EV Cars: ಎಲೆಕ್ಟ್ರಿಕ್ ಕಾರುಗಳ ಮೈಲೇಜ್ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ..

|

Updated on: Mar 30, 2023 | 8:35 PM

ಎಲೆಕ್ಟ್ರಿಕ್ ಕಾರುಗಳ ಬಳಕೆಯನ್ನ ಮತ್ತಷ್ಟು ಸುಲಭಗೊಳಿಸಲು ಟಾಟಾ ಮೋಟಾರ್ಸ್ ಇವಿ ವಿಭಾಗವು ಕೆಲವು ಮಹತ್ವದ ಸಲಹೆಗಳನ್ನ ಹಂಚಿಕೊಂಡಿದೆ.

ಹೆಚ್ಚುತ್ತಿರುವ ಇಂಧನಗಳ ದರ ಪರಿಣಾಮ ಎಲೆಕ್ಟ್ರಿಕ್ ಕಾರುಗಳ(Electric Cars) ಬೇಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಇವಿ ಕಾರು ಬಳಕೆಯು ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಇವು ಸಾಂಪ್ರಾದಾಯಿಕ ಕಾರುಗಳಿಂತಲೂ ವಿಭಿನ್ನ ಅನುಭವ ನೀಡುತ್ತಿವೆ. ಆದರೆ ಇವಿ ಕಾರುಗಳ ನಿರ್ವಹಣೆ ಕುರಿತಾದ ಕೆಲವು ಗೊಂದಲಗಳು ಇನ್ನು ಹೆಚ್ಚಿನ ಮಟ್ಟದ ಇವಿ ಬಳಕೆಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಇವಿ ಕಾರುಗಳ ಬಳಕೆಯನ್ನ ಮತ್ತಷ್ಟು ಸುಲಭಗೊಳಿಸಲು ಟಾಟಾ ಮೋಟಾರ್ಸ್ ಇವಿ ವಿಭಾಗವು ಕೆಲವು ಮಹತ್ವದ ಸಲಹೆಗಳನ್ನ ಹಂಚಿಕೊಂಡಿದೆ.

ದೇಶಾದ್ಯಂತ ಇವಿ ವಾಹನ ಮಾರಾಟವು ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಇವಿ ವಾಹನಗಳ ವಿಭಾಗದಲ್ಲಿ ಸದ್ಯ ಇವಿ ದ್ವಿಚಕ್ರ ವಾಹನಗಳು ಅಗ್ರಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಇವಿ ಕಾರುಗಳು ಹೆಚ್ಚಿನ ಬೇಡಿಕೆಯಲ್ಲಿವೆ. ಆದರೂ ಕೂಡಾ ಕಾರು ಕಂಪನಿಗಳು ಅಂದುಕೊಂಡಷ್ಟು ಇವಿ ಕಾರುಗಳ ಮಾರಾಟವು ಬೆಳವಣಿಗೆ ಕಾಣುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿದ್ದು, ಇವಿ ಕಾರುಗಳ ಸುಲಭ ನಿರ್ವಹಣೆಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಕೆಲವು ಗ್ರಾಹಕರ ಸ್ನೇಹಿ ಸಲಹೆಗಳನ್ನ ಹಂಚಿಕೊಂಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸಾಕಷ್ಟು ಜನರಿಗೆ ಇವಿ ವಾಹನಗಳ ಖರೀದಿ ಮಾಡುವ ಬಯಕೆ ಇದ್ದರೂ ಇವಿ ಕಾರುಗಳ ದುಬಾರಿ ಬೆಲೆ, ಬ್ಯಾಟರಿ ರೇಂಜ್ ಮತ್ತು ಅವುಗಳ ನಿರ್ವಹಣೆ ವಿಚಾರದಲ್ಲಿರುವ ಗೊಂದಲಗಳಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ಇವಿ ಕಾರುಗಳ ಸುಲಭ ನಿರ್ವಹಣೆಗಾಗಿ ಮತ್ತು ಗ್ರಾಹಕರ ಸ್ನೇಹಿ ಫೀಚರ್ಸ್‌ಗಳ ಮೂಲಕ ಇವಿ ವಾಹನಗಳ ಬಳಕೆಯನ್ನ ಸುಲಭವಾಗಿಸಲು ಟಾಟಾ ಮೋಟಾರ್ಸ್ ಕಂಪನಿಯು ನಿರಂತರವಾಗಿ ಪ್ರಯತ್ನಿಸುತ್ತಿದೆ. ಅದರಲ್ಲೂ ಇವಿ ಕಾರುಗಳು ಆಯಾ ಕಂಪನಿಗಳು ಹೇಳಿದಷ್ಟು ಮೈಲೇಜ್ ಹಿಂದಿರುಗಿಸುವುದಿಲ್ಲ ಎಂಬ ಗ್ರಾಹಕರ ಅಸಮಾಧಾನಕ್ಕೆ ಸ್ಪಷ್ಟನೆ ನೀಡಿದೆ. ಇವಿ ಕಾರುಗಳು ಕಂಪನಿಗಳು ನೀಡುವ ಮೈಲೇಜ್ ಮಾಹಿತಿಯು ARAI ಸಂಸ್ಥೆಯು ಪ್ರಮಾಣಿಕರಿಸಿದ ಮೈಲೇಜ್ ಆಗಿರುತ್ತದೆ. ಆದರೆ ಇದು ನೈಜ ರಸ್ತೆಗಳಲ್ಲಿ ಚಾಲನೆ ಮಾಡಿದಾಗ ಮೈಲೇಜ್ ನಲ್ಲಿ ಸಾಕಷ್ಟು ಬದಲಾವಣೆಗೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣವೆನೆಂದರೆ ಚಾಲಕನ ಚಾಲನಾ ಶೈಲಿ, ರಸ್ತೆಗಳ ಸ್ಥಿತಿಗತಿ ಮತ್ತು ಟ್ರಾಫಿಕ್ ದಟ್ಟಣೆಯನ್ನ ಆಧರಿಸಿ ನಿರ್ಧಾರಗೊಳ್ಳುತ್ತದೆ.

ಇವಿ ಕಾರುಗಳ ಬ್ಯಾಟರಿ ದಕ್ಷತೆ ಹೆಚ್ಚಿಸಲು ಮೊದಲು ಚಾಲನಾ ಶೈಲಿಯನ್ನು ಸುಧಾರಿಸುವ ಅವಶ್ಯಕತೆಯಿದೆ. ಇವಿ ಕಾರುಗಳು ಫಾರ್ವಡ್ ಡ್ರೈವಿಂಗ್ ಸಿಸ್ಟಂ ಹೊಂದಿರುವುದರಿಂದ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗ ಪಡೆದುಕೊಳ್ಳುತ್ತವೆ. ಆದರೆ ನೀವು ಹೊಸ ಇವಿ ಕಾರಿನಲ್ಲಿ ಹೆಚ್ಚಿನ ಮೈಲೇಜ್ ಬಯಸಿದರೆ ಇಕೋ ಮತ್ತು ನಾರ್ಮಲ್ ಮೋಡ್‌ಗಳಲ್ಲಿ ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ ವೇಗ ಹೆಚ್ಚದಂತೆ ಮಧ್ಯಮ ವೇಗದಲ್ಲಿ ಚಾಲನೆ ಮಾಡುವುದು ಉತ್ತಮ ಎನ್ನಬಹುದು. ಹಾಗೆಯೇ ಹೆಚ್ಚಿನ ಮೈಲೇಜ್ ಬಯಸಿದರೆ ಸ್ಪೋರ್ಟ್ಸ್ ಮೋಡ್‌ ಬಳಕೆಯನ್ನ ಕಡಿಮೆ ಮಾಡಬೇಕಾಗುತ್ತದೆ. ಸ್ಪೋರ್ಟ್ಸ್ ಮೋಡ್ ಕಾರು ಚಾಲನೆಯ ವೇಳೆ ನಿಮಗೆ ಹೆಚ್ಚಿನ ಉತ್ಸಾಹವನ್ನು ಕೊಡಬಹುದು. ಆದರೆ ಇದು ಬ್ಯಾಟರಿ ವ್ಯಾಪ್ತಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹೀಗಾಗಿ ನಿಗದಿತ ವೇಗದಲ್ಲಿ ಚಾಲನೆ ಮೂಲಕ ವ್ಯಾಪ್ತಿಯನ್ನು ಹೆಚ್ಚಿಸಬಹುದಾಗಿದೆ.

ಜೊತೆಗೆ ಇವಿ ಕಾರುಗಳಲ್ಲಿ ರೀಜನರೇಟಿವ್ ಅಥವಾ ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕವೂ ಇವಿ ಕಾರುಗಳ ಮೈಲೇಜ್ ಹೆಚ್ಚಿಸಬಹುದಾಗಿದೆ. ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆಯೊಂದಿಗೆ ಬ್ರೇಕಿಂಗ್ ಸಮಯದಲ್ಲಿ ಉತ್ಪತ್ತಿಯಾಗುವ ಚಲನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲಾಗುತ್ತದೆ. ಆಗ ಅಧಿಕ-ವೋಲ್ಟೇಜ್ ಬ್ಯಾಟರಿ ಸ್ವಯಂಚಾಲಿತಲಾಗಿ ಚಾರ್ಜ್ ಆಗಲಿದ್ದು, ಇದು ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಇದರೊಂದಿಗೆ ಇವಿ ಕಾರುಗಳಲ್ಲಿ ಚಾಲನೆ ಮಾಡುವಾಗ ಅವಶ್ಯವಿದ್ದಾಗ ಮಾತ್ರ ಎಸಿ ಸೌಲಭ್ಯ ಬಳಸಿ. ನಿಮ್ಮ ಕಾರಿನಲ್ಲಿ ಆಟೋ ಏರ್‌ ಕಂಡಿಷನರ್ ಸೌಲಭ್ಯವಿದ್ದಲ್ಲಿ ಅದನ್ನು ಇಕೋ ಮೋಡ್‌‌ಗೆ ಬದಲಿಸಿ 24 ರಿಂದ 26 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಿಸಬಹುದಾಗಿದೆ.

ಇನ್ನು ಇವಿ ವಾಹನಗಳಲ್ಲಿನ ಮೈಲೇಜ್ ಪ್ರಮಾಣದ ಮೇಲೆ ಪರಿಣಾಮ ಬೀರುವ ಅಂಶಗಳಲ್ಲಿ ಕಾರಿನ ಚಕ್ರಗಳ ಗಾಳಿಯ ಒತ್ತಡದ ಏರಿಳಿತವು ಕೂಡಾ ಕಾರಣವಾಗುತ್ತದೆ. ಇದಕ್ಕಾಗಿ ಇತ್ತೀಚೆಗೆ ಪ್ರಮುಖ ವಾಹನ ಕಂಪನಿಗಳು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿವೆ. ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೌಲಭ್ಯದಿಂದ ಚಾಲಕನು ಯಾವ ಚಕ್ರದಲ್ಲಿ ಎಷ್ಟು ಪ್ರಮಾಣದ ಗಾಳಿಯ ಒತ್ತಡ ಇದೆ ಎಂಬುವುದನ್ನು ತಿಳಿಯಬಹುದಾಗಿದೆ. ಈ ಮೂಲಕ ಕಾರಿನ ಮೈಲೇಜ್ ತಗ್ಗದ್ದಂತೆ ಎಚ್ಚರವಹಿಸಬಹುದಾಗಿದೆ. ಇದರ ಜೊತೆಗೆ ಹೊಸ ಇವಿ ಕಾರಿನಲ್ಲಿ ಆಯಾ ಕಂಪನಿಗಳು ನೀಡಿರುವ ಅಧಿಕೃತ ವಿದ್ಯುತ್ ಉಪಕರಣಗಳನ್ನ ಮಾತ್ರ ಬಳಸಿ. ಇಲ್ಲವಾದಲ್ಲಿ ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಿಕ್ ಉಪಕರಣಗಳ ಬಳಕೆಯು ಕಾರಿನ ಬ್ಯಾಟರಿ ದಕ್ಷತೆಯನ್ನ ತಗ್ಗಿಸಬಹುದು. ಹೀಗಾಗಿ ಟಾಟಾ ಮೋಟಾರ್ಸ್ ಕಂಪನಿಯು ನೀಡುವ ಕೆಲವು ಸಲಹೆಗಳು ಇವಿ ಕಾರುಗಳ ಬ್ಯಾಟರಿ ದಕ್ಷತೆ ಸುಧಾರಿಸಲು ಸಾಕಷ್ಟು ಸಹಕಾರಿಯಾಗುತ್ತವೆ ಎನ್ನಬಹುದು.

Published On - 8:35 pm, Thu, 30 March 23