ಟೆಕ್ಕಿಗಳಿಗೆ ಟ್ರಂಪ್ ಶಾಕ್; ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಇನ್ಫೋಸಿಸ್, ವಿಪ್ರೋ ಸೇರಿ 8 ಐಟಿ ಕಂಪನಿಗಳನ್ನು ಕೈಬಿಟ್ಟ ಅಮೆರಿಕ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ದೇಶದ ವಲಸೆ ವ್ಯವಸ್ಥೆಯ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ. ಪ್ರಮುಖ ತಂತ್ರಜ್ಞಾನ ಮತ್ತು ಐಟಿ ಔಟ್‌ಸೋರ್ಸಿಂಗ್ ಕಂಪನಿಗಳನ್ನು ಪರ್ಮನೆಂಟ್ ಲೇಬರ್ ಸರ್ಟಿಫಿಕೇಷನ್ (ಪಿಇಆರ್​ಎಂ) ಕಾರ್ಯಕ್ರಮದಿಂದ ಅಮಾನತುಗೊಳಿಸಲಾಗಿದೆ. ಈ ಮೂಲಕ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಭಾರತದ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಶಾಕ್ ನೀಡಿದೆ. ಈ ಕಂಪನಿಗಳಲ್ಲಿ ಪ್ರತಿಷ್ಠಿತ ಐಟಿ ಕಂಪನಿಗಳಾದ ಇನ್​ಫೋಸಿಸ್, ವಿಪ್ರೋ, ಟಿಸಿಎಸ್​, ಮೈಕ್ರೋಸಾಫ್ಟ್​ ಕೂಡ ಸೇರಿವೆ. H-1B ವೀಸಾ ಸೇರಿದಂತೆ ವಿವಿಧ ವಲಸೆ ಕಾರ್ಯಕ್ರಮಗಳ ದುರುಪಯೋಗದ ಆರೋಪಗಳ ಕುರಿತು ಅಮೆರಿಕ ಸರ್ಕಾರ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕೆಲವು ಕಂಪನಿಗಳ ನೀತಿಗಳು ಅಮೆರಿಕದ ಉದ್ಯೋಗಿಗಳಿಗೆ ಹಾನಿ ಮಾಡಬಹುದು ಎಂದು ಅಧಿಕಾರಿಗಳು ವಾದಿಸಿದ್ದಾರೆ.

ಟೆಕ್ಕಿಗಳಿಗೆ ಟ್ರಂಪ್ ಶಾಕ್; ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಇನ್ಫೋಸಿಸ್, ವಿಪ್ರೋ ಸೇರಿ 8 ಐಟಿ ಕಂಪನಿಗಳನ್ನು ಕೈಬಿಟ್ಟ ಅಮೆರಿಕ
ಕಂಪನಿಗಳು
Image Credit source: X

Updated on: Oct 08, 2026 | 10:36 PM

ನವದೆಹಲಿ, ಅಕ್ಟೋಬರ್ 8: ಅಮೆರಿಕ ಸರ್ಕಾರವು ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸದ (ಗ್ರೀನ್ ಕಾರ್ಡ್) ಪ್ರಕ್ರಿಯೆಯಲ್ಲಿ ಪ್ರಮುಖವಾಗಿರುವ ಪಿಇಆರ್​ಎಂ (ಪರ್ಮನೆಂಟ್​ ಲೇಬರ್ ಸರ್ಟಿಫಿಕೇಷನ್) ಕಾರ್ಯಕ್ರಮದಿಂದ ಮೈಕ್ರೋಸಾಫ್ಟ್ ಸೇರಿದಂತೆ ಹಲವು ಪ್ರಮುಖ ಐಟಿ ಕಂಪನಿಗಳನ್ನು ಅಮಾನತುಗೊಳಿಸಿದೆ. ಈ ಪಟ್ಟಿಯಲ್ಲಿ Infosys, TCS, Wipro, HCL, Cognizant, Capgemini ಮತ್ತು Adobe ಸೇರಿದಂತೆ ಹಲವು ಸಂಸ್ಥೆಗಳಿವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ಉದ್ಯೋಗಿಗಳಿಗೆ, ಅದರಲ್ಲೂ H-1B ವೀಸಾದಡಿ ಕೆಲಸ ಮಾಡುತ್ತಿರುವವರಿಗೆ ಶಾಶ್ವತ ನಿವಾಸ (ಗ್ರೀನ್ ಕಾರ್ಡ್) ಪಡೆಯಲು ಉದ್ಯೋಗದಾತರು ಕೈಗೊಳ್ಳಬೇಕಾದ ಪ್ರಮುಖ ಹಂತಗಳಲ್ಲಿ PERM ಕೂಡ ಒಂದಾಗಿದೆ.

“ವಿಶ್ವದ 8 ದೊಡ್ಡ ಐಟಿ ಔಟ್‌ಸೋರ್ಸಿಂಗ್ ಕಂಪನಿಗಳಾದ Cognizant, Infosys, Tata, Wipro, HCL ಮತ್ತು Capgeminiಯನ್ನು ಪರ್ಮನೆಂಟ್​ ಸರ್ಟಿಫಿಕೇಷನ್ ಪ್ರೋಗ್ರಾಂನಿಂದ ಅಮಾನತುಗೊಳಿಸುತ್ತಿದ್ದೇನೆ” ಎಂದು ಸೌಂಡೆರ್ಲಿಂಗ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದರ ಜೊತೆಗೆ Microsoft ಮತ್ತು Adobe ಕಂಪನಿಗಳನ್ನೂ PERM ಕಾರ್ಯಕ್ರಮದಿಂದ ಅಮಾನತುಗೊಳಿಸಲಾಗಿದೆ.

ಈ ಕಂಪನಿಗಳಿಂದ ಸಲ್ಲಿಕೆಯಾಗುವ ಹೊಸ PERM ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಮತ್ತು ಈಗಾಗಲೇ ಸಲ್ಲಿಕೆಯಾಗಿರುವ ಕೆಲವು ಬಾಕಿ ಅರ್ಜಿಗಳ ಪ್ರಕ್ರಿಯೆಯನ್ನೂ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಕಾರ್ಮಿಕ ಇಲಾಖೆ ತಿಳಿಸಿದೆ.


ಈ ಕ್ರಮಕ್ಕೆ ಒಳಪಟ್ಟಿರುವ ಕಂಪನಿಗಳು ಹಲವು ವರ್ಷಗಳಿಂದ ವಿದೇಶಿ ಉದ್ಯೋಗಿಗಳ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಬಳಸಿಕೊಂಡಿವೆ ಎಂದು ಅಮೆರಿಕ ಆರೋಪಿಸಿದೆ. “2009ರಿಂದ ಈ ಕಂಪನಿಗಳು ಸುಮಾರು 30 ಲಕ್ಷ ವಿದೇಶಿ ಉದ್ಯೋಗಿಗಳಿಗಾಗಿ ಮನವಿಗಳನ್ನು ಸಲ್ಲಿಸಿವೆ. ಅವುಗಳಿಗೆ 2.30 ಲಕ್ಷಕ್ಕೂ ಹೆಚ್ಚು H-1B ವೀಸಾ ಅನುಮೋದನೆಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಪರ್ಮನೆಂಟ್ ಲೇಬರ್ ಸರ್ಟಿಫಿಕೇಷನ್ ದೊರೆತಿವೆ. ಇದು ಅಮೆರಿಕದ ಉದ್ಯೋಗಿಗಳಿಂದ ನೂರಾರು ಸಾವಿರ ಉದ್ಯೋಗಗಳನ್ನು ಕಸಿದುಕೊಂಡಿದೆ” ಎಂದು ಯುಎಸ್​ ಹೇಳಿದೆ.

ಇದನ್ನೂ ಓದಿ: ಟ್ರಂಪ್ ಆಡಳಿತದ ಕಠಿಣ ವಲಸೆ ನೀತಿ, ಪ್ರತಿ ಹೊಸ H-1B ವೀಸಾಗೆ 95 ಲಕ್ಷ ರೂ. ಶುಲ್ಕ ವಿಧಿಸಲು ಸಿದ್ಧತೆ, 60 ದಿನಗಳ ಗ್ರೇಸ್ ಅವಧಿಗೂ ಕತ್ತರಿ

ವಿದೇಶಿ ಉದ್ಯೋಗಿಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವ ಉದ್ಯೋಗದಾತರ ಮೇಲಿನ ಪರಿಶೀಲನೆಯನ್ನು ಹೆಚ್ಚಿಸುವುದು ಅಮೆರಿಕ ಸರ್ಕಾರದ ವ್ಯಾಪಕ ಕ್ರಮದ ಭಾಗವಾಗಿದೆ. ವೈಟ್ ಹೌಸ್ ಪ್ರಕಾರ, ಕೆಲವು ಉದ್ಯೋಗದಾತರು ಮತ್ತು ಔಟ್‌ಸೋರ್ಸಿಂಗ್ ಕಂಪನಿಗಳು H-1B ವ್ಯವಸ್ಥೆಯನ್ನು ಬಳಸಿಕೊಂಡು ಅಮೆರಿಕದ ಉದ್ಯೋಗಿಗಳನ್ನು ಬದಲಿಸುವ ಅಥವಾ ಅವರ ವೇತನ ಮತ್ತು ಉದ್ಯೋಗಾವಕಾಶಗಳ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ.

ಮೈಕ್ರೋಸಾಫ್ಟ್​ ವಿರುದ್ಧ ಜೆಡಿ ವ್ಯಾನ್ಸ್ ಆರೋಪ:

ಮೈಕ್ರೋಸಾಫ್ಟ್​ ಕಂಪನಿಯನ್ನು PERM ಕಾರ್ಯಕ್ರಮದಿಂದ ಅಮಾನತುಗೊಳಿಸುವ ಸಂದರ್ಭದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಆ ಕಂಪನಿಯ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ. ಮೈಕ್ರೋಸಾಫ್ಟ್​ ಸಾವಿರಾರು ಅಮೆರಿಕನ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದರೂ, H-1B ವೀಸಾ ಮತ್ತು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ವ್ಯವಸ್ಥೆಯಿಂದ ಕಂಪನಿ ಪ್ರಯೋಜನ ಪಡೆಯುತ್ತಿದೆ ಎಂದು ಜೆಡಿ ವ್ಯಾನ್ಸ್ ಆರೋಪಿಸಿದ್ದಾರೆ.


ಜೆಡಿ ವ್ಯಾನ್ಸ್ ಅವರ ಪ್ರಕಾರ, ಮೈಕ್ರೋಸಾಫ್ಟ್ ಸುಮಾರು 6,000 ಅಮೆರಿಕನ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದು, ಇದೇ ವೇಳೆ ಕಂಪನಿಗೆ ಸುಮಾರು 6,300 H-1B ವೀಸಾಗಳು ಮತ್ತು ಸುಮಾರು 3,000 ಗ್ರೀನ್ ಕಾರ್ಡ್‌ಗಳು ದೊರೆತಿವೆ.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಪ್ರಧಾನಿ ಮೋದಿ ಫೋನ್ ಸಂಭಾಷಣೆ; ವ್ಯಾಪಾರ, ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಚರ್ಚೆ

ಭಾರತೀಯ ಐಟಿ ಉದ್ಯೋಗಿಗಳ ಮೇಲಾಗುವ ಪರಿಣಾಮವೇನು?:

ಈ ನಿರ್ಧಾರವು ಭಾರತೀಯ ಐಟಿ ಉದ್ಯೋಗಿಗಳಿಗೆ ವಿಶೇಷವಾಗಿ ಮಹತ್ವದ್ದಾಗಿದೆ. ಪ್ರಮುಖ ಭಾರತೀಯ ಐಟಿ ಕಂಪನಿಗಳು ಹಲವು ವರ್ಷಗಳಿಂದ ಅಮೆರಿಕದ ವಲಸೆ ಕಾರ್ಯಕ್ರಮಗಳನ್ನು ಬಳಸಿಕೊಂಡು ನುರಿತ ಉದ್ಯೋಗಿಗಳನ್ನು ಅಮೆರಿಕದ ಮಾರುಕಟ್ಟೆಯಲ್ಲಿ ನಿಯೋಜಿಸುತ್ತಿವೆ. ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ Cognizantನ PERM ಅರ್ಜಿಗಳ ವಿರುದ್ಧ ಅಮೆರಿಕ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಉದ್ಯೋಗ ಆಧಾರಿತ ವಲಸೆ ಕಾರ್ಯಕ್ರಮಗಳಲ್ಲಿ ವಂಚನೆ ಮತ್ತು ಅಮೆರಿಕನ್ ಉದ್ಯೋಗಿಗಳಿಗೆ ಸಂಭವಿಸಬಹುದಾದ ಹಾನಿಯ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಈಗ ಇತರ ಪ್ರಮುಖ IT ಕಂಪನಿಗಳಿಗೂ ಕ್ರಮ ವಿಸ್ತರಿಸಿರುವುದು, ವಿದೇಶಿ ಉದ್ಯೋಗಿಗಳ ನೇಮಕಾತಿಯ ಮೇಲಿನ ಅಮೆರಿಕದ ಪರಿಶೀಲನೆ ಮತ್ತಷ್ಟು ವಿಸ್ತರಿಸುತ್ತಿರುವುದನ್ನು ಸೂಚಿಸುತ್ತದೆ. ಟ್ರಂಪ್ ಸರ್ಕಾರ H-1B ವ್ಯವಸ್ಥೆಯ ಮೇಲಿನ ನಿಯಂತ್ರಣವನ್ನೂ ಈಗಾಗಲೇ ಬಿಗಿಗೊಳಿಸಿದೆ. ಸೆಪ್ಟೆಂಬರ್‌ನಲ್ಲಿ ಅಮೆರಿಕದ ವೈಟ್ ಹೌಸ್, ಅಮೆರಿಕನ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಹೆಚ್ಚಿರುವ ಸಂದರ್ಭಗಳಲ್ಲಿ H-1B ಅರ್ಜಿಗಳ ಮೇಲೆ ಹೆಚ್ಚಿನ ಪರಿಶೀಲನೆ ನಡೆಸುವುದಾಗಿ ತಿಳಿಸಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us