ಭಾರತದ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿರುವ ಎಥರ್ ಎನರ್ಜಿ ತನ್ನ 450ಎಕ್ಸ್ ಮತ್ತು 450 ಅಪೆಕ್ಸ್ ಸ್ಕೂಟರ್‌ಗಳಿಗೆ ವಿಶೇಷ ಹಬ್ಬದ ಕೊಡುಗೆಗಳನ್ನು ಘೋಷಿಸಿದೆ. ಹೊಸ ಆಫರ್ ಗಳಲ್ಲಿ ವಿಸ್ತೃತ ಬ್ಯಾಟರಿ ವಾರಂಟಿ, ಉಚಿತ ಎಥರ್ ಗ್ರಿಡ್ ಚಾರ್ಜಿಂಗ್, ನಗದು ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.
450ಎಕ್ಸ್ ಮತ್ತು 450 ಅಪೆಕ್ಸ್ ಇವಿ ಸ್ಕೂಟರ್‌ಗಳ ಖರೀದಿ ಮೇಲೆ ಗ್ರಾಹಕರು ರೂ. 25 ಸಾವಿರದಷ್ಟು ವಿವಿಧ ಆಫರ್ ಗಳನ್ನು ಪಡೆಯಬಹುದಾಗಿದ್ದು, ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ. 450ಎಕ್ಸ್ ಆವೃತ್ತಿಯನ್ನು ಖರೀದಿಸುವ ಗ್ರಾಹಕರಿಗೆ ಪ್ರೊ ಪ್ಯಾಕ್ ಆಕ್ಸೆಸರಿಸ್ ಜೊತೆಗೆ ರೂ. 15 ಸಾವಿರ ಮೌಲ್ಯದ ಉಚಿತ ಉಡುಗೊರೆಗಳು ಸಿಗಲಿವೆ.
ಹೊಸ ಆಫರ್ ಗಳಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 8 ವರ್ಷದ ವಿಸ್ತೃತ ಬ್ಯಾಟರಿ ಖಾತರಿ ಸಿಗಲಿದ್ದು, ಇದರೊಂದಿಗೆ ರೂ. 5 ಸಾವಿರ ಮೌಲ್ಯವನ್ನು ಒಳಗೊಂಡ 1 ವರ್ಷದ ಉಚಿತ ಎಥರ್ ಗ್ರಿಡ್ ಸೇವೆ ಸಿಗಲಿದೆ. ಹಾಗೆಯೇ ರೂ. 5 ಸಾವಿರದಷ್ಟು ಕ್ಯಾಶ್ ಬ್ಯಾಕ್ ಮತ್ತು ಆಯ್ದ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳಿಂದ ರೂ. 10 ಸಾವಿರ ತನಕ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.
ಪ್ರತಿಸ್ಪರ್ಧಿ ಕಂಪನಿಯಾಗಿರುವ ಓಲಾ ಎಲೆಕ್ಟ್ರಿಕ್ ಹೆಚ್ಚಿನ ಆಫರ್ ಗಳ ಪರಿಣಾಮ ಎಥರ್ ಕೂಡಾ ಇದೀಗ ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸೆಳೆಯಲು ವಿವಿಧ ಆಫರ್ ನೀಡುತ್ತಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಲಿದೆ ಎನ್ನುಬಹುದು. ಇನ್ನು ಎಥರ್ ಕಂಪನಿಯು ತನ್ನ ಇವಿ ಸ್ಕೂಟರ್ ಉತ್ಪನ್ನಗಳನ್ನು ಗುಣಮಟ್ಟ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಪ್ರೀಮಿಯಂ ಇವಿ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿದ್ದು, ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.
ಎಥರ್ ನ 450 ಸರಣಿಯ ಸ್ಕೂಟರ್‌ಗಳಲ್ಲಿ 2.9 kWh ಬ್ಯಾಟರಿಯೊಂದಿಗೆ 450ಎಕ್ಸ್ ಮತ್ತು 3.7 kWh ಬ್ಯಾಟರಿಯೊಂದಿಗೆ 450ಎಕ್ಸ್ ಕ್ರಮವಾಗಿ ಪ್ರತಿ ಚಾರ್ಜ್ ಗೆ 111ಕಿ.ಮೀ ಮತ್ತು 150 ಕಿ.ಮೀ ಐಡಿಸಿ ಶ್ರೇಣಿಯನ್ನು ಹೊಂದಿದ್ದು, ಇವು ಪ್ರತಿ ಗಂಟೆ 90 ಕಿ.ಮೀ ಗರಿಷ್ಠ ವೇಗವನ್ನು ನೀಡುತ್ತದೆ. ಇದರೊಂದಿಗೆ 450 ಅಪೆಕ್ಸ್ ಸ್ಕೂಟರ್ ಪ್ರತಿ ಚಾರ್ಜ್ ಗೆ 157 ಕಿ.ಮೀ ಗಳ ಐಡಿಸಿ ಶ್ರೇಣಿಯೊಂದಿಗೆ ಪ್ರತಿ ಗಂಟೆಗೆ 100 ಕಿ.ಮೀ ಗರಿಷ್ಠ ವೇಗವನ್ನು ನೀಡುತ್ತದೆ.
ಇವಿ ಸ್ಕೂಟರ್ ಗಳಲ್ಲಿ ಎಥರ್ ಕಂಪನಿಯು ಅಟೋ ಹೋಲ್ಡ್, ಫಾಲ್ ಸೇಫ್ ಮತ್ತು ಗೂಗಲ್ ಮ್ಯಾಪ್ಸ್ ಪ್ಲಾಟ್‌ಫಾರ್ಮ್ ಏಕೀಕರಣದೊಂದಿಗೆ 17.7 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್‌ನಂತಹ ವೈಶಿಷ್ಟ್ಯಗಳನ್ನು ನೀಡಿದ್ದು, ಇದರ ಜೊತೆಗೆ ಡ್ಯಾಶ್‌ಬೋರ್ಡ್‌ನಲ್ಲಿ ವಾಟ್ಸ್ ಅಪ್ ಅಧಿಸೂಚನೆಗಳಂತಹ ವೈಶಿಷ್ಟ್ಯಗಳೊಂದಿಗೆ ರೈಡರ್ ಸಂಪರ್ಕವನ್ನು ಹೆಚ್ಚಿಸುತ್ತವೆ. ಇದಲ್ಲದೆ ಟೋ ಮತ್ತು ಥೆಫ್ಟ್ ಅಧಿಸೂಚನೆಗಳು ಮತ್ತು ಫೈಂಡ್ ಮೈ ಸ್ಕೂಟರ್ ಸೌಲಭ್ಯಗಳು ಗ್ರಾಹರಕರ ಪ್ರಮುಖ ಆಕರ್ಷಣೆಯಾಗಿವೆ.