West Bengal Election 2021: ಇಂದು ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಘೋಷಿಸಲಿದ್ದಾರೆ ಮಮತಾ ಬ್ಯಾನರ್ಜಿ

West Bengal Assembly Election 2021: ಇಂದು ಮಧ್ಯಾಹ್ನ 12:30ರ ಹೊತ್ತಿಗೆ ಪಕ್ಷದ ಚುನಾವಣಾ ಸಮಿತಿಯ ಜತೆ ಚರ್ಚೆ ನಡೆಸಲಿರುವ ಅವರು, ಅದಕ್ಕೂ ಮೊದಲು ಬಿಹಾರದ ವಿಪಕ್ಷ ನಾಯಕ ತೇಜಸ್ವಿ ಯಾದವ್ ಅವರ ಜತೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ಸಂಜೆಯ ವೇಳೆಗೆ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. 

West Bengal Election 2021: ಇಂದು ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಘೋಷಿಸಲಿದ್ದಾರೆ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
guruganesh bhat

| Edited By: Apurva Kumar Balegere

Mar 01, 2021 | 11:29 AM

ಕೋಲ್ಕತ್ತಾ: ಮಾರ್ಚ್ 27ರಿಂದ ಆರಂಭವಾಗಿ ಒಟ್ಟು 8 ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರದ ಸಿದ್ಧತೆ ಮಾಡಿಕೊಳ್ಳುತ್ತಿವೆ. ಮತ್ತೆ ಅಧಿಕಾರಕ್ಕೆ ಏರುವ ಉತ್ಸಾಹದಲ್ಲಿರುವ ತೃಣಮೂಲ ಕಾಂಗ್ರೆಸ್​ನ ಅಭ್ಯರ್ಥಿಗಳ ಹೆಸರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಘೋಷಿಸಲಿದ್ದಾರೆ. ಅಭ್ಯರ್ಥಿಗಳು ಮಾರ್ಚ್ 9ರ ಒಳಗೆ ನಾಮಪತ್ರ ಸಲ್ಲಿಸಬೇಕಿದ್ದು, ಇಂದು ಸಂಜೆ 5 ಗಂಟೆಯ ವೇಳೆಗೆ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಹುರಿಯಾಳುಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸುವ ತಯಾರಿ ನಡೆಸಿದ್ದಾರೆ.

ಇಂದು ಮಧ್ಯಾಹ್ನ 12:30ರ ಹೊತ್ತಿಗೆ ಪಕ್ಷದ ಚುನಾವಣಾ ಸಮಿತಿಯ ಜತೆ ಚರ್ಚೆ ನಡೆಸಲಿರುವ ಅವರು, ಅದಕ್ಕೂ ಮೊದಲು ಬಿಹಾರದ ವಿಪಕ್ಷ ನಾಯಕ ತೇಜಸ್ವಿ ಯಾದವ್ ಅವರ ಜತೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ಸಂಜೆಯ ವೇಳೆಗೆ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ.

ಕೋಲ್ಕತ್ತಾಕ್ಕೆ ಬಂದಿಳಿದ ತೇಜಸ್ವಿ ಯಾದವ್ ಇದುವರೆಗೂ ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳ ಜತೆ ಮೈತ್ರಿ ಹೊಂದಿದ್ದ ರಾಷ್ಟ್ರೀಯ ಜನತಾ ದಳ, ಇದೀಗ ತೃಣಮೂಲ ಕಾಂಗ್ರೆಸ್ ಜತೆ ಕೈಜೋಡಿಸುವ ಯೋಚನೆಯಲ್ಲಿದೆ. ನಿನ್ನೆ ಕೋಲ್ಕತ್ತಾಕ್ಕೆ ಬಂದಿಳಿದಿರುವ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಇಂದು ಮಮತಾ ಬ್ಯಾನರ್ಜಿ ಅವರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಪಶ್ಚಿಮ ಬಂಗಾಳದ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವ ರಾಷ್ಟ್ರೀಯ ಜನತಾ ದಳ ಟಿಎಂಸಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದೆ.

ಅಸಾನ್ಸೋಲ್, ಹೌರಾ ಮತ್ತು ಸೆಂಟ್ರಲ್ ಕೋಲ್ಕತ್ತಾಗಳಲ್ಲಿ ಮೈತ್ರಿಪಕ್ಷಗಳ ಹೊಂದಾಣಿಕೆಯೊಂದಿಗೆ ತನ್ನ ಉಮೇದುವಾರರನ್ನು ಕಣಕ್ಕಿಳಿಸುವ ಉಮೇದನ್ನು ರಾಷ್ಟ್ರೀಯ ಜನತಾ ದಳ ವ್ಯಕ್ತಪಡಿಸಿದೆ. ಹೀಗಾಗಿ ರಾಷ್ಟ್ರೀಯ ಜನತಾ ದಳ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಜತೆ ಹೊಂದಿರುವ ಮೈತ್ರಿಯ ಕುರಿತು ಊಹಾಪೋಹಗಳು ಕೇಳಿಬರುತ್ತಿವೆ.

ಎಂದು ನಡೆಯಲಿದೆ ಚುನಾವಣೆ?

294 ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಹಾಗೂ ಏಪ್ರಿಲ್ 29ರಂದು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಹೆಚ್ಚು ಕಟ್ಟುನಿಟ್ಟಾಗಿ ಚುನಾವಣೆ ನಡೆಸಬೇಕು ಎನ್ನುವ ಕಾರಣಕ್ಕೆ 8 ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ.

ಚುನಾವಣಾ ದಿನಾಂಕ ಘೋಷಣೆ ಮಾಡಿದ್ದ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್​ ಅರೋರಾ, ಎಲ್ಲಾ ಕಡೆಗಳಲ್ಲಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡುತ್ತೇವೆ. ಈ ಮೂಲಕ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಇದಾದ ಮರುದಿನವೇ ಪಶ್ಚಿಮ ಬಂಗಾಳದ ಎಡಿಜಿ ಮತ್ತು ಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಜಾವೇದ್ ಶಮೀಮ್ ಅವರನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಸ್ಥಾನಕ್ಕೆ ಐಪಿಎಸ್​ ಅಧಿಕಾರಿ ಜಗ್​ ಮೋಹನ್​ ಅವರನ್ನು ತರಲಾಗಿದೆ.

ಬಿಜೆಪಿ ನಿಯೋಗವು ಸಿಇಒ ಅರಿಜ್ ಅಫ್ತಾಬ್ ಅವರನ್ನು ಭೇಟಿಯಾಗಿ ಪಕ್ಷಪಾತ ಮಾಡುವ ಪೊಲೀಸ್ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ತೆಗೆದುಹಾಕುವಂತೆ ಒತ್ತಾಯಿಸಿತ್ತು. ಇದಾದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿತ್ತು.

ಟಿಎಂಸಿ-ಬಿಜೆಪಿ: ಇಬ್ಬರಿಗೂ ಎದುರಾಗಲಿದೆ ಸವಾಲು

ಕಾಂಗ್ರೆಸ್ ಜೊತೆಗೆ ಇಂಡಿಯನ್ ಸೆಕ್ಯುಲರ್ ಫ್ರಂಟ್​ನ (ಐಎಸ್​ಎಫ್) ಸೀಟು ಹಂಚಿಕೆ ಮಾತುಕತೆ ಇನ್ನೂ ನಡೆಯುತ್ತಿದೆ. ಕಾಂಗ್ರೆಸ್​ನೊಂದಿಗೆ ಒಪ್ಪಂದ ಅಂತಿಮಗೊಳ್ಳುವ ಮೊದಲೇ ಎಡಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಐಎಸ್​ಎಫ್ ಅಂತಿಮಗೊಳಿಸಿದೆ.

ಎಡಪಕ್ಷಗಳು, ಕಾಂಗ್ರೆಸ್ ಮತ್ತು ಇತರ ಜಾತ್ಯತೀತ ಪಕ್ಷಗಳ ಮಹಾಮೈತ್ರಿಕೂಟವು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ವಿರುದ್ಧ ನಿಚ್ಚಳ ಗೆಲುವು ಸಾಧಿಸಲಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಎರಡು ಪಕ್ಷಗಳ ಸ್ಪರ್ಧೆಯಷ್ಟೇ ಇರುವುದಿಲ್ಲ ಎನ್ನುವುದಕ್ಕೆ ಇಲ್ಲಿ ನೆರೆದಿರುವ ಭಾರೀ ಸಂಖ್ಯೆಯ ಜನರೇ ಸಾಕ್ಷಿ ಎಂದು ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಹೊರತುಪಡಿಸಿ, ತಮ್ಮ ಹಾದಿಗೆ ಅಡ್ಡಗಾಲಾಗುವ ಮತ್ತೊಂದು ಪಕ್ಷ ಇರಬಾರದೆಂದು ಈ ಪಕ್ಷಗಳು ಭಾವಿಸಿವೆ. ಮುಂದಿನ ದಿನಗಳಲ್ಲಿ ಕೇವಲ ಮಹಾಮೈತ್ರಿಕೂಟ ಮಾತ್ರ ಉಳಿದುಕೊಳ್ಳುತ್ತದೆ. ಬಿಜೆಪಿ-ಕಾಂಗ್ರೆಸ್​ಗಳು ಪಶ್ಚಿಮ ಬಂಗಾಳದಲ್ಲಿ ಉಳಿಯುವುದಿಲ್ಲ ಎಂದಿದ್ದರು.

ಟಿಎಂಸಿ-ಬಿಜೆಪಿಗೆ ಸವಾಲು ಹಾಕಿದ ಅಬ್ಬಾಸ್ ಸಿದ್ದಿಕಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸುತ್ತೇವೆ. ರಾಜ್ಯದ ಜನರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಹಂಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಂದು ಇಂಡಿಯನ್ ಸೆಕ್ಯುಲರ್ ಫ್ರಂಟ್​ನ (ಐಎಸ್​ಎಫ್) ಅಬ್ಬಾಸ್ ಸಿದ್ದಿಕಿ ಹೇಳಿದ್ದರು. ನಗರದ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಎಡಪಕ್ಷಗಳು, ಕಾಂಗ್ರೆಸ್ ಮತ್ತು ಜಾತ್ಯತೀತ ಪಕ್ಷಗಳ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ ಅವರು ಈ ಘೋಷಣೆ ಮಾಡಿದ್ದರು.

ಈ ಬಾರಿ ಬಿಜೆಪಿ ಮತ್ತು ಅದರ ಬೇನಾಮಿ ಮಮತಾ ಬ್ಯಾನರ್ಜಿಯಿಂದ ಪಶ್ಚಿಮ ಬಂಗಾಳಕ್ಕೆ ಮುಕ್ತಿ ಸಿಗುತ್ತದೆ. ಮಮತಾ ಬ್ಯಾನರ್ಜಿ ಮತ್ತು ಅವರ ಟಿಎಂಸಿ ನಾಯಕರು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸಿದ್ದಾರೆ. ರಾಜ್ಯದಲ್ಲೀಗ ಅರಾಜಕ ಪರಿಸ್ಥಿತಿ ನೆಲೆಗೊಂಡಿದೆ ಎಂದು ಹೇಳಿದ್ದರು.

ಇದನ್ನೂ ಓದಿ: West Bengal Election Date 2021: ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ, ಮೇ 2ರಂದು ಫಲಿತಾಂಶ

ಪಶ್ಚಿಮ ಬಂಗಾಳವನ್ನು ಸೋನಾರ್ ಬಾಂಗ್ಲಾ ಮಾಡುತ್ತೇವೆ; ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಭರವಸೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada