ವಿಶ್ವದ ಮೊದಲ ಸಿಎನ್‌ಜಿ ಬೈಕ್ (CNG Bike) ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬಜಾಜ್ ಫ್ರೀಡಂ 125 (Bajaj Freedom 125) ಬೈಕ್ ವಿತರಣೆಗೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹಂತ-ಹಂತವಾಗಿ ಚಾಲನೆ ನೀಡಲಾಗುತ್ತಿದ್ದು, ಇದೀಗ ಹೊಸ ಬೈಕ್ ಮಾದರಿ ನಮ್ಮ ಬೆಂಗಳೂರಿಗೂ ಲಗ್ಗೆಯಿಟ್ಟಿದೆ. ವಿನೂತನ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಹೊಸ ಸಿಎನ್‌ಜಿ ಬೈಕ್ ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದು, ಇದು ಆಕರ್ಷಕ ಬೆಲೆಯೊಂದಿಗೆ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ.
ಫ್ರೀಡಂ 125 ಸಿಎನ್‌ಜಿ ಬೈಕ್ ಮಾದರಿಯು ಡಿಸ್ಕ್ ಎಲ್ಇಡಿ, ಡ್ರಮ್ ಎಲ್ಇಡಿ ಮತ್ತು ಡ್ರಮ್ ಎನ್ನುವ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ನಮ್ಮ ಬೆಂಗಳೂರಿಲ್ಲಿ ಆನ್ ರೋಡ್ ಪ್ರಕಾರ ಆರಂಭಿಕವಾಗಿ ರೂ. 1.18 ಲಕ್ಷದಿಂದ ಟಾಪ್ ಎಂಡ್ ವೆರಿಯೆಂಟ್ ಗೆ ರೂ. 1.43 ಲಕ್ಷ ಬೆಲೆ ಹೊಂದಿದೆ.
ಪೆಟ್ರೋಲ್ ಮತ್ತು ಸಿಎನ್‌ಜಿ ಎರಡೂ ಮಾದರಿಯಲ್ಲೂ ಚಾಲನೆಗೊಳ್ಳುವ ಹೊಸ ಬೈಕ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಇದರಲ್ಲಿ 125ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ. ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 9.5 ಹಾರ್ಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಈ ಮೂಲಕ ಇದು ಪ್ರತಿ ಕೆಜಿ ಸಿಎನ್ಜಿಗೆ ಬರೋಬ್ಬರಿ 100 ಕಿ.ಮೀ ಮೈಲೇಜ್ ನೀಡುತ್ತೆ. ಹೊಸ ಬೈಕಿನಲ್ಲಿ ಒಟ್ಟು 2 ಕೆಜಿ ಸಾಮರ್ಥ್ಯದ ಸಿಎನ್ ಜಿ ಟ್ಯಾಂಕ್ ನೀಡಲಾಗಿದ್ದು, ಒಂದು ಬಾರಿ ಟ್ಯಾಂಕ್ ಭರ್ತಿಯಾದರೆ 200 ಕಿ.ಮೀ ಕ್ರಮಿಸಬಹುದಾಗಿದೆ.
ಸಿಎನ್ ಜಿ ಟ್ಯಾಂಕ್ ಜೊತೆಗೆ ಹೊಸ ಬೈಕಿನಲ್ಲಿ 2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಸಹ ಜೋಡಣೆ ಮಾಡಲಾಗಿದ್ದು, ಕೇವಲ ಪೆಟ್ರೋಲ್ ಬಳಕೆಯ ಮೇಲೆಯೇ ಸುಮಾರು 130 ಕಿ.ಮೀ ಕ್ರಮಿಸಬಹುದಾಗಿದೆ. ಈ ಮೂಲಕ ಫ್ರೀಡಂ ಬೈಕ್ ಸವಾರು ಸಿಎನ್ ಜಿ ಮತ್ತು ಪೆಟ್ರೋಲ್ ಟ್ಯಾಂಕ್ ಅನ್ನು ಪೂರ್ತಿಯಾಗಿ ಭರ್ತಿ ಮಾಡಿದರೆ ಒಟ್ಟಾರೆಯಾಗಿ 330 ಕಿ.ಮೀ ದೂರವನ್ನು ಕ್ರಮಿಸಬಹುದಾಗಿದೆ.
ಇದನ್ನೂ ಓದಿ: ಕೇವಲ ರೂ. 15 ಸಾವಿರಕ್ಕೆ ಸಿಎನ್‌ಜಿ ಆವೃತ್ತಿಯಾಗಲಿವೆ ನಿಮ್ಮ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳು..
ಬಜಾಜ್ ಕಂಪನಿಯ ಅಧಿಕಾರಿಗಳು ಹಂಚಿಕೊಂಡ ಮಾಹಿತಿಗಳ ಪ್ರಕಾರ ಹೊಸ ಬೈಕ್ ಅನ್ನು ಸಿಎನ್ ಜಿ ಸಹಾಯದೊಂದಿಗೆ 1 ಕಿಮೀ ದೂರವನ್ನು ರೂ. 1 ಗಿಂತಲೂ ಕಡಿಮೆ ವೆಚ್ಚದಲ್ಲಿ ಚಲಿಸಬಹುದಾಗಿದ್ದರೆ ಸಂಪೂರ್ಣವಾಗಿ ಪೆಟ್ರೋಲ್ ಮೂಲಕ 1 ಕಿ.ಮೀ ಕ್ರಮಿಸಲು ರೂ. 2.25 ವೆಚ್ಚವಾಗಲಿದೆ ಎನ್ನುತ್ತಾರೆ. ಹೀಗಾಗಿ ಸಿಎನ್ ಜಿ ಆಯ್ಕೆಯು ಗ್ರಾಹಕರಿಗೆ ಹೆಚ್ಚಿನ ಮಟ್ಟದ ಉಳಿತಾಯಕ್ಕೆ ಸಹಕಾರಿಯಾಗಲಿದ್ದು, ಪರಿಸರಕ್ಕಾಗುವ ಹಾನಿ ಪ್ರಮಾಣವನ್ನು ಕೂಡಾ ಗಣನೀಯ ಪ್ರಮಾಣದಲ್ಲಿ ತಗ್ಗಿಸಲಿದೆ.
ಬಜಾಜ್ ಕಂಪನಿಯು ಹೊಸ ಬೈಕಿನ ಆಸನದ ಕೆಳಭಾಗದಲ್ಲಿ ಸಿಎನ್ ಜಿ ಟ್ಯಾಂಕ್ ಅನ್ನು ಟೆಲ್ಲಿಸ್ ಫ್ರೇಮ್ ಚಾರ್ಸಿ ಮಧ್ಯದಲ್ಲಿ ಸುರಕ್ಷಿತವಾಗಿ ಜೋಡಣೆ ಮಾಡಿದ್ದು, ಸಿಎನ್ ಜಿ ಟ್ಯಾಂಕ್ ಆಸನ ಕೆಳಭಾಗದಲ್ಲಿರುವುದರಿಂದ ಬೈಕಿನ ಆಸನದ ಉದ್ದಳತೆಯು ಸಾಮಾನ್ಯ ಬೈಕ್ ಮಾದರಿಗಿಂತಲೂ ಶೇ.20 ರಷ್ಟು ಹೆಚ್ಚಳವಾಗಿದೆ. ಇದು ದೂರದ ಪ್ರಯಾಣಕ್ಕೂ ಸಾಕಷ್ಟು ಅನುಕೂಲಕರವಾಗಲಿದ್ದು, ಗ್ರಾಮೀಣ ಭಾಗದ ಗ್ರಾಹಕರಿಗೆ ಹೆಚ್ಚು ಸಹಕಾರಿಯಾಗಿರಲಿದೆ ಎನ್ನಬಹುದು. ಹಾಗೆಯೇ ಸಿಎನ್ ಜಿ ಟ್ಯಾಂಕ್ ಸುರಕ್ಷತೆ ಖಾತ್ರಿಪಡಿಸಲು ಬರೋಬ್ಬರಿ 11 ರೀತಿಯ ಅಪಘಾತ ಮಾದರಿ ಪರೀಕ್ಷೆಗಳನ್ನು ಮಾಡಲಾಗಿದ್ದು, ಎಲ್ಲಾ ಪರೀಕ್ಷೆಗಳಲ್ಲೂ ಸಿಎನ್ ಜಿ ಟ್ಯಾಂಕ್ ಗೆ ಯಾವುದೇ ರೀತಿಯ ಹಾನಿಯಾಗದೆ ಬಾಡಿ ಫ್ರೇಮ್ ನಿರ್ಮಿಸಲಾಗಿದೆ.
ಇದನ್ನೂ ಓದಿ: ಓಲಾ ರೋಡ್‌ಸ್ಟರ್ ಎಕ್ಸ್, ರೋಡ್‌ಸ್ಟರ್, ರೋಡ್‌ಸ್ಟರ್ ಪ್ರೋ ಇವಿ ಬೈಕ್ ಬಿಡುಗಡೆ
ಇನ್ನು ಹೊಸ ಬೈಕಿನಲ್ಲಿ ಭರ್ಜರಿ ಮೈಲೇಜ್ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಸಹ ನೀಡಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಲೈಟಿಂಗ್ಸ್, ಎಲ್ ಸಿಡಿ ಸ್ಕ್ರೀನ್ ನೊಂದಿಗೆ ಬ್ಲೂಟೂಥ್ ಕನೆಕ್ಟಿವಿಟಿ, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಸೌಲಭ್ಯಗಳನ್ನು ನೀಡಲಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ ಒಟ್ಟು 7 ವಿವಿಧ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಇದುವರೆಗೆ ಸುಮಾರು 60 ಸಾವಿರಕ್ಕೂ ಹೆಚ್ಚು ಗ್ರಾಹಕರು ಹೊಸ ಬೈಕ್ ಖರೀದಿಗಾಗಿ ಬುಕಿಂಗ್ ದಾಖಲಿಸಿದ್ದಾರೆ ಎಂದು ಕಂಪನಿ ಮಾಹಿತಿ ಹಂಚಿಕೊಂಡಿದೆ. ನಮ್ಮ ಬೆಂಗಳೂರು ನಂತರ ಕಂಪನಿಯು ಸಿಎನ್ ಜಿ ನಿಲ್ದಾಣಗಳ ಲಭ್ಯತೆ ಆಧರಿಸಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲೂ ಹೊಸ ಬೈಕ್ ವಿತರಣೆ ಮಾಡಲು ನಿರ್ಧರಿಸಿದ್ದು, ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.