ದೇಶದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಹ್ಯುಂಡೈ ಇಂಡಿಯಾ (Hyundai India) ಕಂಪನಿಯು ತನ್ನ ಬಹುನೀರಿಕ್ಷಿತ ಕ್ರೆಟಾ ಫೇಸ್‌ಲಿಫ್ಟ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಆವೃತ್ತಿಯೊಂದಿಗೆ ಹ್ಯುಂಡೈ ಕಂಪನಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಅನಾವರಣದೊಂದಿಗೆ ಹ್ಯುಂಡೈ ಕಂಪನಿಯು ರೂ. 25 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದೇ ತಿಂಗಳು 16ರಂದು ಹೊಸ ಕಾರಿನ ಬೆಲೆ ಮಾಹಿತಿಯನ್ನು ಬಹಿರಂಗಪಡಿಸಿಲಿದೆ.
ಮಧ್ಯಮ ಗಾತ್ರದ ಕಂಪ್ಯಾಕ್ಟ್ ಎಸ್ ಯುವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕ್ರೆಟಾ ಕಾರು ಮಾದರಿಯು ಭಾರತದಲ್ಲಿ ಬಿಡುಗಡೆಯಾಗಿ 8 ವರ್ಷಗಳ ನಂತರವೂ ಬೇಡಿಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇದೀಗ ಮತ್ತಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.
ಹೊಸ ಕ್ರೆಟಾ ಕಾರು ಮಾದರಿಯು ಇ, ಇಎಕ್ಸ್, ಎಸ್, ಎಸ್(ಒ), ಎಸ್ಎಕ್ಸ್, ಎಸ್ಎಕ್ಸ್ ಟೆಕ್ ಮತ್ತು ಎಸ್ಎಕ್ಸ್(ಒ) ಎನ್ನುವ ಏಳು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಇದರಲ್ಲಿ ರೊಬೊಸ್ಟ್ ಎಮರ್ರಾಡ್ ಪರ್ಲ್, ಫ್ಲೈರಿ ರೆಡ್, ರೇಂಜರ್ ಖಾಕಿ, ಅಬ್ಯಾಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಎನ್ನುವ ಆರು ಮೊನೊ ಟೊನ್ ಬಣ್ಣಗಳ ಆಯ್ಕೆ ಮತ್ತು ಅಟ್ಲಾಸ್ ಗ್ರೇ ಜೊತೆ ಬ್ಲ್ಯಾಕ್ ರೂಫ್ ಹೊಂದಿರುವ ಡ್ಯುಯಲ್ ಟೋನ್ ಆಯ್ಕೆ ಹೊಂದಿದೆ.
ಇದನ್ನೂ ಓದಿ: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಟಾಪ್ 5 ಎಸ್ಯುವಿ ಕಾರುಗಳಿವು!
ಹೊಸ ಕ್ರೆಟಾ ಕಾರು ಮಾದರಿಯು ಇತ್ತೀಚೆಗೆ ಬಿಡುಗಡೆಯಾದ ವೆರ್ನಾ ಮತ್ತು ಟುಸಾನ್ ಕಾರಿನಲ್ಲಿರುವಂತೆ ಹಲವಾರು ಶಾರ್ಪ್ ಎಡ್ಜ್ ವಿನ್ಯಾಸಗಳನ್ನು ಹೊಂದಿದ್ದು, ಬಾಕ್ಸಿ ಡಿಸೈನ್ ನೊಂದಿಗೆ ಆಕರ್ಷಕ ಗ್ರಿಲ್, ಫ್ರಂಟ್ ಬಂಪರ್ ಮತ್ತು ಎಲ್ ಶೇಫ್ ಹೊಂದಿರುವ ಎಲ್ಇಡಿ ಲೈಟ್ಸ್ ಬ್ಯಾಂಡ್ ನೀಡಲಾಗಿದೆ. ಹಾಗೆಯೇ ಹೆಡ್‌ಲ್ಯಾಂಪ್ ಕ್ಲಸ್ಟರ್ ಇದೀಗ ಆಯತಾಕಾರದ ಮತ್ತು ಲಂಬವಾಗಿರುವ ಕ್ವಾಡ್ ಎಲ್‌ಇಡಿ ಲೈಟ್ಸ್ ಗಳನ್ನು ಬಂಪರ್‌ನಲ್ಲಿ ಇರಿಸಲಾಗಿದ್ದು, ಸಮತಲವಾದ ಸ್ಲ್ಯಾಟ್‌ಗಳೊಂದಿಗೆ ಬಂಪರ್‌ನ ಕೆಳಗಿನ ಭಾಗವು ಮೊದಲಿಗಿಂತ ಹೆಚ್ಚು ಆಕರ್ಷಕವಾಗಿದೆ.
ಹಾಗೆಯೇ ಹೊಸ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಗುರುತರ ಬದಲಾವಣೆ ತರಲಾಗಿದ್ದು, ಟೈಲ್‌ಗೇಟ್ ಸಂಪೂರ್ಣವಾಗಿ ಹೊಸ ವಿನ್ಯಾಸದೊಂದಿಗೆ ಸಿದ್ದಗೊಂಡಿದೆ. ಇದರಲ್ಲದೆ ಫುಲ್ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮುಂಭಾಗದ ವಿನ್ಯಾಸವನ್ನು ಅನುಕರಿಸಿದ್ದು, ನಂಬರ್ ಪ್ಲೇಟ್ ವಿಭಾಗವನ್ನು ಮರುವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಹೊಸ ಕಾರಿನ ಬಂಪರ್ ಇದೀಗ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತಿದ್ದು, ಮರುವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ಸ್ ನೀಡಲಾಗಿದೆ.
ಇನ್ನು ಹೊಸ ಕಾರಿನ ಒಳಭಾಗದಲ್ಲೂ ಮಹತ್ವದ ಬದಲಾವಣೆ ಪರಿಚಯಿಸಲಾಗಿದ್ದು, ಆಕರ್ಷಕವಾದ ಡ್ಯಾಶ್ ಬೋರ್ಡ್ ನೊಂದಿಗೆ ಕಿಯಾ ಸೆಲ್ಟೊಸ್ ನಲ್ಲಿರುವಂತೆ 10.25 ಇಂಚಿನ ಕನೆಕ್ಟೆಡ್ ಸ್ಕ್ರೀನ್, ಮರುವಿನ್ಯಾಸಗೊಳಿಸಲಾದ ಎಸಿ ವೆಂಟ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೊಲ್ ಸೌಲಭ್ಯಗಳನ್ನು ನೀಡಲಾಗಿದೆ.
ಕ್ರೆಟಾ ಹೊಸ ಆವೃತ್ತಿಯಲ್ಲಿ ಹ್ಯುಂಡೈ ಕಂಪನಿಯು ಈ ಹಿಂದಿನ 1.5 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮುಂದುವರೆಸಲಿದ್ದು, ಹೊಸದಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಪರಿಚಯಿಸುತ್ತಿದೆ. ಟರ್ಬೊ ಪೆಟ್ರೋಲ್ ಮಾದರಿಯು 160 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದೆ.
ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಬೆಸ್ಟ್ ಮೈಲೇಜ್ ಸಿಎನ್ಜಿ ಕಾರುಗಳಿವು!
ಹ್ಯುಂಡೈ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಹೊಸ ಕಾರುಗಳ ಸುರಕ್ಷತೆಯಲ್ಲಿ ಸಾಕಷ್ಟು ಗಮನಸೆಳೆಯುತ್ತಿದ್ದು, ಇದೀಗ ಕ್ರೆಟಾ ಹೊಸ ಆವೃತ್ತಿಯನ್ನು ಹಲವಾರು ಸೇಫ್ಟಿ ಫೀಚರ್ಸ್ ಜೋಡಣೆ ಮಾಡಿದೆ. ಹೊಸ ಕಾರಿನಲ್ಲಿ ಸಂಭಾವ್ಯ ಅಪಘಾತಗಳನ್ನು ತಡೆಯಬಲ್ಲ ಅಡ್ವಾನ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗಿದ್ದು, ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಆರ್ ಏರ್ ಬ್ಯಾಗ್ ಗಳು ಮತ್ತು 360 ಡಿಗ್ರಿ ಕ್ಯಾಮೆರಾ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಹೊಸ ಕಾರು ತುಸು ದುಬಾರಿ ಬೆಲೆ ಹೊಂದಿರಲಿದ್ದು, ಇದು ಕಿಯಾ ಸೆಲ್ಟೊಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಹೋಂಡಾ ಎಲಿವೇಟ್, ಫೋಕ್ಸ್ ವ್ಯಾಗನ್ ಟೈಗುನ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.
Published On - 4:55 pm, Tue, 2 January 24