ಇಂಗ್ಲೆಂಡ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್, ಅವರ ಪತ್ನಿ ಕ್ಯಾರಿ ಜಾನ್ಸನ್ ಮತ್ತು ಹಣಕಾಸು ಇಲಾಖೆ ಸಚಿವ ರಿಶಿ ಸುನಕ್ ಅವರಿಗೆ ದಂಡ ವಿಧಿಸಲಾಗಿದೆ. ಇವರು ಕೊರೊನಾ ಲಾಕ್ಡೌನ್ ನಿಯಮಗಳನ್ನು ಮೀರಿರುವ ಹಿನ್ನೆಲೆಯಲ್ಲಿ ದಂಡಕ್ಕೆ ಗುರಿಯಾಗಿದ್ದಾರೆ ಎಂದು ಪ್ರಧಾನಿ ಕಚೇರಿಯೇ ತಿಳಿಸಿದೆ. ಹಾಗೇ, ತಾವು ಶೀಘ್ರದಲ್ಲೇ ನಿಮಗೆ ದಂಡದ ನೋಟಿಸ್ ನೀಡಲಿದ್ದೇವೆ ಎಂದು ಮೆಟ್ರೋಪಾಲಿಟಿನ್ ಪೊಲೀಸರು ನೊಟಿಫಿಕೇಶನ್ ಕೂಡ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಅಂದಹಾಗೇ, ಇದು ಪಾರ್ಟಿಗೇಟ್ ಹಗರಣಕ್ಕೆ ಸಂಬಂಧಪಟ್ಟ ಕೇಸ್. ಅಂದರೆ ಕೊವಿಡ್ 19 ನಿಬಂಧನೆಗಳನ್ನೆಲ್ಲ ಮೀರಿ ಡೌನಿಂಗ್ ಸ್ಟ್ರೀಟ್ ಮತ್ತು ಕ್ಯಾಬಿನೆಟ್ ಕಚೇರಿಯಲ್ಲಿ ಪಾರ್ಟಿ, ಕೂಟಗಳನ್ನು ನಡೆಸಿದ ಪ್ರಕರಣ. ಯುಕೆಯ ಡೌನಿಂಗ್ ಸ್ಟ್ರೀಟ್ ಎಂದರೆ ಸುಮಾರು 2 ಮೀಟರ್ ಉದ್ದದ ರಸ್ತೆ. ಅಲ್ಲಿಯೇ ಪ್ರಧಾನಮಂತ್ರಿ ನಿವಾಸ, ಕಚೇರಿಗಳು ಇವೆ. ವಿವಿಧ ಸರ್ಕಾರಿ ಸ್ಥಳಗಳೂ ಇವೆ. ಕೊವಿಡ್ 19 ನಿರ್ಬಂಧಗಳ ಪ್ರಕಾರ ಯುಕೆಯಲ್ಲಿ ಗುಂಪುಸೇರುವಂತಿಲ್ಲ, ಯಾವುದೇ ಪಾರ್ಟಿಯನ್ನೂ ಮಾಡುವಂತಿಲ್ಲ. ಆದರೆ ನಿಯಮಗಳೆನ್ನು ಮೀರಿ ಪ್ರಧಾನಿ ಕಾರ್ಯಾಲಯ, ಮತ್ತಿತರ ಸರ್ಕಾರಿ ಕೆಲಸಗಾರರು ಸುಮಾರು 12 ಕೂಟಗಳನ್ನು ನಡೆಸಿದ್ದಾರೆ. ಈ ವೇಳೆ ಮದ್ಯ ಸೇವನೆಯೂ ನಡೆದಿದೆ ಎಂಬ ಪ್ರಕರಣ ದಾಖಲಾಗಿದ್ದು, ಅದರ ತನಿಖೆಯನ್ನೂ ಪೊಲೀಸರು ನಡೆಸುತ್ತಿದ್ದಾರೆ. ಇಂತಹ ಸುಮಾರು 12 ಪಾರ್ಟಿಗಳಲ್ಲಿ ಕೆಲವರಲ್ಲಿ ಲಂಡನ್ ಪ್ರಧಾನಿ ಬೋರಿಸ್ ಜಾನ್ಸನ್, ಅವರ ಪತ್ನಿ ಮತ್ತು ಹಣಕಾಸು ಸಚಿವ ಪಾಲ್ಗೊಂಡಿದ್ದು ದೃಢಪಟ್ಟಿದ್ದರಿಂದ ಇದೀಗ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದಾರೆ. ಇನ್ನೂ ಕೆಲವು ಪ್ರಮುಖರು ಪಾಲ್ಗೊಂಡಿರುವ ಬಗ್ಗೆಯೂ ಮಾಹಿತಿ ಇದೆ ಎಂದೂ ಹೇಳಲಾಗಿದೆ.
ಹೀಗೆ ಪಾರ್ಟಿಯಲ್ಲಿ ಪಾಲ್ಗೊಂಡ ಸುಮಾರು 50 ಮಂದಿಗೆ ನಾವು ದಂಡ ವಿಧಿಸುತ್ತೇವೆ. ಈ ಬಗ್ಗೆ ಅವರಿಗೆ ಶೀಘ್ರವೇ ನೋಟಿಸ್ ಕೂಡ ನೀಡಲಿದ್ದೇವೆ ಎಂದು ಮೆಟ್ರೋಪಾಲಿಟಿನ್ ಪೊಲೀಸರು ಹೇಳಿಕೆ ನೀಡಿದ ಬೆನ್ನಲ್ಲೇ, ಸರ್ಕಾರದ ವಕ್ತಾರರೊಬ್ಬರು ಈ ಬಗ್ಗೆ ದೃಢಪಡಿಸಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್, ಅವರ ಪತ್ನಿ ಮತ್ತು ಹಣಕಾಸು ಇಲಾಖೆ ಸಚಿವರಿಗೆ ನೋಟಿಫಿಕೇಶನ್ ಬಂದಿದ್ದು ಹೌದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: LIC IPO: ಏಪ್ರಿಲ್ ಕೊನೆ ವಾರದಲ್ಲಿ ಎಲ್ಐಸಿ ಐಪಿಒ ಸಾಧ್ಯತೆ; ದಿನಾಂಕ, ಗಾತ್ರ, ಕೋಟಾ ಇತರ ವಿವರ ಇಲ್ಲಿದೆ