ಹೆಚ್ಚುತ್ತಿರುವ ಮಾಲಿನ್ಯ ಮತ್ತು ದುಬಾರಿ ನಿರ್ವಹಣಾ ವೆಚ್ಚದಿಂದಾಗಿ ಹೊಸ ವಾಹನ(New Vehicles) ಖರೀದಿದಾರರು ಸಾಂಪ್ರದಾಯಿಕ ವಾಹನಗಳ ಬದಲಾಗಿ ಪರ್ಯಾಯ ಇಂಧನ ಪ್ರೇರಿತ ವಾಹನಗಳ ಖರೀದಿಗೆ ಆದ್ಯತೆ ನೀಡುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ(Electric Vehicles) ಜೊತೆಗೆ ಹೈಬ್ರಿಡ್(Hybrid) ಮತ್ತು ಸಿಎನ್ ಜಿ(CNG) ವಾಹನಗಳು ಇದೀಗ ಗಮನಸೆಳೆಯುತ್ತಿವೆ. ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳು ಸದ್ಯಕ್ಕೆ ತುಸು ದುಬಾರಿ ಎನ್ನಿಸಿದರೂ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿವೆ. ಆದರೆ ಸಿಎನ್‌ಜಿ ವಾಹನಗಳು ಸದ್ಯ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂತಲೂ ಉತ್ತಮ ಇಂಧನ ದಕ್ಷತೆಯೊಂದಿಗೆ ಪರಿಸರ ಸ್ನೇಹಿ ವಾಹನಗಳಾಗಿ ಗುರುತಿಸಿಕೊಂಡಿದ್ದು, ನಿರ್ವಹಣಾ ವಿಚಾರದಲ್ಲೂ ಗ್ರಾಹಕ ಸ್ನೇಹಿಯಾಗಿವೆ.
ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಪ್ರಯಾಣಿಕ ಕಾರುಗಳಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಮತ್ತು ಎಥೆನಾಲ್ ಇಂಧನ ಚಾಲಿತ ಮಾದರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದೀಗ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಆಟೋ ಕಂಪನಿ ಸಹ ಇದೀಗ ದ್ವಿಚಕ್ರ ವಾಹನಗಳನ್ನು ಸಿಎನ್‌ಜಿ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಇದನ್ನೂ ಓದಿ: ಮರುಬಿಡುಗಡೆಗೆ ಸಿದ್ದವಾಗಿರುವ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಸದ್ಯ ಉತ್ತಮ ಬೇಡಿಕೆ ದಾಖಲಿಸುತ್ತಿರುವ ಬಜಾಜ್ ಕಂಪನಿ ಪ್ಲಾಟಿನಾ ಮಾದರಿಯನ್ನು ಆಧರಿಸಿ ಹೊಸ ಸಿಎನ್ ಜಿ ಬೈಕ್ ಸಿದ್ದಪಡಿಸಿದೆ. ಹೊಸ ಸಿಎನ್ ಜಿ ಬೈಕ್ ಅಭಿವೃದ್ದಿ ಮತ್ತು ಬಿಡುಗಡೆಯ ಕುರಿತಂತೆ ಆಟೋ ಕಾರ್ ಪ್ರೊಫೆಷನಲ್ ಸುದ್ದಿಸಂಸ್ಥೆಯೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದ್ದು, ಹೊಸ ಸಿಎನ್ ಜಿ ಬೈಕ್ ಮುಂದಿನ ಒಂದು ವರ್ಷದೊಳಗಾಗಿ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸುವ ಭರವಸೆ ನೀಡಿದೆ.
ಸಿಎನ್‌ಜಿ ಜೊತೆ ಪೆಟ್ರೋಲ್ ಬಳಕೆ ಹೊಂದಿರುವ ಹೊಸ ಬೈಕ್ ಮಾದರಿಯನ್ನು ಸದ್ಯಕ್ಕೆ ಬ್ರುಜರ್ ಇ101 (Bruzer E101) ಕೋಡ್ ನೇಮ್ ನೊಂದಿಗೆ ಅಭಿವೃದ್ದಿಪಡಿಸಲಾಗುತ್ತಿದ್ದು, ಇದರಲ್ಲಿ ಲಭ್ಯತೆಗೆ ಅನುಗುಣವಾಗಿ ಸಿಎನ್‌ಜಿ ಜೊತೆ ಪೆಟ್ರೋಲ್ ಬಳಕೆ ಮಾಡಬಹುದಾಗಿದೆ. ಹೊಸ ಬೈಕ್ ಮಾದರಿಯನ್ನು ಬಜಾಜ್ ಕಂಪನಿಯು ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಉತ್ತರಾಖಂಡದ ಪಂತ್ ನಗರದಲ್ಲಿರುವ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆ ಮಾಡಲು ನಿರ್ಧರಿಸಿದ್ದು, ಇದು ಪೆಟ್ರೋಲ್ ಮಾದರಿಗಿಂತಲೂ ಭರ್ಜರಿ ಮೈಲೇಜ್ ನೀಡುವ ಸುಳಿವು ನೀಡಿದೆ.
ಇದನ್ನೂ ಓದಿ: ಭರ್ಜರಿ ಫೀಚರ್ಸ್ ಹೊಂದಿರುವ ಹೋಂಡಾ ಎಸ್‌ಪಿ125 ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ
ಅದಾಗ್ಯೂ ಹೊಸ ಸಿಎನ್ ಜಿ ಬೈಕ್ ಕುರಿತಾದ ಕೆಲವು ಪ್ರಮುಖ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಳ್ಳಲು ಬಜಾಜ್ ಮುಖ್ಯಸ್ಥರು ನಿರಾಕರಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಹೊಂದಿರುವ ಭರವಸೆ ನೀಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿರುವ 102 ಸಿಸಿ ಎಂಜಿನ್ ಹೊಂದಿರುವ ಪ್ಲಾಟಿನಾ ಆವೃತ್ತಿಯು 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಲೀಟರ್ ಗೆ 70ರಿಂದ 75 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ. ಆದರೆ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಇಂಧನ ದಕ್ಷತೆ ಹೊಂದಿರುವ ಸಿಎನ್ ಜಿ ಮಾದರಿಯು ದಾಖಲೆ ಪ್ರಮಾಣದ ಮೈಲೇಜ್ ನೀಡಲಿದ್ದು, ಇದು ಬೆಲೆ ವಿಚಾರದಲ್ಲೂ ಗಮನಸೆಳೆಯಲಿದೆ.