Force Gurkha: 7 ಸೀಟರ್ ಸೌಲಭ್ಯದೊಂದಿಗೆ ಹೊಸ ಫೋರ್ಸ್ ಗೂರ್ಖಾ ಬಿಡುಗಡೆ
ಫೋರ್ಸ್ ಮೋಟಾರ್ಸ್ ಕಂಪನಿಯು ತನ್ನ ಗೂರ್ಖಾ ಆಫ್ ರೋಡ್ ಎಸ್ ಯುವಿ ಮಾದರಿಯನ್ನು ಹೊಸ ನವೀಕರಣದೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಫೋರ್ಸ್ ಮೋಟಾರ್ಸ್ (Force Motors) ಕಂಪನಿಯು ತನ್ನ ನವೀಕೃತ ಗೂರ್ಖಾ (Gurkha) ಆಫ್ ರೋಡ್ ಎಸ್ ಯುವಿಯನ್ನು ಭಾರೀ ಬದಲಾವಣೆಯೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು 3 ಡೋರ್ ಮತ್ತು 5 ಡೋರ್ ಆವೃತ್ತಿಗಳಲ್ಲಿ ಪರಿಚಯಿಸಿದೆ. ಗೂರ್ಖಾ ಕಾರಿನ 3 ಡೋರ್ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ರೂ. 16.75 ಲಕ್ಷ ಬೆಲೆ ಹೊಂದಿದ್ದರೆ, 5 ಡೋರ್ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ರೂ. 18 ಲಕ್ಷ ಬೆಲೆ ಹೊಂದಿದೆ.
ಆಫ್ ರೋಡ್ ಎಸ್ ಯುವಿ ವಿಭಾಗದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಹೊಂದಿರುವ ಗೂರ್ಖಾ ಎಸ್ ಯುವಿಯು ಇದೀಗ ಮಹೀಂದ್ರಾ ಥಾರ್ ಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಫೀಚರ್ಸ್ ಗಳೊಂದಿಗೆ ಸಿದ್ದಗೊಂಡಿದೆ. ಗೂರ್ಖಾ ಕಾರಿನ ಎಂಟ್ರಿ ಲೆವಲ್ ಮಾದರಿಯು ಥಾರ್ ಎಂಟ್ರಿ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಇದು ಥಾರ್ 4X4 ಎಂಟ್ರಿ ಲೆವಲ್ ಗಿಂತಲೂ ರೂ. 1.75 ಲಕ್ಷದಷ್ಟು ದುಬಾರಿ ಎನ್ನಿಸಲಿದೆ.
ಗೂರ್ಖಾ ಹೊಸ ಆವೃತ್ತಿಯಲ್ಲಿ ಮತ್ತೊಂದು ಆಕರ್ಷಣೆಯೆಂದರೆ 3 ಡೋರ್ ಆವೃತ್ತಿಯು 5 ಸೀಟರ್ ಸೌಲಭ್ಯ ಹೊಂದಿದ್ದರೆ 5 ಡೋರ್ ಆವೃತ್ತಿಯು 7 ಸೀಟರ್ ಸೌಲಭ್ಯ ಹೊಂದಿದೆ. ಹೀಗಾಗಿ ಹೊಸ ಕಾರನ್ನು ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ಆವೃತ್ತಿಗಳನ್ನು ಖರೀದಿಸಬಹುದಾಗಿದ್ದು, 5 ಸೀಟರ್ ಮಾದರಿಯು ಆಫ್ ರೋಡ್ ಪ್ರಿಯರಿಗೆ ಮತ್ತು 7 ಸೀಟರ್ ಆವೃತ್ತಿಯು ಆಫ್ ರೋಡ್ ಜೊತೆಗೆ ಕುಟುಂಬ ಸಮೇತರಾಗಿ ಪ್ರಯಾಣಿಸುವುದಕ್ಕೂ ಅನುಕೂಲಕರವಾಗಿದೆ.
ಇದನ್ನೂ ಓದಿ: ಕೋಟಿ ಬೆಲೆಯ ಪವರ್ ಫುಲ್ ಐಷಾರಾಮಿ ಕಾರು ಖರೀದಿಸಿದ ‘ಸಿಂಹಪ್ರಿಯಾ’ ಜೋಡಿ
ಹೊಸ ಕಾರಿನಲ್ಲಿ ಫೋರ್ಸ್ ಕಂಪನಿಯು ಮರ್ಸಿಡಿಸ್ ನಿಂದ ಎರವಲು ಪಡೆಯಲಾದ 2.6 ಲೀಟರ್ ಫೋರ್ ಸಿಲಿಂಡರ್ ಪ್ರೇರಿತ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪ್ರೇರಿತ 4X4 ಡ್ರೈವ್ ಸಿಸ್ಟಂನೊಂದಿಗೆ 140 ಹಾರ್ಸ್ ಪವರ್ ಮತ್ತು 320 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹಾಗೆಯೇ ಹೊಸ ಎಂಜಿನ್ ನಲ್ಲಿ ಬಾರಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಆಟೋ ಸ್ಟಾರ್ಟ್-ಸ್ಟಾಪ್ ಸೌಲಭ್ಯ ನೀಡಲಾಗಿದ್ದು, ಇದು ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಇಂಧನ ದಕ್ಷತೆಯನ್ನು ಖಾತ್ರಿ ಪಡಿಸುತ್ತದೆ.
ಇದರೊಂದಿಗೆ ಗೂರ್ಖಾ ಹೊಸ 5 ಡೋರ್ ಆವೃತ್ತಿಯು 3 ಡೋರ್ ಆವೃತ್ತಿಗಿಂತಲೂ 425 ಎಂಎಂ ಹೆಚ್ಚುವರಿ ಉದ್ದಳತೆಯೊಂದಿಗೆ ಉತ್ತಮ ಒಳಾಂಗಣ ಸೌಲಭ್ಯ ಹೊಂದಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಕಾರಿನಲ್ಲಿ 9 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್, ಪವರ್ಡ್ ರಿಯರ್ ವ್ಯೂ ಮಿರರ್ ಗಳು, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟೆಲಿಸ್ಕೋಫಿಕ್ ಸ್ಟೀರಿಂಗ್ ವ್ಹೀಲ್, ರಿಯರ್ ಕ್ಯಾಮೆರಾ ಮತ್ತು 18 ಇಂಚಿನ ಅಲಾಯ್ ವ್ಹೀಲ್ಸ್ ಪಡೆದುಕೊಂಡಿದೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ಇನ್ನು ಫೋರ್ಸ್ ಮೋಟಾರ್ಸ್ ಕಂಪನಿಯು ಹೊಸ ಗೂರ್ಖಾದಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಥಾರ್ ಗೆ ಪೈಟೋಟಿಯಾಗಿ ಹೊಸ ಕಾರಿನಲ್ಲಿ ಫುಲ್ ಮೆಟಲ್ ಬಾಡಿಯೊಂದಿಗೆ ಡ್ಯುಯಲ್ ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ಫುಲ್ ಎಲ್ಇಡಿ ಹೆಡ್ ಲ್ಯಾಂಪ್ಸ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗಿದೆ.