Hyundai Verna: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹ್ಯುಂಡೈ ವೆರ್ನಾ

|

Updated on: Oct 04, 2023 | 2:19 PM

ಹ್ಯುಂಡೈ ಇಂಡಿಯ ಕಂಪನಿಯು ಹೊಸ ಕಾರುಗಳ ಸುರಕ್ಷಾ ವಿಚಾರದಲ್ಲಿ ಗ್ರಾಹಕರ ಗಮನಸೆಳೆಯುತ್ತಿದ್ದು, ಹೊಸ ತಲೆಮಾರಿನ ವೆರ್ನಾ ಸೆಡಾನ್ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದೆ.

Hyundai Verna: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹ್ಯುಂಡೈ ವೆರ್ನಾ
ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹ್ಯುಂಡೈ ವೆರ್ನಾ
Follow us on

ದೇಶದ ಎರಡನೇ ಅಗ್ರ ಕಾರು ಉತ್ಪಾದನಾ ಕಂಪನಿಯಾಗಿರುವ ಹ್ಯುಂಡೈ ಇಂಡಿಯಾ(Hyundai India) ತನ್ನ ಹೊಸ ತಲೆಮಾರಿನ ವೆರ್ನಾ ಸೆಡಾನ್ ಮಾದರಿಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ಭರ್ಜರಿ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಐಷಾರಾಮಿ ಲುಕ್ ಹೊಂದಿರುವ ಹೊಸ ವೆರ್ನಾ ಕಾರು ಗುಣಮಟ್ಟದ ಉತ್ಪಾದನೆಯೊಂದಿಗೆ ಹೆಚ್ಚಿನ ಮಟ್ಟದ ಸೇಫ್ಟಿ ಫೀಚರ್ಸ್ ಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದೆ.

ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ(Global-NCAP) ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಹೊಸ ತಲೆಮಾರಿನ ವೆರ್ನಾ ಕಾರು ಮಾದರಿಯು 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ನೀಡಲಾಗುವ 34 ಅಂಕಗಳಲ್ಲಿ ವೆರ್ನಾ ಕಾರು 28.18 ಅಂಕಗಳನ್ನು ಗಳಿಸಿದರೆ ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ ಒಟ್ಟು 49 ಅಂಕಗಳಿಗೆ 42 ಅಂಕಗಳನ್ನು ಪಡೆದುಕೊಂಡಿದೆ. ಇದರ ಜೊತೆಗೆ ಹೊಸ ಕಾರಿನಲ್ಲಿರುವ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸಿಸ್ಟಂ ಕೂಡಾ ಉತ್ತಮ ಪ್ರದರ್ಶನ ತೋರಿದ್ದು, ತುರ್ತು ಸಂದರ್ಭಗಳಲ್ಲಿ ವೇಗದಲ್ಲಿರುವ ಕಾರು ಯಾವುದೇ ರೀತಿಯಲ್ಲೂ ನಿಯಂತ್ರಣ ಕಳೆದುಕೊಳ್ಳದೆ ಕೆಲವೇ ಸೆಕೆಂಡುಗಳಲ್ಲಿ ಚಾಲಕನ ನಿಯಂತ್ರಣಕ್ಕೆ ನಿಯಂತ್ರಣದಲ್ಲಿರುತ್ತದೆ.

ಈ ಮೂಲಕ ಹೊಸ ಕಾರು 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್ ವ್ಯಾಗನ್ ವರ್ಟಸ್ ಸೆಡಾನ್ ಕಾರುಗಳಿಗೆ ಸಮನಾದ ಸುರಕ್ಷತೆಯನ್ನು ಖಾತ್ರಿಪಡಿಸಲಿದ್ದು, ಕ್ರ್ಯಾಶ್ ಟೆಸ್ಟಿಂಗ್ ಫಲಿತಾಂಶವು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ಬೇಡಿಕೆ ದಾಖಲಿಸಲು ನೆರವಾಗಲಿದೆ.

ಇದನ್ನೂ ಓದಿ: ಹಳೆಯ ವಾಹನಗಳಿಗೆ ಗುಡ್ ಬೈ ಹೇಳಲು ಬೆಂಗಳೂರಿನಲ್ಲಿ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಆರಂಭ

ಇನ್ನು ವೆರ್ನಾ ಸೆಡಾನ್ ಹೊಸ ತಲೆಮಾರಿನ ಆವೃತ್ತಿಯನ್ನ ಹ್ಯುಂಡೈ ಕಂಪನಿಯು ಈ ಬಾರಿ ಭಾರೀ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಇಎಕ್ಸ್, ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್ ಆಪ್ಷನ್ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಆರಂಭಿಕ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10.90 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 17.38 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ಸೆಡಾನ್ ಕಾರು ಸ್ಪೋರ್ಟಿ ಲುಕ್ ಹೊಂದಿರುವ ಮುಂಭಾಗದ ವಿನ್ಯಾಸದೊಂದಿಗೆ ಎಲ್ಇಡಿ ಸೆಟಪ್ ಹೊಂದಿದೆ. ಜೊತೆಗೆ ಹೊಸ ಕಾರಿನ ಒಳಭಾಗವು ಕೂಡಾ ಆಕರ್ಷಕವಾಗಿದ್ದು, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಬ್ಲೂಟೂಥ್ ಕನೆಕ್ಟಿವಿಟಿ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಸನ್ ರೂಫ್, ವೆಂಟಿಲೆಟೆಡ್ ಸೀಟ್ ಮತ್ತು ಬಿಡ್ಜ್ ಬ್ಲ್ಯಾಕ್ ಇಂಟಿರಿಯರ್ ಪಡೆದುಕೊಂಡಿದೆ. ಹಾಗೆಯೇ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಇದರಲ್ಲಿ ಆರು ಏರ್ ಬ್ಯಾಗ್, ಇಬಿಡಿ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೌಲಭ್ಯಗಳನ್ನ ಜೋಡಿಸಲಾಗಿದೆ. ಇದರೊಂದಿಗೆ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಹಲವು ಸುರಕ್ಷಾ ಸೌಲಭ್ಯಗಳನ್ನ ಒಳಗೊಂಡಿರುವ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಇರಲಿದೆ. ಇದು ಫ್ರಂಟ್ ಅಂಡ್ ರಿಯರ್ ಕ್ಯಾಮೆರಾ ಮತ್ತು ರಡಾರ್ ಸೌಲಭ್ಯದೊಂದಿಗೆ ಸಂಭಾವ್ಯ ಅಪಘಾತಗಳನ್ನ ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಹೊಸ ಕಾರುಗಳಿವು!

ಇನ್ನು ಹೊಸ ವೆರ್ನಾ ಹೊಸ ಆವೃತ್ತಿಯಲ್ಲಿ ಹ್ಯುಂಡೈ ಕಂಪನಿ ಈ ಬಾರಿ ಡೀಸೆಲ್ ಎಂಜಿನ್ ಆಯ್ಕೆಯನ್ನ ಸ್ಥಗಿತಗೊಳಿಸಿದ್ದು, ಎರಡು ಮಾದರಿಯ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಿದೆ. ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ರಿಯಲ್ ಡ್ರೈವಿಂಗ್ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಹೊಸ ಎಂಜಿನ್ ಜೋಡಣೆ ಮಾಡಲಾಗಿದೆ. ಇದರಲ್ಲಿ ಈ ಹಿಂದಿನಂತೆ 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಮುಂದುವರಿಸಲಾಗಿದ್ದು, ಹೊಸದಾಗಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪರಿಚಯಿಸಲಾಗಿದೆ.