
ವಾಷಿಂಗ್ಟನ್, ಸೆಪ್ಟೆಂಬರ್ 10: ಅಮೆರಿಕದಲ್ಲಿ ಅಕ್ರಮ ವಲಸಿಗರನ್ನು ಹೊರಹಾಕಲು ಟ್ರಂಪ್ ಸರ್ಕಾರ ಆರಂಭಿಸಿರುವ ಪ್ರಚಾರವು ಈಗ ಭಾರತೀಯರನ್ನು ಕೆರಳಿಸಿದೆ. ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಬಿಡುಗಡೆ ಮಾಡಿರುವ ಹೊಸ ಡಿಜಿಟಲ್ ಜಾಹೀರಾತಿನಲ್ಲಿ, ಭಾರತೀಯರನ್ನು ಜನಾಂಗೀಯವಾಗಿ ಹೀಯಾಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅಲ್ಲಿನ ಭಾರತೀಯ ಸಮುದಾಯ ತೀವ್ರ ಆಕ್ರೋಶ ಹೊರಹಾಕಿದೆ.
ವಿವಾದ ಹುಟ್ಟುಹಾಕಿದ ಪೋಸ್ಟರ್: ಜಾಹೀರಾತಿನಲ್ಲಿ ಗಡ್ಡಧಾರಿ ವ್ಯಕ್ತಿಯೊಬ್ಬನನ್ನು ಉದ್ದೇಶಿಸಿ, “ನಮ್ಮ ರಸ್ತೆಗಳಿಂದ ಆಚೆ ಹೋಗಿ, ನಿಮಗೆ ಡ್ರೈವಿಂಗ್ ಬರುವುದಿಲ್ಲ ಮಿಸ್ಟರ್ ಸಿಂಗ್” ಎಂದು ಬರೆದಿರುವುದು ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತೀಯರ ಹೆಸರೆತ್ತಿ ಅಪಮಾನ: ಎಐ ಮೂಲಕ ರಚಿಸಲಾದ ಮತ್ತೊಂದು ವಿಡಿಯೋದಲ್ಲಿ ಮೆಗಾಟ್ರಾನ್ ಪಾತ್ರವನ್ನು ಬಳಸಲಾಗಿದೆ. ಅಪಘಾತಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹರ್ಜಿಂದರ್ ಸಿಂಗ್, ರಾಜಿಂದರ್ ಕುಮಾರ್ ಹಾಗೂ ಜಸ್ವೀರ್ ಸಿಂಗ್ ಸೇರಿದಂತೆ ಹಲವರ ಹೆಸರುಗಳನ್ನು ನೇರವಾಗಿ ಪ್ರಸ್ತಾಪಿಸಿ, ಅವರನ್ನು ‘ಏಲಿಯನ್ಸ್’ ಎಂದು ಕರೆಯಲಾಗಿದೆ.
ಮತ್ತಷ್ಟು ಓದಿ: ಅಮೆರಿಕ ನಿರ್ಬಂಧದ ಎಚ್ಚರಿಕೆ ನಡುವೆಯೂ ಭಾರತ-ಇರಾನ್ ಸ್ನೇಹ ಗಟ್ಟಿ,ಬ್ರಿಕ್ಸ್ ಸಭೆ, ಚಬಹಾರ್ ಬಂದರಿನತ್ತ ಎಲ್ಲರ ಚಿತ್ತ
ಸ್ವಯಂ ಗಡೀಪಾರು ಆಫರ್: ಅಮೆರಿಕದಲ್ಲಿ ದಾಖಲೆಗಳಿಲ್ಲದೆ ವಾಸಿಸುತ್ತಿರುವ ವಲಸಿಗರು ತಾವಾಗಿಯೇ ದೇಶ ಬಿಟ್ಟು ಹೋದರೆ, ಪ್ರಯಾಣ ವೆಚ್ಚದ ಜೊತೆಗೆ ಬೋನಸ್ ನೀಡುವುದಾಗಿ ಸರ್ಕಾರ ಈ ಅಭಿಯಾನದಲ್ಲಿ ತಿಳಿಸಿದೆ.
ಭಾರತೀಯ ಸಂಘಟನೆಗಳ ಕಿಡಿ: ಹಿಂದೂ ಅಮೆರಿಕನ್ ಫೌಂಡೇಶನ್ ಮತ್ತು ಸಿಖ್ ಒಕ್ಕೂಟಗಳು ಈ ಪೋಸ್ಟರ್ಗೆ ಕಟು ವಿರೋಧ ವ್ಯಕ್ತಪಡಿಸಿವೆ. “ಸಿಂಗ್ ಎಂಬುದು ಧೈರ್ಯದ ಪ್ರತೀಕ. ಕೇವಲ ಹೆಸರಿನ ಆಧಾರದ ಮೇಲೆ ಇಡೀ ಸಮುದಾಯವನ್ನು ಹೀಗೆ ಅವಮಾನಿಸುವುದು ತಪ್ಪು” ಎಂದು ಹೇಳಿರುವ ಮುಖಂಡರು, ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಅವರಿಗೆ ದೂರು ನೀಡಲು ಮುಂದಾಗಿದ್ದಾರೆ.
ಪೋಸ್ಟ್
ಅಮೆರಿಕದ ಸರಕು ಸಾಗಣೆ ಉದ್ಯಮದಲ್ಲಿ ಭಾರತೀಯರ ಪಾತ್ರ ದೊಡ್ಡದಿದೆ. ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ನಂತಹ ದೊಡ್ಡ ರಾಜ್ಯಗಳಲ್ಲಿ ಶೇಕಡಾ 20 ರಷ್ಟು ಟ್ರಕ್ ಚಾಲಕರು ಭಾರತೀಯರೇ ಆಗಿದ್ದು, ದೇಶದ ಅಗತ್ಯ ವಸ್ತುಗಳ ಪೂರೈಕೆಯನ್ನು ಇವರೇ ಮುನ್ನಡೆಸುತ್ತಿದ್ದಾರೆ.
ಮತ್ತೆ ಶುರುವಾಯ್ತಾ ಜನಾಂಗೀಯ ದ್ವೇಷ?: 2001ರ 9/11 ದಾಳಿಯ ಬಳಿಕ ಅಮೆರಿಕದಲ್ಲಿ ಪೇಟ ಹಾಗೂ ಗಡ್ಡ ಬಿಟ್ಟ ಸಿಖ್ಖರ ಮೇಲೆ ತಪ್ಪು ತಿಳಿವಳಿಕೆಯಿಂದ ದಾಳಿಗಳು ನಡೆದಿದ್ದವು. ಈಗ ಸರ್ಕಾರದ ಅಧಿಕೃತ ಇಲಾಖೆಯೇ ಇಂಥ ಜಾಹೀರಾತು ನೀಡಿರುವುದು ಜನರ ಸುರಕ್ಷತೆಗೆ ಆತಂಕ ತಂದಿಟ್ಟಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ