೂರ್ಣ ನಿಯಮಗಳು ಮತ್ತು ಹಾದಿಯನ್ನು ಇರಾನ್ ದೇಶವೇ ನಿರ್ಧರಿಸಲಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಲಿಬಾಫ್ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇಂದು ಇರಾನ್ ದೇಶವನ್ನು ಉದ್ದೇಶಿಸಿ ಮಾತನಾಡಿದ ಗಲಿಬಾಫ್, ಇರಾನ್ ತನ್ನ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಿಕೊಳ್ಳಲು ಸಂಪೂರ್ಣ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

“ನಾವು ಎಂದಿಗೂ ಯುದ್ಧವನ್ನು ಬಯಸುವುದಿಲ್ಲ. ಆದರೆ ನಮ್ಮ ವಿರುದ್ಧ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ, ಯುದ್ಧದ ಅಂತ್ಯ ಮತ್ತು ಅದರ ನಿಯಮಗಳನ್ನು ಶತ್ರುಗಳ ಬದಲಿಗೆ ನಾವೇ (ಇರಾನ್) ನಿರ್ಧರಿಸುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Loading...

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿಗೆ ಇರಾನ್ ತತ್ತರ; ಸಾಲ ತೀರಿಸಲು ದೇಹದ ಅಂಗಾಂಗಗಳನ್ನೇ ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಜನ!

ಅಮೆರಿಕ ಮತ್ತು ಮಿತ್ರರಾಷ್ಟ್ರಗಳಿಗೆ ಸಂದೇಶ:

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಧೋರಣೆಗಳನ್ನು ಕಟುವಾಗಿ ಟೀಕಿಸಿದ ಅವರು, ಇರಾನ್‌ನ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಸಿದ್ದಾರೆ. ಪ್ರಾದೇಶಿಕ ಸ್ಥಿರತೆಯನ್ನು ಹಾಳುಮಾಡುವ ಯಾವುದೇ ಅಮೆರಿಕದ ಸೈನಿಕ ಹೆಜ್ಜೆಗೆ ತಕ್ಕ ಹಾಗೂ ತೀವ್ರವಾದ ತಿರುಗೇಟು ನೀಡಲಾಗುವುದು ಎಂದು ಅವರು ಪುನರುಚ್ಚರಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟು ಹಾಗೂ ಮಿಲಿಟರಿ ಶಕ್ತಿ:

ದೇಶದಲ್ಲಿ ಆರ್ಥಿಕ ಸಂಕಷ್ಟ ಮತ್ತು ನಾಗರಿಕರ ಪ್ರತಿಭಟನೆಗಳು ಮುಂದುವರಿದಿರುವ ಬೆನ್ನಲ್ಲೇ, ಇರಾನ್ ಸರ್ಕಾರವು ತನ್ನ ಮಿಲಿಟರಿ ಬಲ ಮತ್ತು ರಾಜಕೀಯ ಗಟ್ಟಿತನವನ್ನು ಪ್ರದರ್ಶಿಸುವ ಮೂಲಕ ಬಾಹ್ಯ ಶಕ್ತಿಗಳಿಗೆ ಸ್ಪಷ್ಟ ಸಂದೇಶ ರವಾನಿಸಲು ಈ ಎಚ್ಚರಿಕೆ ನೀಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us