ಅಗಸ್ಟ್ 2ಕ್ಕೆ ಬಿಡುಗಡೆಯಾಗಲಿದೆ ಸಖತ್ ಸ್ಟೈಲಿಶ್ ಆಗಿರೋ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ

|

Updated on: Jul 18, 2024 | 5:28 PM

ಸಿಟ್ರನ್ ಇಂಡಿಯಾ ಕಂಪನಿ ತನ್ನ ಬಹುನೀರಿಕ್ಷಿತ ಬಸಾಲ್ಟ್ ವಿಷನ್ ಕೂಪೆ ಎಸ್‌ಯುವಿ ಬಿಡುಗಡೆಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದು, ಹೊಸ ಕಾರನ್ನು ಮುಂದಿನ ತಿಂಗಳು 2ರಂದು ಅಧಿಕೃತವಾಗಿ ಪರಿಚಯಿಸುವ ಸುಳಿವು ನೀಡಿದೆ.

ಅಗಸ್ಟ್ 2ಕ್ಕೆ ಬಿಡುಗಡೆಯಾಗಲಿದೆ ಸಖತ್ ಸ್ಟೈಲಿಶ್ ಆಗಿರೋ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ
ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ
Follow us on

ಭಾರತದಲ್ಲಿ ಸದ್ಯ ಸಿ3, ಇಸಿ3, ಸಿ3 ಏರ್ ಕ್ರಾಸ್ ಮತ್ತು ಸಿ5 ಏರ್ ಕ್ರಾಸ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಸಿಟ್ರನ್ ಇಂಡಿಯಾ (Citroen India) ಕಂಪನಿ ಇದೀಗ 5ನೇ ಕಾರು ಮಾದರಿಯಾಗಿ ಬಸಾಲ್ಟ್ ವಿಷನ್ ಕೂಪೆ ಎಸ್‌ಯುವಿ ಬಿಡುಗಡೆ ಮಾಡುತ್ತಿದೆ. ಹೊಸ ಕೂಪೆ ಎಸ್ ಯುವಿಯು ಸಿ3 ಮತ್ತು ಸಿ3 ಏರ್ ಕ್ರಾಸ್ ಕಾರುಗಳನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಇದು ಮಧ್ಯಮ ಕ್ರಮಾಂಕದ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ನೊಂದಿಗೆ ಆಕರ್ಷಕ ವಿನ್ಯಾಸ ಹೊಂದಿರಲಿದೆ.

ಹೊಸ ಬಸಾಲ್ಟ್ ವಿಷನ್ ಕೂಪೆ ಎಸ್‌ಯುವಿ ಕಾರಿನಲ್ಲಿ ಸಿಟ್ರನ್ ಕಂಪನಿಯು ಸಿ3 ಏರ್ ಕ್ರಾಸ್ ಕಾರಿನಲ್ಲಿರುವಂತೆ ಹಲವು ತಾಂತ್ರಿಕ ಅಂಶಗಳನ್ನು ನೀಡಲಾಗುತ್ತಿದ್ದು, ಇದು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿರಲಿದೆ. ಹೊಸ ಕಾರು 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 110 ಹಾರ್ಸ್ ಪವರ್ ಮತ್ತು 205 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಮೈಲೇಜ್ ನಲ್ಲೂ ಗಮನಸೆಳೆಯಲಿದೆ.

ಬಸಾಲ್ಟ್ ವಿಷನ್ ಕಾರು ಆಕರ್ಷಕವಾದ ಕೂಪೆ ಎಸ್‌ಯುವಿಯ ವಿನ್ಯಸ ಶೈಲಿ ಹೊಂದಿರುವುದರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಗಳಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಎಂಜಿ ಆಸ್ಟರ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ. ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ಬಿಡುಗಡೆ ಮಾಡುತ್ತಿರುವ ಕರ್ವ್ ಕಾರಿಗೂ ಇದು ನೇರ ಪೈಪೋಟಿಯಾಗಲಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ.

ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ ಪ್ರತಿಸ್ಪರ್ಧಿಗಳಿಗೆ ಪೈಪೋಟಿಯಾಗಿ ಎಲ್ಇಡಿ ಹೆಡ್ ಲ್ಯಾಂಪ್ಸ್, ಎಲ್ಇಡಿ ಟೈಲ್ ಲ್ಯಾಂಪ್ಸ್, 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್ ಮತ್ತು ಕೂಪೆ ವಿನ್ಯಾಸಕ್ಕೆ ಪೂರಕವಾದ ಶಾರ್ಕ್ ಫಿನ್ ಆಟೆಂನಾ ಸೇರಿದಂತೆ ಹಲವಾರು ಹೊಸ ಫೀಚರ್ಸ್ ನೀಡುತ್ತಿದೆ. ಹಾಗೆಯೇ ಹೊಸ ಕಾರಿನ ಒಳಾಂಗಣವು ಕೂಡಾ ಸಾಕಷ್ಟು ಸ್ಥಳಾವಕಾಶದೊಂದಿಗೆ ಪ್ರಯಾಣಿಕರಿಗೆ ಪ್ರೀಮಿಯಂ ಚಾಲನಾ ಅನುಭವ ನೀಡಲಿದ್ದು, ಹೊಸ ಕಾರಿನ ಇಂಟಿರಿಯರ್ ಕೂಡಾ ಗಮನಸೆಳೆಯಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 11 ಲಕ್ಷ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಂದ ದಾಖಲೆ ಮೊತ್ತದ ದಂಡ ವಸೂಲಿ

ಕಾರಿನ ಒಳಭಾಗದಲ್ಲಿ ಸಿಟ್ರನ್ ಕಂಪನಿಯು 10.2 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಫೋರ್ಡಿಂಗ್ ವಿಂಗ್ ಮಿರರ್, ಲೆದರ್ ಆಸನಗಳೊಂದಿಗೆ ಫ್ರಂಟ್ ಸೀಟ್ ವೆಂಟೆಲೆಷನ್ ಸಿಸ್ಟಂ ಜೋಡಣೆ ಮಾಡಿದೆ. ಇದರ ಜೊತೆಗೆ ವೆರ್ ಲೆಸ್ ಚಾರ್ಜಿಂಗ್ ಪಾಡ್, ಆಟೋ ಹೆಡ್ ಲ್ಯಾಂಪ್, ಆಟೋ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಸೇರಿ ಹಲವಾರು ಫೀಚರ್ಸ್ ಗಳಿರಲಿವೆ. ಈ ಮೂಲಕ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.