ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯಾಗಿರುವ ಬಿಗಾಸ್ (BGauss) ತನ್ನ ಹೊಸ ಆರ್‌ಯುವಿ350 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಆರ್‌ಯುವಿ350ಐ ಇಎಕ್ಸ್ , ಆರ್‌ಯುವಿ350 ಇಎಕ್ಸ್ ಮತ್ತು ಆರ್‌ಯುವಿ350 ಮ್ಯಾಕ್ಸ್ ಎನ್ನುವ ಮೂರು ವೆರಿಯೆಂಟ್ ಗಳೊಂದಿಗೆ ಖರೀದಿಗೆ ಲಭ್ಯವಿದೆ. ಇದರಲ್ಲಿ ಆರಂಭಿಕ ಮಾದರಿಯು ರೂ.1,09,999 ಬೆಲೆ ಹೊಂದಿದ್ದರೆ ಮಧ್ಯಮ ಕ್ರಮಾಂಕದ ಮಾದರಿಯು ರೂ.1,24,999 ಮತ್ತು ಟಾಪ್ ಎಂಡ್ ಮಾದರಿಯು ರೂ.1,34,999 ಬೆಲೆ ಹೊಂದಿದೆ.
ಸದ್ಯ ಮಾರುಕಟ್ಟೆಯಲ್ಲಿ ಡಿ15 ಹಾಗೂ ಸಿ12ಐ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿರುವ ಬಿಗಾಸ್ ಕಂಪನಿಯು ಇದೀಗ ಹೊಸ ಫೀಚರ್ಸ್ ಹೊಂದಿರುವ ಆರ್‌ಯುವಿ350 ಇವಿ ಸ್ಕೂಟರ್ ಪರಿಚಯಿಸಿದ್ದು, ಇದು ಪ್ರಮುಖ 5 ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ಹೊಸ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.10,000 ದಿಂದ ರೂ.20,000 ಮೌಲ್ಯದ ಉಚಿತ ವಿಮೆ ಮತ್ತು ಬ್ಯಾಟರಿ ವಾರಂಟಿ ಸೌಲಭ್ಯಗಳನ್ನು ನೀಡುತ್ತಿದ್ದು, ಇವಿ ಸ್ಕೂಟರ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸುವರ್ಣಾವಕಾಶ ಎನ್ನಬಹುದು.
ಹೊಸ ಆರ್‌ಯುವಿ350 ಇವಿ ಸ್ಕೂಟರ್ ನಲ್ಲಿ ಬಿಗಾಸ್ ಕಂಪನಿಯು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ 2.3 ಕೆವಿಹೆಚ್ ಮತ್ತು 3 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇವು ಪ್ರತಿ ಚಾರ್ಜ್ ಗೆ 90 ರಿಂದ 120 ಕಿ.ಮೀ ಮೈಲೇಜ್ ನೀಡುತ್ತವೆ. ಆರ್‌ಯುವಿ350 ಮ್ಯಾಕ್ಸ್ ಮಾದರಿಯು ದುಬಾರಿ ಬೆಲೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಇದು ಮೈಲೇಜ್ ನಲ್ಲೂ ಗಮನಸೆಳೆಯುತ್ತದೆ.
ಇದನ್ನೂ ಓದಿ: ಕೇವಲ ರೂ. 15 ಸಾವಿರಕ್ಕೆ ಸಿಎನ್‌ಜಿ ಆವೃತ್ತಿಯಾಗಲಿವೆ ನಿಮ್ಮ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳು..
ಹಾಗೆಯೇ ಹೊಸ ಇವಿ ಸ್ಕೂಟರ್ ನಲ್ಲಿ ಅತ್ಯಾಧುನಿಕ ವಿನ್ಯಾಸದೊಂದಿಗೆ ಸಖತ್ ಫೀಚರ್ಸ್ ಜೋಡಣೆ ಮಾಡಲಾಗಿದ್ದು, ಅರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗುವ ಬ್ಲೂಟೂಥ್, ಕ್ರೂಸ್ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಫೀಚರ್ಸ್ ನೀಡಲಾಗಿದೆ. ಜೊತೆಗೆ 16 ಇಂಚಿನ ವೀಲ್ಹ್ ಜೊತೆಗೆ 130 ಎಂಎಂ ಡ್ರಮ್ ಬ್ರೇಕ್ಸ್ ಜೋಡಣೆ ಮಾಡಲಾಗಿದ್ದು, ಬೆಲೆ ವಿಚಾರದಲ್ಲಿ ಇದು ಟಿವಿಎಸ್ ಐಕ್ಯೂಬ್, ಎಥರ್ ರಿಜ್ಟಾಗೆ ಇವಿ ಸ್ಕೂಟರ್ ಗಳಿಗೆ ಉತ್ತಮ ಪೈಪೋಟಿ ನೀರಿಕ್ಷೆಯಿದೆ.