ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ಆಕ್ಸಫರ್ಡ್ ವಿಶ್ವವಿದ್ಯಾಲಯ-ಆಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿದ ಕೊವಿಶೀಲ್ಡ್ ಚುಚ್ಚುಮದ್ದಿಗೆ ಈಗ ಅಮೇರಿಕಾದ ಒಪ್ಪಿಗೆ ಸಿಕ್ಕಿದೆ. ಸುಮಾರು 32,000 ಜನ ಭಾಗವಹಿಸಿದ ಮೂರನೇ ಹಂತದ ಪ್ರಯೋಗದಲ್ಲಿ ಸುಮಾರು 79 ಪ್ರತಿಶತ ಸುರಕ್ಷಿತ ಎಂದು ನಿರೂಪಿತವಾಗಿದೆ. ಈ ಚುಚ್ಚುಮದ್ದು ತುಂಬಾ ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಅಮೆರಿಕದ ಎಫ್ಡಿಎ ಅಧಿಕಾರಿಗಳು ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಗಮನಿಸಬೇಕಾದ ಅಂಶವೇನೆಂದರೆ, ಪ್ರಯೋಗದಲ್ಲಿ ಭಾಗವಹಿಸಿದ ಪ್ರತಿ ಐದು ಜನರಲ್ಲಿ ಒಬ್ಬರು 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು. ಅವರಲ್ಲಿ ತೊಂದರೆ ಕಂಡುಬರಲಿಲ್ಲ.
ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು?
ಅಮೆರಿಕ ಈ ಚುಚ್ಚುಮದ್ದಿಗೆ ಒಪ್ಪಿಗೆ ಕೊಟ್ಟಿರುವುದರಿಂದ ವಿಶ್ವದ ಅನೇಕ ದೇಶಗಳು ಈ ಲಸಿಕೆ ಪಡೆಯಲು ಮುಂದೆ ಬರುವುದು ನಿಶ್ಚಿತ. ಈ ಚುಚ್ಚುಮದ್ದು ಸಹ ಭಾರತದಲ್ಲೇ ತಯಾರಿ ಆಗುತ್ತದೆ. ಒಂದೊಮ್ಮೆ ಅಮೆರಿಕ ತಕರಾರು ತೆಗೆದಿದ್ದರೆ ಭಾರತದಲ್ಲಿ ತಯಾರಾಗುವ ಈ ಚುಚ್ಚುಮದ್ದು ತಯಾರಿಕೆಗೆ ಬಹಳ ಹೊಡೆತ ಬೀಳುತ್ತಿತ್ತು. ಇದರ ಜೊತೆಗೆ ದೇಶದ ಒಳಗೆ ಕೂಡ ಈ ಚುಚ್ಚುಮದ್ದಿನ ಬಗ್ಗೆ ವಿರೋಧ ಪಕ್ಷದ ನಾಯಕರು ಸೇರಿ ಅನೇಕರು ಪ್ರಶ್ನೆ ಎತ್ತಿದ್ದರು. ಈಗ ಅಮೆರಿಕ ಹಸಿರು ನಿಶಾನೆ ತೊರಿಸಿರೋ ಹಿನ್ನೆಲೆಯಲ್ಲಿ, ಈ ಚುಚ್ಚುಮದ್ದನ್ನು ಹಾಕಿಸಿಕೊಳ್ಳಲು ನಮ್ಮ ದೇಶದಲ್ಲಿ ಕೂಡ ಜನ ಮುಂದೆ ಬರುವ ಸಾಧ್ಯತೆ ಇದೆ.
ವರದಿ ಇನ್ನೇನು ಹೇಳುತ್ತಿದೆ?
ಬಿಬಿಸಿ ವರದಿ ಪ್ರಕಾರ, ಕೊವಿಶೀಲ್ಡ್ ಲಸಿಕೆಯನ್ನು ಅಮೆರಿಕಾ, ಪೆರು ಮತ್ತು ಚಿಲಿ ದೇಶದ 32,000 ಜನಕ್ಕೆ ನೀಡಲಾಗಿತ್ತು. ಸುಮಾರು 79 ಪ್ರತಿಶತ ಜನರಲ್ಲಿ ಈ ಚುಚ್ಚುಮದ್ದು ಕೊವಿಡ್ ಲಕ್ಷಣವನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರೆ, ಕೊರೊನಾ ನಿಗ್ರಹ ಮಾಡುವಲ್ಲಿ ಈ ಚುಚ್ಚುಮದ್ದು 100 ಪ್ರತಿಶತ ಪರಿಣಾಮಕಾರಿ ಎಂಬುದು ನಿರೂಪಿತವಾಗಿದೆ ಎಂದು ವರದಿ ಹೇಳಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಚುಚ್ಚುಮದ್ದಿನಿಂದ ರಕ್ತ ಹೆಪ್ಪುಗಟ್ಟುತ್ತೆ ಎಂಬುದು ನಿರೂಪಿತವಾಗಿಲ್ಲ ಎಂದು ಅಮೆರಿಕಾ ಸಾರಿದೆ. ಫ್ರಾನ್ಸ್, ಇಟಲಿ ಮತ್ತು ಇನ್ನು ಕೆಲವು ಯುರೋಪಿಯನ್ ದೇಶಗಳು ತಮ್ಮ ದೇಶದ ಹಿರಿಯ ನಾಯಕರಿಗೆ ಈ ಚುಚ್ಚುಮದ್ದು ನೀಡುವುದನ್ನು ನಿಲ್ಲಿಸಿ WHO ಒಪ್ಪಿಕೊಳ್ಳುವವರೆಗೆ ತಾವು ಒಪ್ಪಿಕೊಳ್ಳಲ್ಲ ಎಂದು ಹೇಳಿದ್ದವು. ಈಗ ಅಮೆರಿಕ ಹಸಿರು ನಿಶಾನೆ ಕೊಟ್ಟರುವುದರಿಂದ ಯುರೋಪಿನ ದೇಶಗಳು ಈ ಚುಚ್ಚುಮದ್ದನ್ನು ಒಪ್ಪಿಕೊಂಡು ತಮ್ಮ ತಮ್ಮ ದೇಶದ ಪ್ರಜೆಗಳಿಗೆ ಈ ಚುಚ್ಚುಮದ್ದು ನೀಡಲು ಮುಂದಾಗಬಹುದು ಎಂದು ಬಿಬಿಸಿ ಹೇಳಿದೆ.
ಈ ಚುಚ್ಚುಮದ್ದು ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದ ಪ್ರಧಾನ ಸಂಶೋಧಕ, ಪ್ರೊ. ಆಂಡ್ರ್ಯೂ ಪೊಲಾರ್ಡ್ ಮಾತನಾಡಿ, ಅಮೆರಿಕದಿಂದ ಬರುತ್ತಿರುವುದು ಒಳ್ಳೇ ಸುದ್ದಿ. ಈ ಫಲಿತಾಂಶ ಏನನ್ನು ತೋರಿಸುತ್ತಿದೆ ಎಂದರೆ ಬಹಳ ದೊಡ್ಡ ಪ್ರಮಾಣದ ಜನಸಂಖ್ಯೆ ಮೇಲೆ ಈ ಚುಚ್ಚುಮದ್ದು ಪರಿಣಾಮಕಾರಿಯಾಗಿದೆ. ಮತ್ತು ಎಲ್ಲ ವಯಸ್ಸಿನ ಜನರ ಮೇಲೂ ಇದು ಪರಿಣಾಮಕಾರಿ ಎಂದು ನಿರೂಪಿತವಾದಂತೆ ಆಯ್ತು ಎಂದು ಹೇಳಿದ್ದಾರೆ. ಈ ಟೀಮಿನಲ್ಲಿ ಕೆಲಸ ಮಾಡಿರುವ ಮತ್ತೋರ್ವ ಸಂಶೋಧಕಿ ಪ್ರೊ. ಸಾರಾ ಗಿಲ್ಬರ್ಟ್ ಮಾತನಾಡಿ ಈ ಚುಚ್ಚುಮದ್ದು ತೆಗೆದುಕೊಂಡಾಗ ಕೆಲವರ ಆರೋಗ್ಯದಲ್ಲಿ ಏರುಪೇರಾಗಿರುವುದು ನಿಜ. ಆದರೆ, ಬಹಳ ಜನರಲ್ಲಿ ಕೊವಿಶಿಲ್ಡ್ನಿಂದ ಬಂದಿದ್ದು ಎಂಬುದು ನಿರೂಪಿತವಾಗಿಲ್ಲ ಎಂದು ಹೇಳಿದ್ದಾರೆ.
ಕೊವಿಡ್ ಲಸಿಕೆ ಬಗ್ಗೆ ನಿಮಗೆ ಗೊತ್ತಿರಬೇಕಾದ Top 9 ಸಂಗತಿಗಳು
Published On - 3:41 pm, Mon, 22 March 21