ಬ್ರೆಜಿಲ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13 ಲಕ್ಷ ದಾಟಿದ್ರೆ, 57 ಸಾವಿರ ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ನಿಗ್ರಹಿಸುವಲ್ಲಿ ಅಧ್ಯಕ್ಷ ಬೊಲ್ಸೊನಾರೋ ವಿಫಲವಾಗಿದ್ದಾರೆಂಬ ಆಕ್ರೋಶ ಹೆಚ್ಚಾಗಿದೆ. ಸಾವೋಪೋಲೋದಲ್ಲಿ ಸೇರಿದ ನೂರಾರು ಪ್ರತಿಭಟನಾಕಾರರು, ಬೊಲ್ಸನಾರೋ ಆಡಳಿಯದಲ್ಲಿ ಬಡವರು ಮಹಿಳೆಯರು ಹಾಗೂ ಸ್ಥಳೀಯರ ಜನರು ಕಷ್ಟ ಪಡುವಂತಾಗಿದೆ ಅಂತಾ ಆಕ್ರೋಶ ಹೊರ ಹಾಕಿದ್ರು.
ಕೊರೊನಾ ‘ಜಗ’
ಕೊರೊನಾದಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಪ್ರಪಂಚದಲ್ಲಿ 1 ಕೋಟಿ 24 ಲಕ್ಷದ 38 ಸಾವಿರದ 59 ಜನರಿಗೆ ಸೋಂಕು ತಗುಲಿದೆ. 5,04,410 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕಿನಿಂದ ಈವರೆಗೂ 55 ಲಕ್ಷದ 53 ಸಾವಿರದ 495 ಜನರು ಗುಣಮುಖರಾದ್ರೆ, 41,85,954 ಮಂದಿ ಪ್ರಸ್ತುತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕದಲ್ಲಿ 26,37,254 ಸೋಂಕಿತರಿದ್ರೆ, ಬ್ರೆಜಿಲ್ನಲ್ಲಿ 13,45,254 ಜನರು ವೈರಸ್ ಸುಳಿಗೆ ಸಿಲುಕಿದ್ದಾರೆ.
18 ಸೆಕೆಂಡ್ಗೆ ಒಬ್ಬರು ಬಲಿ!
ಕೊರೊನಾ ವೈರಸ್ ಜಗತ್ತಿನಾದ್ಯಂತ ತನ್ನ ಕಬಂಧಬಾಹುವನ್ನ ಚಾಚುತ್ತಿದ್ದು, ಸೋಂಕಿನಿಂದಾಗಿ ವಿಶ್ವದಲ್ಲಿ ಈವರೆಗೂ 5 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಯಿಟರ್ಸ್ ಅಂದಾಜಿನ ಪ್ರಕಾರ ಜಗತ್ತಿನಲ್ಲಿ ಪ್ರತಿ 18 ಸೆಕೆಂಡ್ಗೆ ಒಬ್ಬರು ಸೋಂಕಿನಿಂದ ಸಾಯುತ್ತಿದ್ದಾರಂತೆ. ಗಂಟೆಗೆ 196 ಜನರು ಪ್ರಾಣ ಕಳೆದುಕೊಳ್ತಿದ್ದಾರೆ. ಇಂಗ್ಲೆಂಡ್, ಭಾರತ, ಬ್ರೆಜಿಲ್ ಸೇರಿ ದಕ್ಷಿಣ ಭಾಗದ ದೇಶಗಳಲ್ಲಿ ಸೋಂಕು ಹೆಚ್ಚುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಆಫ್ರಿಕಾದಲ್ಲಿ ಕೊರೊನಾ ಕಂಟಕ
ಕೊರೊನಾ ವೈರಸ್ನಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಲೇ ಇದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 1,38,134 ಜನರಿಗೆ ಸೋಂಕು ತಗುಲಿದ್ರೆ, ವೈರಸ್ನಿಂದಾಗಿ ಎರಡೂವರೆ ಸಾವಿರ ಜನರು ಬಲಿಯಾಗಿದ್ದಾರೆ. ನಿನ್ನೆ ಒಂದೇ ದಿನ ಸುಮಾರು 4,300 ಜನರು ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಖ್ಯೆ ಮತ್ತಷ್ಟು ದುಪ್ಪಟ್ಟಾಗುವ ಸಾಧ್ಯತೆ ಇದೆ ಅಂತಾ ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜ್ವೆಲಿನಿ ಮೆಖೆಂಜಿ ಹೇಳಿದ್ದಾರೆ.
ಅಮೆರಿಕದಲ್ಲಿ ಕೊರೊನಾ ಬೇಗೆ
ಕೊರೊನಾ ಸೋಂಕಿನಿಂದ ಜಗತ್ತಿನಲ್ಲಿ ಅತಿ ಹೆಚ್ಚು ಹೊಡೆತ ತಿಂದ ದೇಶ ಅಂದ್ರೆ ಅಮೆರಿಕ. ವಿಶ್ವದ ದೊಡ್ಡಣ್ಣ ಅಂತಾ ಬೀಗುತ್ತಿದ್ದ ಅಮೆರಿದಲ್ಲೀಗ, ಕೊರೊನಾ ಅಬ್ಬರಿಸಿ ಬೊಬ್ಬಿರಿಯುತ್ತಲೇ ಇದೆ. ನಿನ್ನೆ ಒಂದೇ ದಿನ 44,782 ಜನ ಸೋಂಕಿತರು ಪತ್ತೆಯಾಗಿದ್ದು, 1,25,000 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಾವಿನ ಸಂಖ್ಯೆ 2.5 ಮಿಲಿನ್ ಆದರೂ ಅಚ್ಚರಿ ಇಲ್ಲ ಅಂತಾ ಮೂಲಗಳು ತಿಳಿಸಿವೆ.
ಅಮೇಜಾನ್ ಸಿಬ್ಬಂದಿ ಪ್ರತಿಭಟನೆ
ಆನ್ಲೈನ್ ಮೂಲಕವೇ ಗ್ರಾಹಕರು ಇದ್ದಲ್ಲಿಗೆ ವಸ್ತುಗಳನ್ನ ಅಮೇಜಾನ್ ಸಂಸ್ಥೆ ತಲುಪಿಸುತ್ತಿದೆ. ಆದ್ರೆ, ಕೊರೊನಾ ಸೋಂಕು ಜರ್ಮನಿಯ ಅಮೇಜಾನ್ ಕಚೇರಿಯ ಕೆಲ ಸಿಬ್ಬಂದಿಗೂ ವಕ್ಕರಿಸಿಕೊಂಡಿದ್ದು, ಸೂಕ್ತ ರಕ್ಷಣೆ ನೀಡದ್ದಕ್ಕೆ ಕಂಗಾಲ್ ಆಗಿರುವ ಸಿಬ್ಬಂದಿ ಪ್ರತಿಭಟನೆಗಿಳಿದಿದ್ದಾರೆ. ಅಮೇಜಾನ್ ಸಂಸ್ಥೆಯ ಸುಮಾರು 30 ರಿಂದ 40 ಸಿಬ್ಬಂದಿಗೆ ಸೋಂಕು ತಗುಲಿದ್ದಕ್ಕೆ ಪ್ರತಿಭಟನೆ ನಡೆಸಲಾಗ್ತಿದೆ. 2013ರ ಬಳಿಕ ಇದೇ ಮೊದಲ ಬಾರಿಗೆ ಈ ಪರಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಸೋಂಕಿನ ಸುಳಿ
ಕೆಲ ದಿನಗಳಿಂದ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ವೈರಸ್ ಈಗ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. 2 ತಿಂಗಳಿನಿಂದ ಸೋಂಕುನ ಸುಳಿ ಇಲ್ಲದೇ ನಿಶ್ಚಿಂತೆಯಿಂದ ಇದ್ದ ಆಸ್ಟ್ರೇಲಿಯಾದಲ್ಲಿ ಮತ್ತೆ ಕೊರೊನಾ ಅಲೆ ಎಬ್ಬಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ 75 ಜನರಿಗೆ ಕೊರೊನಾ ಸೋಂಕು ಹಬ್ಬಿದೆ. ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ, ದೈಹಿಕ ಅಂತರ ಕಾಯ್ದುಕೊಳ್ಳದೇ ಜನ ಓಡಾಟ ಮಾಡಿದ್ದರಿಂದಾಗಿ ಕೊರೊನಾ ಸೋಂಕು ಹೆಚ್ಚಾಗಲು ಕಾರಣ ಅಂತಾ ಹೇಳಲಾಗ್ತಿದೆ.
ಬೆಚ್ಚಿದ ಬೀಜಿಂಗ್
ಕೊರೊನಾ ಸೋಂಕಿನ ಮೂಲ ಚೀನಾದಲ್ಲಿ ಸೋಂಕು ಇನ್ನೂ ಕಂಟ್ರೋಲ್ಗೇ ಬಂದಿಲ್ಲ. ರಾಜಧಾನಿ ಬೀಜಿಂಗ್ನಲ್ಲಿ ಇಂದು ಮತ್ತೆ 7 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದ 14 ದಿನಗಳ ಅವಧಿಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾದರೂ ಸಹ ಕೊರೊನಾ ಅಲೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಈಗ ಪತ್ತೆಯಾಗಿರುವ 7 ಸೋಂಕಿತರ ಪೈಕಿ ಮೂವರಲ್ಲಿ ಕೊರೊನಾ ರೋಗದ ಲಕ್ಷಣಗಳೇ ಇಲ್ಲದೇ ಇರೋದು ಅಚ್ಚರಿ ಮೂಡಿಸಿದೆ.
ಚೀನಾ ಸೇನೆಗೆ ವ್ಯಾಕ್ಸಿನ್ ಬಳಕೆ
ಚೀನಾದಲ್ಲಿ ಒಂದೆಡೆ ಕೊರೊನಾ ಸೋಂಕು ಅಟ್ಟಹಾಸ ಮೆರೀತಿದ್ರೆ, ಇತ್ತ ವ್ಯಾಕ್ಸಿನ್ ಬಳಕೆಗೆ ಪ್ರಯೋಗಗಳೂ ನಡೀತಿವೆ. ಕ್ಲಿನಿಕಲ್ ಪ್ರಯೋಗಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದ ಬಳಿಕ, ಚೀನಾದ ಮಿಲಿಟರಿ ತನ್ನ ಸಂಶೋಧನಾ ಘಟಕ ಮತ್ತು ಕ್ಯಾನ್ಸಿನೊ ಬಯೋಲಾಜಿಕ್ಸ್ ಅಭಿವೃದ್ಧಿಪಡಿಸಿದ COVID-19 ಲಸಿಕೆಯನ್ನ ಬಳಸಲು ಚೀನಾ ಸೇನೆ ಮುಂದಾಗಿದೆ. ಕೊವಿಡ್ನಿಂದ ಉಂಟಾಗುವ ಉಸಿರಾಟದ ಸಮಸ್ಯೆಗಳಿಗೆ ಮತ್ತು ಮಾನವ ಪ್ರಯೋಗಗಳಿಗೆ ಸಂಶೋಧಕರು ಅನುಮೋದನೆ ನೀಡಿದ್ದಾರೆ.
Published On - 3:15 pm, Mon, 29 June 20