ಅತಿಹೆಚ್ಚು ವಾಹನ ಕಳ್ಳತನ ಪ್ರಕರಣಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಕೂಡಾ ಒಂದಾಗಿದ್ದು, ಹಲವು ಪ್ರಕರಣಗಳಲ್ಲಿ ಕಳ್ಳತನವಾದ ವಾಹನಗಳು ಪತ್ತೆಯಾಗುವುದು ತುಂಬಾ ವಿರಳ. ಇದಕ್ಕಾಗಿ ಹೊಸ ಕ್ರಮ ಕೈಗೊಂಡಿರುವ ಕರ್ನಾಟಕ ಪೊಲೀಸ್ ಇಲಾಖೆಯು ವಾಹನ ಕಳ್ಳತನ ಪ್ರಕರಣಗಳ ತ್ವರಿತ ತನಿಖೆಗೆ ಸಹಕಾರಿಯಾಗುವಂತೆ ಆನ್ಲೈನ್ ದೂರು ಸಲ್ಲಿಕೆ ವ್ಯವಸ್ಥೆ ಜಾರಿಗೊಳಿಸಿದೆ.
ಕರ್ನಾಟಕ ರಾಜ್ಯೋತ್ಸವ ದಿನದಂದೆ ರಾಜ್ಯ ಪೊಲೀಸ್ ಇಲಾಖೆಯು ನಾಗರಿಕ ಕೇಂದ್ರಿತ ಪೋರ್ಟಲ್ ಪರಿಚಯಿಸಿದ್ದು, ವಾಹನ ಕಳ್ಳತನವಾದ ತಕ್ಷಣವೇ ಪೊಲೀಸರಿಗೆ ಮಾಹಿತಿ ಒದಗಿಸಲು ಹೊಸ ಪೋರ್ಟಲ್ ಸಾಕಷ್ಟು ಸಹಕಾರಿಯಾಗಲಿದೆ.
ವಾಹನಗಳು ಕಳ್ಳತನವಾದ ಮಾಲೀಕರು ಪೊಲೀಸ್ ಠಾಣೆ ತೆರಳಿ ದೂರು ದಾಖಲಿಸಲು ಸಾಕಷ್ಟು ಸಮಯವಾಗುವುದರಿಂದ ತನಿಖೆಯಲ್ಲೂ ವಿಳಂಬವಾಗುತ್ತದೆ. ಹೀಗಾಗಿ ವಾಹನಗಳನ್ನು ಕಳೆದುಕೊಂಡ ಮಾಲೀಕರಿಗೆ ತಕ್ಷಣವೇ ದೂರ ದಾಖಲಿಸಿ ಇ-ಎಫ್ಐಆರ್ ಪಡೆದುಕೊಳ್ಳಲು ಸಹಕಾರಿಯಾಗುವಂತೆ ಹೊಸ ಪೋರ್ಟಲ್ ತೆರೆಯಲಾಗಿದ್ದು, ಹೊಸ ಆನ್ಲೈನ್ ದೂರು ಸೌಲಭ್ಯದ ಕುರಿತಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆನ್ಲೈನ್ ದೂರು ನೀಡುವುದು ಹೇಗೆ?
ರಾಜ್ಯ ಪೊಲೀಸ್ ಇಲಾಖೆಯ https://ksp.karnataka.gov.in/ ಜಾಲತಾಣದ ಮೂಲಕ ನಾಗರಿಕ ಕೇಂದ್ರಿತ ತಾಣದ ಕಾಲಂ ಕ್ಲಿಕ್ ಮಾಡಬೇಕು. ತದನಂತರ ರಾಜ್ಯ ಪೊಲೀಸ್ ಪುಟ ತೆರೆದುಕೊಳ್ಳಲಿದ್ದು, ಇಲ್ಲಿ ಲಾಗಿನ್ ಆಗುವ ಮೂಲಕ ನ್ಯೂ ಟು ಎಸ್ಎಸ್ಒ ಬಟನ್ ಒತ್ತುವ ಮೂಲಕ ಹೊಸದಾಗಿ ಯೂಸರ್ ಮತ್ತು ಪಾಸ್ ವರ್ಡ್ ಸೃಷ್ಠಿಸಬೇಕು. ತದನಂತರ ಕಳ್ಳತನವಾದ ವಾಹನದ ವಿವರಗಳನ್ನು ದಾಖಲಿಸಬೇಕು.
ವಾಹನದ ಸಂಪೂರ್ಣ ಮಾಹಿತಿ ತುಂಬಿದ ನಂತರ ಸಂಬಂಧಪಟ್ಟ ಪೊಲೀಸ್ ಠಾಣೆ ಸೂಚಿಸುತ್ತದೆ. ಎಲ್ಲಾ ದೂರು ದಾಖಲಿಸುವ ಪ್ರಕ್ರಿಯೆ ನಂತರ ಇ-ಎಫ್ಐಆರ್ ಡೌನ್ ಲೋಡ್ ಮಾಡಕೊಳ್ಳಬೇಕಿದ್ದು, ದೂರು ದಾಖಲಿಸಿದ ನಂತರ ವಾಹನ ಮಾಹಿತಿ ಆಧರಿಸಿ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ಆರಂಭಿಸುತ್ತಾರೆ.
ಹೆಚ್ಚಳವಾದ ವಾಹನ ಕಳ್ಳತನ ಪ್ರಕರಣಗಳು
ದೇಶಾದ್ಯಂತ ದಿನಂಪ್ರತಿ ನೂರಾರು ವಾಹನ ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ. ವಾಹನಗಳಲ್ಲಿ ಅದೆಷ್ಟೋ ಹೊಸ ಹೊಸ ಸುರಕ್ಷಾ ತಂತ್ರಜ್ಞಾನಗಳನ್ನು ಅಳವಡಿಸಿದರೂ ಕಳ್ಳತನ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಕಳ್ಳತನವಾಗುವುದಕ್ಕೂ ಮುನ್ನ ಮಾಲೀಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳವುದು ತುಂಬಾ ಮುಖ್ಯವಾದ ವಿಚಾರವಾಗಿದೆ. ವಾಹನ ಕಳ್ಳತನ ತಡೆಗಾಗಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹಲವು ಹೊಸ ಸುರಕ್ಷಾ ಸಾಧನಗಳು ಖರೀದಿಗೆ ಲಭ್ಯವಿದ್ದರೂ ಸುರಕ್ಷಿತ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡಿರುವುದನ್ನು ಖಾತ್ರಿಪಡಿಸಿಕೊಳ್ಳಿ.
Published On - 4:59 pm, Wed, 2 November 22