ರಷ್ಯಾದ ತೈಲ ಘಟಕಗಳ ಮೇಲೆ ದಾಳಿ ನಿಲ್ಲಿಸಿ, ಜಾಗತಿಕ ಡೀಸೆಲ್ ಬಿಕ್ಕಟ್ಟಿಗೆ ಝೆಲೆನ್‌ಸ್ಕಿ ಕಾರಣವೆಂದು ಕೆಂಡವಾದ ಟ್ರಂಪ್

ಡೊನಾಲ್ಡ್ ಟ್ರಂಪ್ ಝೆಲೆನ್‌ಸ್ಕಿಗೆ ರಷ್ಯಾದ ತೈಲ ಘಟಕಗಳ ಮೇಲಿನ ದಾಳಿ ನಿಲ್ಲಿಸಲು ಎಚ್ಚರಿಸಿದ್ದಾರೆ. ಈ ದಾಳಿಗಳು ಜಾಗತಿಕ ಡೀಸೆಲ್ ಬಿಕ್ಕಟ್ಟು ಮತ್ತು ವಿಶ್ವ ಆರ್ಥಿಕತೆಗೆ ಹಾನಿ ಮಾಡುತ್ತಿವೆ ಎಂದಿದ್ದಾರೆ. ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಅಮೆರಿಕ ವಿರೋಧಿಸಿದೆ. ಯುದ್ಧ ಕೊನೆಗೊಳಿಸಲು ಭಾರತ ಮತ್ತು ಚೀನಾ ಶಾಂತಿ ಮಾತುಕತೆಗೆ ಮುಂದಾಗಿದ್ದು, ಪುಟಿನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಇದು ಹೊಸ ಭರವಸೆ ಮೂಡಿಸಿದೆ.

ರಷ್ಯಾದ ತೈಲ ಘಟಕಗಳ ಮೇಲೆ ದಾಳಿ ನಿಲ್ಲಿಸಿ, ಜಾಗತಿಕ ಡೀಸೆಲ್ ಬಿಕ್ಕಟ್ಟಿಗೆ ಝೆಲೆನ್‌ಸ್ಕಿ ಕಾರಣವೆಂದು ಕೆಂಡವಾದ ಟ್ರಂಪ್
ಡೊನಾಲ್ಡ್​ ಟ್ರಂಪ್
Image Credit source: Deccan Chronicle

Updated on: Sep 14, 2026 | 9:09 AM

ಡೂನ್‌ಬೆಗ್, ಸೆಪ್ಟೆಂಬರ್ 14: ರಷ್ಯಾದ ತೈಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡು ನಿರಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಉಕ್ರೇನ್ ನಡೆಸುತ್ತಿರುವ ಈ ದಾಳಿಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಡೀಸೆಲ್ ಮತ್ತು ಕಚ್ಚಾ ತೈಲದ ಭಾರಿ ಕೊರತೆ ಉಂಟಾಗುತ್ತಿದ್ದು, ಇದು ಇಡೀ ವಿಶ್ವದ ಆರ್ಥಿಕತೆಗೆ ಪೆಟ್ಟು ನೀಡುತ್ತಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಯುರೋಪ್ ಯುದ್ಧವು 5ನೇ ವರ್ಷಕ್ಕೆ ಕಾಲಿಟ್ಟಿರುವ ಹೊತ್ತಿನಲ್ಲೇ ಟ್ರಂಪ್ ಅವರು ಝೆಲೆನ್‌ಸ್ಕಿಯನ್ನು ಈ ರೀತಿ ನೇರವಾಗಿ ತರಾಟೆಗೆ ತೆಗೆದುಕೊಂಡಿರುವುದು ತೀವ್ರ ಸಂಚಲನ ಸೃಷ್ಟಿಸಿದೆ.

ಟ್ರಂಪ್ ಆಕ್ರೋಶದ ಮಾತುಗಳು: ಝೆಲೆನ್‌ಸ್ಕಿ ರಷ್ಯಾದಲ್ಲಿ ಡೀಸೆಲ್ ಇಂಧನ ಘಟಕಗಳನ್ನು ಗುರಿಯಾಗಿಸುವುದನ್ನು ತಕ್ಷಣ ನಿಲ್ಲಿಸಬೇಕು. ಬೇರೆ ಸೇನಾ ನೆಲೆಗಳ ಮೇಲೆ ದಾಳಿ ಮಾಡಲಿ, ಆದರೆ ತೈಲ ಸಂಸ್ಕರಣಾಗಾರಗಳನ್ನಲ್ಲ. ಇದು ಜಗತ್ತಿಗೆ ತೀವ್ರ ಹಾನಿ ಮಾಡುತ್ತಿದೆ ಎಂದು ಐರ್ಲೆಂಡ್‌ನ ಡೂನ್‌ಬೆಗ್ ಗಾಲ್ಫ್ ಕ್ಲಬ್‌ನಲ್ಲಿ ಟ್ರಂಪ್ ಗುಡುಗಿದ್ದಾರೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಜತೆಗೆ ಡಬಲ್ ಹೊಡೆತ: ಇರಾನ್ ಮತ್ತು ಅಮೆರಿಕ ಸಂಘರ್ಷದ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡ್ಡಿಯಾಗಿದ್ದು, ಈಗಾಗಲೇ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿವೆ. ವಿಶ್ವದ ಶೇ. 20 ರಷ್ಟು ತೈಲ ಈ ಮಾರ್ಗದಲ್ಲೇ ಸಾಗಬೇಕಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಉಕ್ರೇನ್ ರಷ್ಯಾದ ತೈಲ ರಿಫೈನರಿಗಳನ್ನು ನಾಶಪಡಿಸುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ಟ್ರಂಪ್ ವಿಶ್ಲೇಷಿಸಿದ್ದಾರೆ.

ಮತ್ತಷ್ಟು ಓದಿ: ದೆಹಲಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಮನ, ಪ್ರಧಾನಿ ಮೋದಿ ಜತೆ ಮಹತ್ವದ ದ್ವಿಪಕ್ಷೀಯ ಮಾತುಕತೆ

ಶಾಂತಿ ಮಾತುಕತೆಗೆ ಭಾರತ-ಚೀನಾ ಮುಂದಾಳತ್ವ: ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದು, ಯುದ್ಧವನ್ನು ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಪುಟಿನ್ ಸಕಾರಾತ್ಮಕ ಸ್ಪಂದನೆ: ಮೋದಿ ಮತ್ತು ಕ್ಸಿ ಅವರ ಶಾಂತಿ ಪ್ರಸ್ತಾಪವನ್ನು ಪುಟಿನ್ ಸ್ವಾಗತಿಸಿದ್ದಾರೆ. ಮಾತುಕತೆಯ ಸಾಧ್ಯತೆಯನ್ನು ರಷ್ಯಾ ತಳ್ಳಿಹಾಕಿಲ್ಲ, ಬಹುಶಃ ಅಕ್ಟೋಬರ್‌ನಲ್ಲಿ ಶಾಂತಿ ಮಾತುಕತೆಗಳು ಪುನರಾರಂಭವಾಗಬಹುದು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

ಅಮೆರಿಕದ ನಿಲುವಿನಲ್ಲಿ ಮಹತ್ವದ ಬದಲಾವಣೆ: ಉಕ್ರೇನ್‌ಗೆ ನಿರಂತರವಾಗಿ ಶಸ್ತ್ರಾಸ್ತ್ರ ಬೆಂಬಲ ನೀಡುತ್ತಿರುವ ನಡುವೆಯೂ, ಜಾಗತಿಕ ಇಂಧನ ಬಿಕ್ಕಟ್ಟು ಹಾಗೂ ದೇಶೀಯವಾಗಿ ಹಣದುಬ್ಬರ ನಿಯಂತ್ರಣಕ್ಕೆ ತರುವ ಒತ್ತಡದಲ್ಲಿರುವ ಅಮೆರಿಕ, ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತಿದೆ.

ಗ್ಲೋಬಲ್ ಡೀಸೆಲ್ ಕೊರತೆ: ರಷ್ಯಾ ವಿಶ್ವದ ಪ್ರಮುಖ ಡೀಸೆಲ್ ರಫ್ತುದಾರ ದೇಶಗಳಲ್ಲಿ ಒಂದಾಗಿದೆ. ಉಕ್ರೇನ್ ರಷ್ಯಾದ ಪ್ರಮುಖ ರಿಫೈನರಿಗಳನ್ನು ನಿಷ್ಕ್ರಿಯಗೊಳಿಸಿರುವುದರಿಂದ ಯೂರೋಪ್, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಕೃಷಿ ಮತ್ತು ಸರಕು ಸಾಗಣೆಗೆ ಅಗತ್ಯವಿರುವ ಡೀಸೆಲ್ ಸರಬರಾಜಿನಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ.

ರಾಜತಾಂತ್ರಿಕ ಮಹತ್ವ: ಅಮೆರಿಕದ ರಾಯಭಾರಿಗಳ ಪ್ರಯತ್ನಗಳು ಫಲಕೊಡದ ಹಿನ್ನೆಲೆಯಲ್ಲಿ, ರಷ್ಯಾದೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿರುವ ಭಾರತದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಅವರ ಮಧ್ಯಸ್ಥಿಕೆಯು ಯುರೋಪಿನ ಈ ದೀರ್ಘಕಾಲದ ಮಾರಕ ಯುದ್ಧಕ್ಕೆ ತೆರೆ ಎಳೆಯಲು ಹೊಸ ಆಶಾಕಿರಣ ಮೂಡಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us