ಭಾರತದಲ್ಲಿ ಹೊಸ ಕಾರುಗಳ ಖರೀದಿ ಟ್ರೆಂಡ್ ಜೋರಾಗಿದ್ದು, ಹೊಸ ಕಾರುಗಳ ಜೊತೆಗೆ ಬಳಕೆ ಮಾಡಿದ ಕಾರುಗಳು (Used Cars) ಕೂಡಾ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೊಸ ಕಾರು ಇಲ್ಲವೇ ಬಳಸಿದ ಕಾರುಗಳ ಮಾಲೀಕತ್ವ ಪಡೆದುಕೊಳ್ಳುತ್ತಿದ್ದು, ಬಳಸಿದ ಕಾರುಗಳ ಖರೀದಿ ಪ್ರಕ್ರಿಯೆ ಹೊಸ ಕಾರುಗಳ ಖರೀದಿಗಿಂತಲೂ ತುಸು ಸಂಕೀರ್ಣವಾಗಿದೆ. ಹೀಗಾಗಿ ಬಳಸಿದ ಕಾರುಗಳ ಆಯ್ಕೆಗೂ ಮುನ್ನ ಖರೀದಿದಾರರು ಕೆಲವು ವಿಚಾರಗಳನ್ನು ತಪ್ಪದೇ ತಿಳಿದುಕೊಳ್ಳಬೇಕಾಗುತ್ತದೆ.
ಪ್ರಮುಖ ದಾಖಲೆಗಳ ಪರಿಶೀಲನೆ
ದಾಖಲೆಗಳು ಯಾವುದೇ ರೀತಿಯ ವಾಹನದ ಖರೀದಿ ಪ್ರಕ್ರಿಯೆಯಲ್ಲಿ ಪ್ರಮುಖ ಅಂಶವಾಗಿದೆ. ನಾವು ಹೊಸ ವಾಹನವನ್ನು ಖರೀದಿಸುವಾಗ ನಮಗೆ ದಾಖಲೆಗಳು ಸುಲಭವಾಗಿ ಸಿಗುತ್ತವೆ. ಆದ್ರೆ ಬಳಸಿದ ವಾಹನವನ್ನು ಖರೀದಿಸುವಾಗ ದಾಖಲೆಗಳ ಹಸ್ತಾಂತರದಲ್ಲಿ ಹೀಗಾಗುವುದಿಲ್ಲ. ಕಾರು ಮಾರಾಟಗಾರನು ಕೆಲವು ಪತ್ರಗಳನ್ನು ಹಸ್ತಾಂತರ ಮಾಡುವುದನ್ನು ಮರೆತುಬಿಡಬಹುದು ಅಥವಾ ಉದ್ದೇಶಪೂರ್ವಕವಾಗಿ ಅವುಗಳನ್ನು ನಿಮ್ಮಿಂದ ದೂರವಿಡಬಹುದು. ಹೀಗಾಗಿ ಕಾರಣ ಏನೇ ಇರಲಿ ಬಳಸಿದ ಕಾರನ್ನು ಖರೀದಿಸುವಾಗ ಯಾವ ದಾಖಲೆಗಳನ್ನು ಪಡೆದುಕೊಳ್ಳಬೇಕು ಮತ್ತು ಪರಿಶೀಲಿಸಬೇಕು ಎಂಬುದನ್ನು ನೀವು ತಿಳಿದಿರಬೇಕು.
ನೋಂದಣಿ ಪ್ರಮಾಣಪತ್ರ
ಬಳಸಿದ ಕಾರನ್ನು ಖರೀದಿಸುವಾಗ ನೀವು ಮೊದಲು ಪರಿಶೀಲಿಸಬೇಕಾದ ಪ್ರಮುಖ ದಾಖಲೆ ಅಂದ್ರೆ ಅದು ನೋಂದಣಿ ಪ್ರಮಾಣ ಪತ್ರವಾಗಿದೆ. ಇದು ಕಾರು ಮತ್ತು ಮಾಲೀಕರ ಗುರುತಿನ ಪುರಾವೆಯಾಗಿದ್ದು, ಆರ್‌ಸಿಯಲ್ಲಿ ನೀಡಲಾದ ಮಾಹಿತಿ ಮತ್ತು ಕಾರಿನಲ್ಲಿರುವ ಮಾಹಿತಿ ಹೊಂದಾಣಿಕೆಯಾದರೆ ಮಾತ್ರ ಅದು ಅಸಲಿಯಾಗಿರುತ್ತದೆ. ಆದರೂ ಕೂಡಾ ನಕಲಿ ಆರ್‌ಸಿ ಮೂಲಕ ಮೋಸಗೊಳಿಸುವ ಸಾಧ್ಯತೆಗಳಿದ್ದು, ನಕಲಿ ಆರ್ ಸಿ ನಿಮ್ಮಿಂದ ಪತ್ತೆ ಮಾಡಲು ಸಾಧ್ಯವಿಲ್ಲವಾದರೆ ನುರಿತರಿಂದ ಸಹಾಯ ಪಡೆದುಕೊಳ್ಳಿ.
ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!
ಕಾರು ಖರೀದಿ ದಾಖಲೆ
ಬಳಕೆ ಮಾಡಿದ ಕಾರು ಖರೀದಿ ವೇಳೆ ಖರೀದಿ ದಾಖಲೆ ತಪ್ಪದೇ ಪರಿಶೀಲಿಸಿ. ಇದು ಕಾರಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಹೊಂದಿರುತ್ತದೆ. ಜೊತೆಗೆ ಖರೀದಿ ದಾಖಲೆಯು ಕಾರು ಮಾರಾಟಗಾರನಿಗೆ ಸೇರಿದೆ ಎಂಬುದಕ್ಕೆ ಇದು ಪುರಾವೆಯಾಗಿಯೂ ಕಾರ್ಯನಿರ್ವಹಿಸಲಿದ್ದು, ಮೋಸಹೋಗುವುದನ್ನು ತಪ್ಪಿಸಬಹುದಾಗಿದೆ.
ಕಾರಿನ ವಿಮೆ
ವಾಹನ ವಿಮೆ ಇದೀಗ ಎಲ್ಲಾ ವಾಹನಗಳಿಗೆ ಕಡ್ಡಾಯವಾದ ಶಾಸನಬದ್ಧ ಅವಶ್ಯಕತೆಯಾಗಿದೆ. ಹೀಗಾಗಿ ನೀವು ಮಾರಾಟಗಾರರ ಬಳಿ ಆಯಾ ಕಾರಿನ ವಿಮೆ ಪತ್ರವನ್ನು ತಪ್ಪದೇ ಪರಿಶೀಲನೆ ಮಾಡಿ. ಮತ್ತೊಂದು ಕಾರಣವೆಂದರೆ ಮಾರಾಟಗಾರನು ಯಾವುದೇ ಕ್ಲೈಮ್‌ಗಳನ್ನು ಮಾಡಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡಾ ತಿಳಿಯಲು ಸಹಕಾರಿಯಾಗಿದೆ. ಜೊತೆಗೆ ನೀವು ಖರೀದಿಸುತ್ತಿರುವ ಕಾರು ಅಪಘಾತದಲ್ಲಿ ಸಿಲುಕಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನಿಮಗೆ ತಿಳಿಸುತ್ತದೆ.
ಸೇವಾ ಪುಸ್ತಕ
ಬಳಸಿದ ಕಾರು ಖರೀದಿಸುವ ಮಾರಾಟಗಾರಿಂದ ಪಡೆದುಕೊಳ್ಳಬೇಕಾದ ಮತ್ತೊಂದು ಮುಖ್ಯ ದಾಖಲ ಅಂದ್ರೆ ಅದು ಸೇವ ಪುಸ್ತಕ ಎನ್ನಬಹುದು. ಇದನ್ನು ನೀಲಿ ಪುಸ್ತಕ(ಬ್ಲ್ಯೂ ಬುಕ್) ಎಂದೂ ಸಹ ಕರೆಯಬಹುದಾಗಿದ್ದು, ಸೇವಾ ಪುಸ್ತಕದಲ್ಲಿ ಆ ಕಾರಿನ ಸರ್ವಿಸ್ ಹಿಸ್ಟರಿ ದಾಖಲೆಯಾಗಿರುತ್ತದೆ. ಈ ಮೂಲಕ ನೀವು ಆ ಕಾರು ಸರಿಯಾಗಿ ನಿರ್ವಹಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದುವನ್ನು ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಕಾರಿನ ಪ್ರತಿ ಸರ್ವಿಸ್ ನಲ್ಲೂ ಮೀಟರ್ ರೀಡಿಂಗ್ ದಾಖಲಾಗಿರಲಿದ್ದು, ಇದು ವಾಹನದ ದೂರಮಾಪಕವನ್ನು ಟ್ಯಾಂಪರ್ ಮಾಡಿದ್ದರೆ ಸ್ಪಷ್ಟಪಡಿಸುತ್ತದೆ.
ರಸ್ತೆ ತೆರಿಗೆ ರಸೀದಿ
ಬಳಸಿದ ಕಾರು ಖರೀದಿ ಸಂದರ್ಭದಲ್ಲಿ ರಸ್ತೆ ತೆರಿಗೆ ರಸೀದಿಯನ್ನು ಸಹ ತಪ್ಪದೆ ಪರಿಶೀಲನೆ ಮಾಡಿ. ಒನ್ ಟೈಮ್ ಟ್ಯಾಕ್ಸ್ ಅನ್ನು ಹೊಸದಾಗಿ ಖರೀದಿಸುವ ಸಮಯದಲ್ಲಿಯೇ ಮುಂಗಡವಾಗಿ ಪಾವತಿಸಲಾಗಿರುತ್ತದೆ. ಆದಾಗ್ಯೂ ಆ ರಶೀದಿಯನ್ನು ಪರೀಕ್ಷಿಸಲು ಮರೆಯದಿರಿ, ಯಾಕೆಂದ್ರೆ ಅದು ಇಲ್ಲದಿದ್ದರೆ ಎಲ್ಲಾ ಸಂಗ್ರಹವಾದ ಪೆನಾಲ್ಟಿ ಅನ್ನು ಹೊಸ ಮಾಲೀಕರಿಗೆ ವಿಧಿಸಬಹುದಾಗಿದೆ.
ಇದನ್ನೂ ಓದಿ: ಹೊಸ ಕಾರುಗಳಲ್ಲಿ ಮತ್ತೊಂದು ಕಡ್ಡಾಯ ಸೇಫ್ಟಿ ಫೀಚರ್ಸ್ ಜಾರಿಗೆ ಮುಂದಾದ ಕೇಂದ್ರ ಸರ್ಕಾರ
ನಿರಾಕ್ಷೇಪಣಾ ಪ್ರಮಾಣಪತ್ರ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಾಹನಗಳನ್ನು ಗ್ರಾಹಕರು ಬ್ಯಾಂಕ್‌ಗಳು ನೀಡುವ ಸಾಲದ ಮೇಲೆ ಖರೀದಿಸಲಾಗುತ್ತದೆ. ಆದ್ದರಿಂದ ಕಾರು ಎಲ್ಲಾ ಸಾಲಗಳಿಂದ ಮುಕ್ತವಾಗಿದೆಯೇ? ಎಂಬುವುದನ್ನು ಪರಿಶೀಲಿಸಿ. ಜೊತೆಗೆ ಫೈನಾನ್ಷಿಯರ್ ವಾಹನದ ಮೇಲೆ ಯಾವುದೇ ಕ್ಲೈಮ್ ಹೊಂದಿಲ್ಲ ಎಂಬುವುದನ್ನು ಖಾತ್ರಿಪಡಿಸಿಕೊಳ್ಳಲು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೋಡುವುದು ಒಳ್ಳೆಯದು. ಹಾಗೆಯೇ ನೀವು ಲೋನ್ ಅವಧಿಯನ್ನು ಪೂರ್ಣಗೊಳಿಸದ ವಾಹನವನ್ನು ಖರೀದಿಸುತ್ತಿದ್ದರೆ, ಅದಕ್ಕೆ ಅಗತ್ಯವಾದ ದಾಖಲೆಗಳನ್ನು ತಪ್ಪದೇ ಪಡೆದುಕೊಳ್ಳಿ.
ಇದರೊಂದಿಗೆ ಬಳಸಿ ಕಾರು ಖರೀದಿಸುವಾಗ ಮಾಲಿನ್ಯ ಪ್ರಮಾಣಪತ್ರ, ಕ್ಲಿಯರೆನ್ಸ್ ಸರ್ಟಿಫಿಕೇಟ್ ಜೊತೆ ಆರ್ ಟಿಓ ನಮೂನೆಗಳಾದ 28, 29 30, 32 ಮತ್ತು 35 ಅನ್ನು ಸಹ ನೀವು ತಪ್ಪದೇ ಗಮಿಸಬೇಕಾಗುತ್ತದೆ. ಹೀಗಾಗಿ ಬಳಸಿದ ಕಾರು ಖರೀದಿಸುವಾಗ ಸಾಕಷ್ಟು ಪರಿಶೀಲನೆ ಮಾಡುವ ಅಗತ್ಯವಿದ್ದು, ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಮಾಲೀಕತ್ವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.