ಇಟಾಲಿಯನ್ ಸೂಪರ್ ಕಾರು(Super Car) ತಯಾರಕ ಕಂಪನಿಯಾಗಿರುವ ಲ್ಯಾಂಬೋರ್ಗಿನಿ(Lamborghini) ತನ್ನ ಜನಪ್ರಿಯ ಕಾರು ಮಾದರಿಯಾದ ಉರುಸ್(Urus) ಎಸ್ ಯುವಿಯಲ್ಲಿ ಹೊಸದಾಗಿ ಪರ್ಫಾರ್ಮಂಟೆ(Performante) ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 4.22 ಕೋಟಿ ಬೆಲೆ ಹೊಂದಿದೆ. ಹೊಸ ಕಾರುಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಹೊಂದಿದ್ದು, ಭಾರತದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಭಾರತದಲ್ಲಿ ಪ್ರಮುಖ ಕಾರು ಮಾದರಿಗಳೊಂದಿಗೆ ಸೂಪರ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಲ್ಯಾಂಬೋರ್ಗಿನಿ ಕಂಪನಿಯು ಉರುಸ್ ಎಸ್ ಯುವಿ ಮಾರಾಟದಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿದೆ. ದೇಶಿಯ ಮಾರುಕಟ್ಟೆಯಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಯುನಿಟ್ ಮಾರಾಟ ದಾಖಲೆ ಹೊಂದಿರುವ ಉರುಸ್ ಎಸ್ ಯುವಿಯು ಇದೀಗ ಪರ್ಫಾಮೆನ್ಸ್ ಪ್ರಿಯರ ಬಹುನೀರಿಕ್ಷಿತ ಪರ್ಫಾರ್ಮಂಟೆ ಎಡಿಷನ್ ಪಡೆದುಕೊಂಡಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಉರುಸ್ ಪರ್ಫಾರ್ಮಂಟೆ ಎಡಿಷನ್ ನಲ್ಲಿ ಲ್ಯಾಂಬೋರ್ಗಿನಿ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿನ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಬಳಕೆ ಮಾಡಿದ್ದು, 8-ಸ್ಪೀಡ್ ಆಟೋ ಗೇರ್‌ಬಾಕ್ಸ್ ನೊಂದಿಗೆ 657 ಹಾರ್ಸ್ ಪವರ್, 850 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದು ಸಾಮಾನ್ಯ ಮಾದರಿಗಿಂತ ಹೆಚ್ಚುವರಿಯಾಗಿ 16 ಹಾರ್ಸ್ ಪವರ್ ಉತ್ಪಾದಿಸಲಿದ್ದು, ಜೊತೆಗೆ ಮೂರು ಹೊಸ ಡ್ರೈವ್ ಮೋಡ್ ಪಡೆದುಕೊಂಡಿದೆ.
ಹೊಸ ಆವೃತ್ತಿಯಲ್ಲಿ ಪರ್ಫಾಮೆನ್ಸ್ ಹೆಚ್ಚಳಕ್ಕಾಗಿ ಸಾಮಾನ್ಯ ಮಾದರಿಗಿಂತ 47 ಕೆ.ಜಿ ಯಷ್ಟು ತೂಕ ಇಳಿಕೆ ಮಾಡಲಾಗಿದ್ದು, ಕಾರಿನ ತೂಕ ಇಳಿಕೆಗಾಗಿ ಪ್ರಮುಖ ಕಡೆಗಳಲ್ಲಿ ಅಲ್ಯುಮಿನಿಯಂ ಬದಲಾಗಿ ಕಾರ್ಬನ್ ಫೈಬರ್ ಬಿಡಿಭಾಗಗಳನ್ನು ಬಳಕೆ ಮಾಡಲಾಗಿದೆ. ಹೀಗಾಗಿ ಕಾರಿನ ಪರ್ಫಾಮೆನ್ಸ್ ಸುಧಾರಣೆಗೆ ಪ್ರಮುಖ ಕಾರಣವಾಗಿದ್ದು, 3.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ಮತ್ತು ಪ್ರತಿ ಗಂಟೆಗೆ 306 ಕಿ.ಮೀ ಟಾಪ್ ಸ್ಪೀಡ್ ತಲುಪುತ್ತದೆ.
ಮತ್ತೊಂದು ವಿಶೇಷ ಅಂದ್ರೆ, ಹೊಸ ಕಾರಿನಲ್ಲಿ ಕಂಪನಿಯು ಈ ಬಾರಿ ಸಾಮಾನ್ಯ ಮಾದರಿಗಿಂತಲೂ ವಿಭಿನ್ನವಾಗಿಸಲು ಏರ್ ಸಸ್ಷೆಷನ್ ಬದಲಾಗಿ ಕಾಯಿಲ್ ಸ್ಪೀಂಗ್ ಸಸ್ಷೆಷನ್ ಬಳಕೆ ಮಾಡಲಾಗಿದ್ದು, ಹೊಸದಾಗಿ ರ್ಯಾಲಿ ಡ್ರೈವ್ ಮೋಡ್ ನೀಡಲಾಗಿದೆ. ರ್ಯಾಲಿ ಮೋಡ್ ನಲ್ಲಿ ಸ್ಟ್ರೀಟ್, ಸ್ಪೋರ್ಟ್ ಮತ್ತು ಟ್ರ್ಯಾಕ್ ಮೋಡ್ ನೀಡಲಾಗಿದ್ದು, ಪರ್ಫಾಮೆನ್ಸ್ ಗಾಗಿ 23 ಇಂಚಿನ ಅಲಾಯ್ ವ್ಹೀಲ್ ಜೊತೆ ಪಿರೆಲ್ಲಿ ಪಿ ಜಿರೋ ಟ್ರೊಫಿಯೊ ಆರ್ ಟೈರ್ ಜೋಡಣೆ ಮಾಡಲಾಗಿದೆ.
ಡಿಸೈನ್ ಮತ್ತು ಫೀಚರ್ಸ್
ಹೊಸ ಉರುಸ್ ಪರ್ಫಾರ್ಮಂಟೆ ಎಡಿಷನ್ ಸ್ಟ್ಯಾಂಡರ್ಡ್ ಮಾದರಿಗಿಂತ ತುಸು ವಿಭಿನ್ನವಾದ ಡಿಸೈನ್ ಹೊಂದಿದ್ದು, ಕೂಲಿಂಗ್ ವೆಂಟ್ಸ್, ಫ್ರಂಟ್ ಬಂಪರ್ ಮತ್ತು ರಿಯರ್ ಬಂಪರ್ ಗಳಲ್ಲಿ ಸ್ಪೋರ್ಟಿ ಡಿಸೈನ್ ನೀಡಲಾಗಿದೆ. ಹಾಗೆಯೇ ಪರ್ಫಾರ್ಮಂಟೆ ಬ್ಯಾಡ್ಜ್, ಕಾರಿನ ಒಳಭಾಗದಲ್ಲಿ ಹೆಕ್ಸಾಗೊನೊಗಲ್ ಶೈಲಿಯ ಆಸನಗಳು, ಮ್ಯಾಟೆ ಬ್ಲ್ಯಾಕ್ ಫಿನಿಷ್ ನೊಂದಿಗೆ ಹಲವಾರು ಕಡೆಗಳಲ್ಲಿ ಆಕ್ಸೆಂಟ್ಸ್ ನೀಡಲಾಗಿದೆ.
ಹಾಗೆಯೇ ಹೊಸ ಮಾದರಿಯು ಸಾಮಾನ್ಯ ಮಾದರಿಗಿಂತಲೂ 20 ಎಂಎಂ ಕಡಿಮೆ ಎತ್ತರ ಹೊಂದಿದ್ದರೆ ಹೆಚ್ಚುವರಿಯಾಗಿ 16 ಎಂಎಂ ಅಗಲ ಮತ್ತು 25 ಎಂಎಂ ಎತ್ತರವಾಗಿದೆ. ಈ ಮೂಲಕ ಹೊಸ ಕಾರು ಆಡಿ ಆರ್ ಎಸ್ ಕ್ಯೂ8, ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಮತ್ತು ಮಸೆರಾಟಿ ಲ್ಯಾವೆಂಟೆ ಟ್ರೊಫಿಯೋ ಸೂಪರ್ ಎಸ್ ಯುವಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.
Published On - 2:28 pm, Tue, 29 November 22