ಪ್ರಧಾನಿ ನರೇಂದ್ರ ಮೋದಿ ಪಡೆದ ಕೊವಿಡ್​ ವ್ಯಾಕ್ಸಿನ್ ಯಾವುದು? ಲಸಿಕೆ ಪಡೆದ ಬಳಿಕ ಪುದುಚೇರಿ, ಕೇರಳದ ನರ್ಸ್​ಗಳಿಗೆ ಹೇಳಿದ್ದೇನು?

Covid 19 Vaccination: ಭಾರತದಲ್ಲಿ ನೀಡಲಾಗುತ್ತಿರುವ ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಲಸಿಕೆಗಳ ಪೈಕಿ ಇಂದು ಪ್ರಧಾನಿ ಯಾವ ವ್ಯಾಕ್ಸಿನ್ ಪಡೆದರು.. ತಮಗೆ ಲಸಿಕೆ ನೀಡಿದ ನರ್ಸ್​ಗಳ ಜತೆ ಮಾತುಕತೆ ನಡೆಸಿದ ನರೇಂದ್ರ ಮೋದಿಯವರು ಏನೆಲ್ಲ ಹೇಳಿದರು ಎಂಬ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ..

ಪ್ರಧಾನಿ ನರೇಂದ್ರ ಮೋದಿ ಪಡೆದ ಕೊವಿಡ್​ ವ್ಯಾಕ್ಸಿನ್ ಯಾವುದು? ಲಸಿಕೆ ಪಡೆದ ಬಳಿಕ ಪುದುಚೇರಿ, ಕೇರಳದ ನರ್ಸ್​ಗಳಿಗೆ ಹೇಳಿದ್ದೇನು?
ಲಸಿಕೆ ನೀಡಿದ ನರ್ಸ್​ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ
Follow us
|

Updated on: Mar 01, 2021 | 12:05 PM

ನವದೆಹಲಿ: ಇಂದಿನಿಂದ 2ನೇ ಹಂತದ ಲಸಿಕೆ ವಿತರಣೆ ಅಭಿಯಾನ ಶುರುವಾಗಿದ್ದು, 60 ವರ್ಷ ಮೇಲ್ಪಟ್ಟ ಎಲ್ಲರಿಗೆ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಸಹ ಇಂದು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಕೊವಿಡ್-19 ಲಸಿಕೆಯನ್ನು ಪಡೆದರು. ಹಾಗೇ ತಾವು ಕೊವಿಡ್​-19 ಲಸಿಕೆ ಪಡೆದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋ ಕೂಡ ವೈರಲ್​ ಆಗಿದೆ.

ನಾನು ಕೊವಿಡ್​-19 ಲಸಿಕೆಯ ಮೊದಲ ಡೋಸ್​​ನ್ನು ಇಂದು ಏಮ್ಸ್​​ನಲ್ಲಿ ಪಡೆದೆ. ಕೊವಿಡ್​-19 ವಿರುದ್ಧ ನಡೆಯುತ್ತಿರುವ ಜಾಗತಿಕ ಮಟ್ಟದ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು, ವಿಜ್ಞಾನಿಗಳು ತ್ವರಿತಗತಿಯಲ್ಲಿ ಕೆಲಸ ಮಾಡಿ, ಲಸಿಕೆ ಅಭಿವೃದ್ಧಿಪಡಿಸಿದ್ದು ಶ್ಲಾಘನೀಯ. ಈ ಹಂತದಲ್ಲಿ ಲಸಿಕೆ ಪಡೆಯಲು ಅರ್ಹರಾಗಿರುವ ಎಲ್ಲರೂ ಹೋಗಿ ವ್ಯಾಕ್ಸಿನೇಶನ್​ ಮಾಡಿಸಿಕೊಳ್ಳಿ. ಭಾರತವನ್ನು ಕೊವಿಡ್​-19 ಮುಕ್ತವನ್ನಾಗಿ ಮಾಡೋಣ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಲಸಿಕೆ ನೀಡಿದ ನರ್ಸ್​ಗಳ ಜತೆ ಮಾತುಕತೆ ಬೆಳಗ್ಗೆ ಏಮ್ಸ್​ನಲ್ಲಿ ಕೊವಿಡ್​-19 ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ ಬಳಿಕ ತಮಗೆ ಚುಚ್ಚುಮದ್ದು ನೀಡಿದ ನರ್ಸ್​ಗಳ ಜತೆ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿಯವರಿಗೆ ಲಸಿಕೆ ನೀಡಿದ ಹೆಡ್​ ನರ್ಸ್​ ಪಿ.ನಿವೇದಾ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಲಸಿಕೆ ನೀಡಿ ಮುಗಿಸಿದ ಬಳಿಕ ಪ್ರಧಾನಿಯವರು ತುಂಬ ಅಚ್ಚರಿ ವ್ಯಕ್ತಪಡಿಸಿದರು. ‘ಇಷ್ಟು ಬೇಗ ಆಗಿ ಹೋಯಿತಾ?!..ನೀವು ಲಸಿಕೆ ಕೊಟ್ಟಿದ್ದೇ ನನಗೆ ಗೊತ್ತಾಗಲಿಲ್ಲ’ ಎಂದು ಹೇಳಿದರು. ನಾನು ಏಮ್ಸ್​​ನಲ್ಲಿ ಮೂರು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದೇನೆ. ಇಂದು ನಾನು ಏಮ್ಸ್​ನ ಕೊವಿಡ್​-19 ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದೆ. ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿಯವರು ವ್ಯಾಕ್ಸಿನ್ ಪಡೆಯಲು ಬರುತ್ತಾರೆ ಎಂದು ಬೆಳಗ್ಗೆಯಷ್ಟೇ ಗೊತ್ತಾಯಿತು. ನನಗಂತೂ ಅವರನ್ನು ಭೇಟಿಯಾಗಿದ್ದು, ಅವರಿಗೆ ಲಸಿಕೆ ನೀಡಿದ್ದು ತುಂಬ ಖುಷಿಕೊಟ್ಟಿತು. ನಿಮ್ಮ ಊರು ಯಾವುದು ಎಂಬ ಪ್ರಶ್ನೆಯನ್ನೂ ನಮಗೆ ಪಿಎಂ ಸರ್​ ಕೇಳಿದರು. ಇನ್ನು 28 ದಿನಗಳ ಬಳಿಕ ಅವರು ಇನ್ನೊಂದು ಡೋಸ್​ ಲಸಿಕೆ ಪಡೆಯಬೇಕಾಗುತ್ತದೆ ಎಂದು ನಿವೇದಾ ತಿಳಿಸಿದ್ದಾರೆ.

ಈ ವೇಳೆ ಅಲ್ಲಿಯೇ ಇದ್ದ ಕೇರಳದ ನರ್ಸ್​ ರೋಸಮ್ಮ ಅನಿಲ್​ ಕೂಡ ಮಾತನಾಡಿದ್ದಾರೆ. ಪ್ರಧಾನಿ ಮೋದಿಯವರು ತುಂಬ ಕಂಫರ್ಟ್​ ಆಗಿರುತ್ತಾರೆ. ನಮಗೂ ಅವರೊಂದಿಗೆ ಮಾತನಾಡಲು ಕಂಫರ್ಟ್​ ಎನ್ನಿಸಿತು ಎಂದು ತಿಳಿಸಿದ್ದಾರೆ.

ಮೋದಿಯವರು ಪಡೆದ ವ್ಯಾಕ್ಸಿನ್​ ಯಾವುದು? ಸದ್ಯ ಭಾರತದಲ್ಲಿ ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಎಂಬ ಎರಡು ರೀತಿಯ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಕೊವ್ಯಾಕ್ಸಿನ್​ ಇನ್ನೂ ಪೂರ್ತಿಯಾಗಿ ಪರೀಕ್ಷಾ ಹಂತಗಳನ್ನು ಮುಗಿಸಿಲ್ಲ, ಹಾಗಾಗಿ ನಂಬಲರ್ಹವಲ್ಲ ಎಂಬ ವಾದವನ್ನು ಪ್ರತಿಪಕ್ಷಗಳು ಮುಂದಿಟ್ಟಿವೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​ ಲಸಿಕೆಯನ್ನೇ ಪಡೆಯುವ ಮೂಲಕ ಸಾಮಾನ್ಯ ಜನರಲ್ಲೂ ವಿಶ್ವಾಸ ಮೂಡಿಸಿದ್ದಾರೆ.

ಅಸ್ಸಾಂ, ಕೇರಳ..ಪುದುಚೇರಿ?! ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಪಡೆದು ಮುಗಿಯುತ್ತಿದ್ದಂತೆ ಇನ್ನೊಂದು ಹೊಸ ವಿಚಾರ ಸೋಷಿಯಲ್​ ಮೀಡಿಯಾಗಳಲ್ಲಿ ಎದ್ದಿದೆ. ನರೇಂದ್ರ ಮೋದಿಯವರು ವ್ಯಾಕ್ಸಿನ್ ಪಡೆಯಲು ಅಸ್ಸಾಂನ ಸಂಸ್ಕೃತಿಯ ಬಿಂಬವಾಗಿರುವ ಗಮ್ಚಾವನ್ನು ಧರಿಸಿದ್ದರು. ಹಾಗೇ, ಮೋದಿಗೆ ಲಸಿಕೆ ಕೊಟ್ಟಿದ್ದು ಪುದುಚೇರಿಯ ನರ್ಸ್​ ಪಿ.ನಿವೇದಾ ಮತ್ತು ಈ ವೇಳೆ ಅಲ್ಲಿದ್ದ ಇನ್ನೋರ್ವ ನರ್ಸ್ ಕೇರಳದ ರೋಸಮ್ಮ ಅನಿಲ್​. ಈ ಅಂಶಗಳನ್ನು ಕೆಲವರು ಮುಂಬರುವ ಚುನಾವಣೆಗೆ ಲಿಂಕ್​ ಮಾಡಿಕೊಂಡು ಟೀಕಿಸುತ್ತಿದ್ದಾರೆ. ಈ ಮೂರು ಕಡೆ ಏಪ್ರಿಲ್​ 6ರಂದು ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಬಿಜೆಪಿ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಕೇರಳ, ಪುದುಚೇರಿಯಲ್ಲಿ ಅಧಿಕಾರ ಹಿಡಿಯುವ ತವಕ.. ಆಸ್ಸಾಂನಲ್ಲಿ ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಪಕ್ಷ ಇದೆ. ಇದೀಗ ಪ್ರಧಾನಿಯವರೂ ಅದರ ಒಂದು ಭಾಗವಾಗಿಯೇ ಹೀಗೆ ಲಸಿಕೆ ಪಡೆದಿದ್ದಾರೆ ಎಂಬ ವ್ಯಂಗ್ಯಭರಿತ ಪೋಸ್ಟ್​ಗಳು, ಕಾಮೆಂಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸುತ್ತಿವೆ.

ಇದನ್ನೂ ಓದಿ: Covid-19 Vaccine Cowin Registration: ಕೊರೊನಾ ಲಸಿಕೆ ಪಡೆಯಲು ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ?

ಕರ್ನಾಟಕದ ಈ ಖಾಸಗಿ ಆಸ್ಪತ್ರೆಗಳು ಕೊವಿಡ್​ ಲಸಿಕಾ ಕೇಂದ್ರಗಳು; ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ